ಮೆಲ್ಬರ್ನ್(ಡಿ.26): ಆಸ್ಟ್ರೇಲಿಯಾ ವಿರುದ್ದ ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯದ ಮೊದಲ ಸೆಷನ್‌ನಲ್ಲಿ 3 ವಿಕೆಟ್‌ ಕಬಳಿಸಿದ್ದ ಟೀಂ ಇಂಡಿಯಾ ಚಹಾ ವಿರಾಮದ ವೇಳೆಗೆ ಮತ್ತೆರಡು ವಿಕೆಟ್‌ ಕಬಳಿಸುವ ಮೂಲಕ ಕಾಂಗರೂ ಪಡೆ ಎದುರು ಭಾರತ ಬಿಗಿ ಹಿಡಿತ ಸಾಧಿಸಿದೆ.

ಮೊದಲ ಸೆಷನ್‌ನಲ್ಲಿ 3 ವಿಕೆಟ್ ಕಳೆದುಕೊಂಡು 65 ರನ್ ಬಾರಿಸಿದ್ದ ಆಸ್ಟ್ರೇಲಿಯಾ ತಂಡಕ್ಕೆ 4ನೇ ವಿಕೆಟ್‌ಗೆ ಮಾರ್ನಸ್ ಲಬುಶೇನ್ ಹಾಗೂ ತ್ರಾವಿಸ್ ಹೆಡ್ ಜೋಡಿ 86 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 120ರ ಗಡಿ ದಾಟಿಸಿದರು. ಉತ್ತಮವಾಗಿ ಆಡುತ್ತಿದ್ದ ಹೆಡ್ 38 ರನ್‌ ಬಾರಿಸಿ ಬುಮ್ರಾ ಬೌಲಿಂಗ್‌ನಲ್ಲಿ ನಾಯಕ ರಹಾನೆಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. 

ಬಾಕ್ಸಿಂಗ್ ಡೇ ಟೆಸ್ಟ್‌: ಆರಂಭದಲ್ಲೇ ಕಾಂಗರೂ ಪಡೆಗೆ ಭಾರತ ಪಂಚ್

ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಕೆಟ್ ಖಾತೆ ತೆರೆದ ಸಿರಾಜ್‌: ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಮೊಹಮ್ಮದ್ ಸಿರಾಜ್ ಆಸ್ಟ್ರೇಲಿಯಾದ ಮಾರ್ನಸ್ ಲಬುಶೇನ್ ಅವರ ಅಮೂಲ್ಯ ವಿಕೆಟ್ ಕಬಳಿಸುವ ಮೂಲಕ ವಿಕೆಟ್ ಖಾತೆ ತೆರೆದಿದ್ದಾರೆ. ನೆಲಕಚ್ಚಿ ಆಡುತ್ತಿದ್ದ ಲಬುಶೇನ್‌ 132 ಎಸೆತಗಳನ್ನು ಎದುರಿಸಿ 4 ಬೌಂಡರಿ ಸಹಿತ 48 ರನ್‌ ಬಾರಿಸಿದ್ದರು. ಈ ವೇಳೆ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಮತ್ತೋರ್ವ ಟೀಂ ಇಂಡಿಯಾ ಕ್ರಿಕೆಟಿಗ ಶುಭ್‌ಮನ್‌ ಗಿಲ್‌ ಹಿಡಿದ ಅದ್ಭುತ ಕ್ಯಾಚ್‌ಗೆ ಲಬುಶೇನ್‌ ಪೆವಿಲಿಯನ್ ಸೇರಬೇಕಾಯಿತು.

ಚಹಾ ವಿರಾಮದ ವೇಳೆಗೆ ಆಸ್ಟ್ರೇಲಿಯಾ ತಂಡ 5 ವಿಕೆಟ್ ಕಳೆದುಕೊಂಡು 136 ರನ್ ಬಾರಿಸಿದ್ದು, ನಾಯಕ ಟಿಮ್ ಪೈನ್(0) ಹಾಗೂ ಕ್ಯಾಮರೋನ್ ಗ್ರೀನ್(6) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಈ ಇಬ್ಬರ ವಿಕೆಟ್ ಬೇಗನೇ ಕಬಳಿಸಿದರೆ ಆಸ್ಟ್ರೇಲಿಯಾ ತಂಡವನ್ನು ಟೀಂ ಇಂಡಿಯಾ ಅಲ್ಪಮೊತ್ತಕ್ಕೆ ಕಟ್ಟಿಹಾಕಬಹುದಾಗಿದೆ.