ಮೆಲ್ಬರ್ನ್‌(ಡಿ.26): ಟೀಂ ಇಂಡಿಯಾ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದ ಆತಿಥೇಯ ಆಸ್ಟ್ರೇಲಿಯಾ ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯದಲ್ಲಿ ಕೇವಲ 195 ರನ್‌ಗಳಿಗೆ ಸರ್ವಪತನ ಕಂಡಿದೆ.

ಜಸ್ಪ್ರೀತ್ ಬುಮ್ರಾ ಹಾಗೂ ರವಿಚಂದ್ರನ್ ಅಶ್ವಿನ್ ದಾಳಿಗೆ ಆಸ್ಟ್ರೇಲಿಯಾ ಬೌಲರ್‌ಗಳು ತರಗೆಲೆಗಳಂತೆ ತತ್ತರಿಸಿ ಹೋದರು. ಆಸ್ಟ್ರೇಲಿಯಾದ ಯಾವೊಬ್ಬ ಬ್ಯಾಟ್ಸ್‌ಮನ್‌ಗಳು ಅರ್ಧಶತಕ ಬಾರಿಸಲು ಯಶಸ್ವಿಯಾಗಲಿಲ್ಲ. ಮಾರ್ನಸ್ ಲಬುಶೇನ್ 48 ರನ್ ಬಾರಿಸಿದ್ದೇ ಆಸ್ಟ್ರೇಲಿಯಾ ಪರ ಗರಿಷ್ಟ ವಯುಕ್ತಿಕ ಸ್ಕೋರ್ ಎನಿಸಿತು.

ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೈನ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಮ್ಯಾಥ್ಯೂ ವೇಡ್(30), ಮಾರ್ನಸ್ ಲಬುಶೇನ್‌(48), ತ್ರಾವಿಸ್ ಹೆಡ್(38) ಹೊರತುಪಡಿಸಿದಂತೆ ಉಳಿದ್ಯಾವ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳು ಟೀಂ ಇಂಡಿಯಾ ಎದುರು ಪ್ರತಿರೋಧ ತೋರಲು ಯಶಸ್ವಿಯಾಗಲಿಲ್ಲ.

ವಿಕೆಟ್‌ ಖಾತೆ ತೆರೆದ ಸಿರಾಜ್; ಭಾರತದ ಹಿಡಿತದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್

ಭಾರತ ಪರ ಜಸ್ಪ್ರೀತ್ ಬುಮ್ರಾ 56 ರನ್ ನೀಡಿ 4 ವಿಕೆಟ್ ಪಡೆದರೆ, ಆರ್. ಅಶ್ವಿನ್‌ 35ಕ್ಕೆ 3 ವಿಕೆಟ್‌ ಉರುಳಿಸಿದರು. ಇನ್ನು ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ ಒಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ಆಸ್ಟ್ರೇಲಿಯಾ: 195/10(ಮೊದಲ ಇನಿಂಗ್ಸ್‌)
ಮಾರ್ನಸ್ ಲಬುಶೇನ್: 48
ಜಸ್ಪ್ರೀತ್ ಬುಮ್ರಾ: 56/4