ಪರ್ತ್ ಟೆಸ್ಟ್‌ ಪಂದ್ಯದ ಮೊದಲ ದಿನವೇ ಬರೋಬ್ಬರಿ 17 ವಿಕೆಟ್ ಪತನವಾಗಿವೆ. ಮೇಲ್ನೋಟಕ್ಕೆ ಭಾರತ ಮೊದಲ ದಿನದಾಟದ ಗೌರವ ಪಡೆದಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಪರ್ತ್: ವೇಗಿಗಳ ಪಾಲಿನ ಸ್ವರ್ಗ ಎನ್ನುವಂತೆ ಭಾಸವಾಗುತ್ತಿರುವ ಪರ್ತ್ ಪಿಚ್‌ನಲ್ಲಿ ಬೌಲರ್‌ಗಳ ಭರ್ಜರಿ ಪ್ರದರ್ಶನ ತೋರಿದ್ದು, ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್‌ನ ಮೊದಲ ದಿನವೇ ದಾಖಲೆಯ 17 ವಿಕೆಟ್‌ಗಳು ಪತನವಾಗಿವೆ. ಟಾಸ್ ಗೆದ್ದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 150 ರನ್‌ಗಳಿಗೆ ಸರ್ವಪತನ ಕಂಡರೆ, ಆತಿಥೇಯ ಆಸ್ಟ್ರೇಲಿಯಾ ತಂಡವು ಬುಮ್ರಾ ಮಾರಕ ದಾಳಿಗೆ ತತ್ತರಿಸಿ ಮೊದಲ ದಿನದಾಟದಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 67 ರನ್ ಗಳಿಸಿದೆ. ಈ ಮೂಲಕ ಕಾಂಗರೂ ಪಡೆ ಇನ್ನೂ 83 ರನ್‌ಗಳ ಹಿನ್ನಡೆಯಲ್ಲಿದೆ.

ಪರ್ತ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿತು. ಕಾಂಗರೂ ವೇಗಿಗಳ ಮಾರಕ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ಅಗ್ರಕ್ರಮಾಂಕದ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್ ಹಾಗೂ ದೇವದತ್ ಪಡಿಕ್ಕಲ್ ಶೂನ್ಯ ಸುತ್ತಿದರೆ, ಕೆ ಎಲ್ ರಾಹುಲ್ 26 ರನ್ ಗಳಿಸಿದರು. ವಿರಾಟ್ ಕೊಹ್ಲಿ ಬ್ಯಾಟಿಂಗ್ ಕೇವಲ 5 ರನ್‌ಗಳಿಗೆ ಸೀಮಿತವಾಯಿತು.

IPL 2025 ಮಹತ್ವದ ವೇಳಾಪಟ್ಟಿ ಪ್ರಕಟ; ಫೈನಲ್‌ ಪಂದ್ಯದ ಡೇಟ್ ಫಿಕ್ಸ್! ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಇನ್ನು ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್ ಅಮೂಲ್ಯ 37 ರನ್ ಬಾರಿಸಿದರೆ, ಕೊನೆಯಲ್ಲಿ ನಿತಿಶ್ ರೆಡ್ಡಿ ಸಮಯೋಚಿತ 41 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ಮುಟ್ಟಿಸುವಲ್ಲಿ ಯಶಸ್ವಿಯಾಗಿದರು. ಪಾದಾರ್ಪಣೆ ಪಂದ್ಯವನ್ನಾಡಿದ ನಿತಿಶ್ ರೆಡ್ಡಿ ತಮ್ಮ ಸೊಗಸಾದ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಚಚ್ಚಿದರು.

Scroll to load tweet…

ಇನ್ನು ಆಸೀಸ್ ಪರ ಶಿಸ್ತುಬದ್ದ ದಾಳಿ ನಡೆಸಿದ ವೇಗಿ ಜೋಶ್ ಹೇಜಲ್‌ವುಡ್ 29 ರನ್ ನೀಡಿ 4 ವಿಕೆಟ್ ಪಡೆದರೆ, ಮಿಚೆಲ್ ಸ್ಟಾರ್ಕ್, ಮಿಚೆಲ್ ಮಾರ್ಷ್ ಹಾಗೂ ಪ್ಯಾಟ್ ಕಮಿನ್ಸ್ ತಲಾ ಎರಡು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.

ಇನ್ನು ಟೀಂ ಇಂಡಿಯಾ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದ ನಂತರ ಬೃಹತ್ ಮುನ್ನಡೆ ಸಾಧಿಸುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದ ಆಸ್ಟ್ರೇಲಿಯಾ ತಂಡ ಕೂಡಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಜಸ್ಪ್ರೀತ್ ಬುಮ್ರಾ ಮಾರಕ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ 38 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಐವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದರು. ಖವಾಜ(8), ಲಬುಶೇನ್(2), ಸ್ಟೀವ್ ಸ್ಮಿತ್(0), ಮಿಚೆಲ್ ಮಾರ್ಷ್(6) ಹಾಗೂ ನಾಯಕ ಪ್ಯಾಟ್ ಕಮಿನ್ಸ್‌(3) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.

ವಿರಾಟ್ ಕೊಹ್ಲಿ ಬ್ಯಾಟ್‌ಗೆ ಆಸ್ಟ್ರೇಲಿಯಾದಲ್ಲಿ ಇಷ್ಟೊಂದು ರೇಟಾ?

ಸದ್ಯ ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ ಅಜೇಯ 19 ರನ್ ಸಿಡಿಸಿದ್ದು, ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮತ್ತೊಂದು ತುದಿಯಲ್ಲಿ ಮಿಚೆಲ್ ಸ್ಟಾರ್ಕ್ 6 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ.

ಟೀಂ ಇಂಡಿಯಾ ಪರ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ನಾಯಕರಾಗಿರುವ ಜಸ್ಪ್ರೀತ್ ಬುಮ್ರಾ 17 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಮತ್ತೋರ್ವ ವೇಗಿ ಮೊಹಮ್ಮದ್ ಸಿರಾಜ್ 2 ಹಾಗೂ ಪಾದಾರ್ಪಣೆ ಟೆಸ್ಟ್ ಪಂದ್ಯ ಆಡುತ್ತಿರುವ ವೇಗಿ ಹರ್ಷಿತ್ ರಾಣಾ ಒಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ.

1952ರ ಬಳಿಕ ಮೊದಲ ಬಾರಿಗೆ 16+ ವಿಕೆಟ್ ಪತನ: ಆಸ್ಟ್ರೇಲಿಯಾ ನೆಲದಲ್ಲಿ ಒಂದೇ ಬರೋಬ್ಬರಿ 17 ವಿಕೆಟ್ ಪತನದ ಮೂಲಕ ಹೊಸ ದಾಖಲೆ ಸೃಷ್ಟಿಯಾಗಿದೆ. 1952ರಲ್ಲಿ ಕೊನೆಯ ಬಾರಿಗೆ ಟೆಸ್ಟ್‌ ಪಂದ್ಯದಲ್ಲಿ ಒಂದೇ 16 ವಿಕೆಟ್ ಪತನವಾಗಿದ್ದವು. ಆದರೆ ಇದೀಗ ಪರ್ತ್ ಟೆಸ್ಟ್‌ನಲ್ಲಿ ಮೊದಲ ದಿನವೇ 17 ವಿಕೆಟ್ ಪತನವಾಗುವ ಮೂಲಕ ಹೊಸ ದಾಖಲೆ ನಿರ್ಮಾಣವಾದಂತೆ ಆಗಿದೆ.