ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯ ನಡೆದು ಇಂದಿಗೆ 50 ವರ್ಷ!
1974 ನವೆಂಬರ್ 22 ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯ ನಡೆದಿತ್ತು. ಈ ಪಂದ್ಯ ನಡೆದು ಇಂದಿಗೆ 50 ವರ್ಷ ತುಂಬಿವೆ.
- ಕನ್ನಡಪ್ರಭ ವಿಶೇಷ
ಬೆಂಗಳೂರು: ಕರ್ನಾಟಕ ಕ್ರಿಕೆಟ್ ಪಾಲಿನ ‘ಪುಣ್ಯ ಭೂಮಿ’, ವಿಶ್ವದಲ್ಲೇ ಅತ್ಯುತ್ತಮ ಕ್ರೀಡಾಂಗಣಗಳಲ್ಲಿ ಒಂದೆನಿಸಿರುವ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೀಗ 50ರ ಸಂಭ್ರಮ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯ ನಡೆದು ನ.22ಕ್ಕೆ ಬರೋಬ್ಬರಿ 50 ವರ್ಷಗಳು ಭರ್ತಿಯಾಗಿವೆ. ಆ ಐತಿಹಾಸಿಕ ಪಂದ್ಯ ಹೇಗಿತ್ತು?, ಯಾರೆಲ್ಲಾ ಆಡಿದ್ದರು ಎನ್ನುವುದನ್ನು ಮೆಲುಕು ಹಾಕೋಣ.
ಲಾಯ್ಡ್, ರಾಬರ್ಟ್ಸ್, ಗವಾಸ್ಕರ್, ಜಿಆರ್‌ವಿ, ಚಿನ್ನಸ್ವಾಮಿಯಲ್ಲಿ ಸೂಪರ್ ಸ್ಟಾರ್‌ಗಳ ಸಂಗಮ!
1974ರ ನವೆಂಬರ್ 22ನೇ ತಾರೀಖು. ಭಾರತದಲ್ಲಿ ಮತ್ತೊಂದು ಟೆಸ್ಟ್ ಕ್ರಿಕೆಟ್ ಕೇಂದ್ರ ತಲೆಎತ್ತಿತು. ಅದು ಬೆಂಗಳೂರಿನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಕ್ರೀಡಾಂಗಣ. ಈ ಐತಿಹಾಸಿಕ ಪಂದ್ಯಕ್ಕೆ ಸಾಕ್ಷಿಯಾಗಿದ್ದು, ಭಾರತ ಹಾಗೂ ವೆಸ್ಟ್‌ಇಂಡೀಸ್ ತಂಡಗಳು. ಭಾರತ ತಂಡವನ್ನು ಮನ್ಸೂರ್ ಅಲಿ ಖಾನ್ ಪಟೌಡಿ, ವಿಂಡೀಸ್ ತಂಡವನ್ನು ಕ್ಲೈವ್ ಲಾಯ್ಡ್ ಮುನ್ನಡೆಸಿದ್ದರು.
ಭಾರತ ತಂಡದಲ್ಲಿ ಸಾರ್ವಕಾಲಿಕ ಸೂಪರ್ ಸ್ಟಾರ್‌ಗಳಾದ ಪಟೌಡಿ, ಸುನಿಲ್ ಗವಾಸ್ಕರ್, ಜಿ.ಆರ್.ವಿಶ್ವನಾಥ್, ಇಎಎಸ್ ಪ್ರಸನ್ನ, ಬಿಎಸ್ ಚಂದ್ರಶೇಖರ್, ಬ್ರಿಜೇಶ್ ಪಟೇಲ್, ಏಕ್‌ನಾಥ್ ಸೋಲ್ಕರ್, ಫಾರೂಖ್ ಎಂಜಿನಿಯರ್, ಎಸ್.ವೆಂಕಟರಾಘವನ್ ಇದ್ದರೆ, ವಿಂಡೀಸ್ ತಂಡದಲ್ಲಿ ಲಾಯ್ಡ್, ಆಲ್ವಿನ್ ಕಾಲಿಚರಣ್, ರಾಯ್ ಫ್ರೆಡ್ರಿಕ್ಸ್, ಆ್ಯಂಡಿ ರಾಬರ್ಟ್ಸ್, ಲ್ಯಾನ್ಸ್ ಗಿಬ್ಸ್, ಕೀಥ್ ಬಾಯ್ಸ್, ಡೆರೆಕ್ ಮರ್ರೆ ಇದ್ದರು. ಇವರ ಜೊತೆಗೆ ಮತ್ತಿಬ್ಬರು ವಿಂಡೀಸ್ ತಂಡಕ್ಕೆ ಪಾದಾರ್ಪಣೆ ಮಾಡಿ, ದಿಗ್ಗಜ ಕ್ರಿಕೆಟಿಗರಾಗಿ ಬೆಳೆದರು. ಅವರೇ ಸರ್. ವಿವಿಯನ್ ರಿಚರ್ಡ್ಸ್ ಹಾಗೂ ಗಾರ್ಡನ್ ಗ್ರೀನಿಡ್ಜ್.
ಬುಮ್ರಾ ಬ್ರಹ್ಮಾಸ್ತ್ರಕ್ಕೆ ಕಾಂಗರೂ ಪಡೆ ಕಂಗಾಲು; ಪರ್ತ್ ಟೆಸ್ಟ್‌ನ ಮೊದಲ ದಿನವೇ 17 ವಿಕೆಟ್ ಪತನ!
ಮೊದಲ ಪಂದ್ಯದಲ್ಲೇ 3 ಶತಕಕ್ಕೆ ಸಾಕ್ಷಿ!
ಚಿನ್ನಸ್ವಾಮಿ ಕ್ರೀಡಾಂಗಣ ಮೊದಲ ಪಂದ್ಯದಲ್ಲೇ 3 ಶತಕಗಳಿಗೆ ಸಾಕ್ಷಿಯಾಗಿತ್ತು. ಮೂರೂ ಶತಕಗಳು ವಿಂಡೀಸ್ ಬ್ಯಾಟರ್‌ಗಳಿಂದಲೇ ದಾಖಲಾಗಿದ್ದು. ಮೊದಲ ಇನ್ನಿಂಗ್ಸಲ್ಲಿ ಕಾಲಿಚರಣ್ 124 ರನ್ ಸಿಡಿಸಿದರೆ, 2ನೇ ಇನ್ನಿಂಗ್ಸಲ್ಲಿ ಗ್ರೀನಿಡ್ಜ್ 107, ಕ್ಲೈವ್ ಲಾಯ್ಡ್ 163 ರನ್ ಚಚ್ಚಿದ್ದರು.
ವಿಂಡೀಸ್‌ಗೆ 267 ರನ್ ಜಯ
ಮೊದಲ ಇನ್ನಿಂಗ್ಸಲ್ಲಿ 289 ರನ್ ಗಳಿಸಿದ್ದ ಪ್ರವಾಸಿ ವಿಂಡೀಸ್, ಭಾರತವನ್ನು 260 ರನ್‌ಗೆ ಆಲೌಟ್ ಮಾಡಿ 29 ರನ್ ಮುನ್ನಡೆ ಪಡೆದಿತ್ತು. 2ನೇ ಇನ್ನಿಂಗ್ಸಲ್ಲಿ 6 ವಿಕೆಟ್‌ಗೆ 356 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡ ವಿಂಡೀಸ್ ಭಾರತಕ್ಕೆ ಗೆಲ್ಲಲು 386 ರನ್ ಗುರಿ ನೀಡಿತ್ತು. ಭಾರತ 2ನೇ ಇನ್ನಿಂಗ್ಸಲ್ಲಿ ಕೇವಲ 118 ರನ್‌ಗೆ ಆಲೌಟ್ ಆಗಿ 267 ರನ್ ಸೋಲು ಅನುಭವಿಸಿತ್ತು.
IPL 2025 ಮಹತ್ವದ ವೇಳಾಪಟ್ಟಿ ಪ್ರಕಟ; ಫೈನಲ್ ಪಂದ್ಯದ ಡೇಟ್ ಫಿಕ್ಸ್! ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ತವರಿನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಆಡಿದ್ದ ಕರ್ನಾಟಕದ ನಾಲ್ವರು!
ತವರಿನಂಗಳದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತ ತಂಡವನ್ನು ಕರ್ನಾಟಕದ ನಾಲ್ವರು ಆಟಗಾರರು ಪ್ರತಿನಿಧಿಸಿದ್ದರು. ತಾರಾ ಬ್ಯಾಟರ್‌ಗಳಾದ ಜಿ.ಆರ್.ವಿಶ್ವನಾಥ್, ಬ್ರಿಜೇಶ್ ಪಟೇಲ್, ತಾರಾ ಸ್ಪಿನ್ನರ್‌ಗಳಾದ ಇಎಎಸ್ ಪ್ರಸನ್ನ, ಬಿಎಸ್ ಚಂದ್ರಶೇಖರ್ ತಂಡದಲ್ಲಿದ್ದರು. ಪಂದ್ಯದಲ್ಲಿ ಚಂದ್ರಶೇಖರ್ 6, ಪ್ರಸನ್ನ 2 ವಿಕೆಟ್ ಪಡೆದಿದ್ದರು. ಜಿಆರ್‌ವಿ ಮೊದಲ ಇನ್ನಿಂಗ್ಸಲ್ಲಿ 29, 2ನೇ ಇನ್ನಿಂಗ್ಸಲ್ಲಿ 22 ರನ್ ಗಳಿಸಿದ್ದರು. ಬ್ರಿಜೇಶ್ ಮೊದಲ ಇನ್ನಿಂಗ್ಸಲ್ಲಿ 2, 2ನೇ ಇನ್ನಿಂಗ್ಸಲ್ಲಿ 22 ರನ್ ದಾಖಲಿಸಿದ್ದರು.
ಚಿನ್ನಸ್ವಾಮಿಯಲ್ಲಿ ಮೊದಲ ಪಂದ್ಯಕ್ಕೆ ಸ್ಕೋರರ್ ಆಗಿದ್ದ ಗೋಪಾಲಕೃಷ್ಣ
‘ನನಗೀಗಲೂ ಆ ದೃಶ್ಯಗಳು ಕಣ್ಣಿಗೆ ಕಟ್ಟಿದ ರೀತಿ ಇದೆ. ಅಷ್ಟೊಂದು ಕ್ರಿಕೆಟ್ ಅಭಿಮಾನಿಗಳನ್ನು ನಾನು ಜೀವನದಲ್ಲೇ ನೋಡಿರಲಿಲ್ಲ’, ಇದು 1974ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ-ವಿಂಡೀಸ್ ನಡುವೆ ಚೊಚ್ಚಲ ಟೆಸ್ಟ್ ನಡೆದಾಗ ಪಂದ್ಯದ ಅಧಿಕೃತ ಸ್ಕೋರರ್ ಆಗಿದ್ದ ಎಚ್.ಆರ್.ಗೋಪಾಲಕೃಷ್ಣ ಅವರ ಮಾತುಗಳು.
‘ಕನ್ನಡಪ್ರಭ’ದೊಂದಿಗೆ ಆ ಪಂದ್ಯದ ಅನುಭವಗಳನ್ನು ಹಂಚಿಕೊಂಡ ಗೋಪಾಲಕೃಷ್ಣ ಅವರು, ಅಂದಿನ ಸನ್ನಿವೇಶಗಳನ್ನು ಎಳೆ ಎಳೆಯಾಗಿ ವಿವರಿಸಿದರು. ‘ನಾನು ಪಂದ್ಯದ ಹಿಂದಿನ ದಿನವೂ ಕ್ರೀಡಾಂಗಣಕ್ಕೆ ಹೋಗಿದ್ದೆ. ಮುಖ್ಯಸ್ಥರಾದ ಚಿನ್ನಸ್ವಾಮಿ ಅವರು ಎಲ್ಲ ಪರಿಶೀಲನೆ ನಡೆಸುತ್ತಿದ್ದರು. ಕ್ರೀಡಾಂಗಣದ ಸ್ಟ್ಯಾಂಡ್‌ಗಳು ಸುರಕ್ಷಿತವಾಗಿದೆ ಎನ್ನುವುದನ್ನು ಖಾತರಿ ಪಡಿಸಿಕೊಳ್ಳಲು ಹೈಕೋರ್ಟ್ ನಿರ್ದೇಶನ ನೀಡಿತ್ತು. ಹೀಗಾಗಿ, ಚಿನ್ನಸ್ವಾಮಿ ಅವರು ಸಾವಿರಾರು ಮರಳಿನ ಮೂಟೆಗಳನ್ನು ತರಿಸಿ ಸ್ಟ್ಯಾಂಡ್ಸ್ ಗಟ್ಟಿಯಿವೆ ಎಂದು ದೃಢಪಡಿಸಿಕೊಂಡಿದ್ದರು.
ಕ್ರಿಕೆಟ್‌ನಲ್ಲಿ ಗುಡುಗಿದ ಮರಿ ಸೆಹ್ವಾಗ್; ಡಬಲ್ ಸೆಂಚುರಿ ಸಿಡಿಸಿದ ಆರ್ಯವೀರ್!
ಪಂದ್ಯದ ದಿನ ಬೆಳಗ್ಗೆ 9 ಗಂಟೆಗೆ ವೇಳೆಗೆ ನಾನು ಕ್ರೀಡಾಂಗಣಕ್ಕೆ ಹೋದಾಗ, ಅಲ್ಲಿ ಜನಸಾರವೇ ನೆರೆದಿತ್ತು. ಭಾರತ-ವಿಂಡೀಸ್ ಪಂದ್ಯವನ್ನು ವೀಕ್ಷಿಸಲು ದೂರದ ಊರುಗಳಿಂದಲೂ ಜನ ಬಂದಿದ್ದರು. ಆದರೆ, ಮೊದಲ ಅವಧಿಯಲ್ಲೇ ಮಳೆ ಬಂದಿದ್ದರಿಂದ ಎಲ್ಲರಿಗೂ ಸ್ವಲ್ಪ ನಿರಾಸೆ ಉಂಟಾಗಿತ್ತು. ಆದರೂ ಮಧ್ಯಾಹ್ನ 12.10ಕ್ಕೆ ಆಟ ಶುರುವಾದಾಗ ಎಲ್ಲರಲ್ಲೂ ರಣೋತ್ಸಾಹ’ ಎಂದು ಪಂದ್ಯದ ಆರಂಭಿಕ ಕ್ಷಣಗಳನ್ನು ತಿಳಿಸಿದರು.
ಮೊದಲ ಬಾರಿಗೆ ಸ್ಕೋರಿಂಗ್‌ಗೆ ಬಣ್ಣದ ಇಂಕ್‌ಗಳ ಬಳಕೆ!
ಭಾರತ-ವಿಂಡೀಸ್ ಟೆಸ್ಟ್‌ನ ಸ್ಕೋರಿಂಗ್ ಮಾಡಲು ತಾವು ಅನುಸರಿಸಿದ ಮಾದರಿಯ ಬಗ್ಗೆಯೂ ಗೋಪಾಲಕೃಷ್ಣ ಅವರು ತಿಳಿಸಿದರು. ‘ಭಾರತದಲ್ಲೇ ಮೊದಲ ಬಾರಿಗೆ ಸ್ಕೋರಿಂಗ್‌ಗೆ ನಾನು ಬಣ್ಣ ಬಣ್ಣದ ಪೆನ್‌ಗಳನ್ನು ಬಳಸಿದೆ. ನೀಲಿ, ಹಸಿರು, ಕೆಂಪು ಹಾಗೂ ಕಪ್ಪು ಬಣ್ಣದ ಇಂಕ್‌ಗಳನ್ನು ಬಳಸಿ ಸ್ಕೋರಿಂಗ್ ಮಾಡಿದೆ’ ಎಂದು ಆ ಪಂದ್ಯ ಅಧಿಕೃತ ಸ್ಕೋರ್ ಕಾರ್ಡನ್ನು ತೋರಿಸಿದರು.
ಗೋಪಾಲಕೃಷ್ಣ ಅವರು ಸ್ಕೋರರ್ ಆಗಿ ಈ ವರೆಗೂ 100 ಟೆಸ್ಟ್‌ಗಳನ್ನು ಪೂರೈಸಿದ್ದಾರೆ. ಅಲ್ಲದೇ ಕ್ರಿಕೆಟ್ ಜಗತ್ತಿನ ಅಗ್ರ ಸ್ಟ್ಯಾಟಿಸ್ಟಿಷಿಯನ್‌ಗಳಲ್ಲಿ ಒಬ್ಬರು ಎಂದು ಖ್ಯಾತ ಪಡೆದಿದ್ದಾರೆ. ಹಲವು ವಿಶ್ವ ದಾಖಲೆಗಳನ್ನು ಗುರುತಿಸಿ, ಕ್ರಿಕೆಟ್ ಲೋಕಕ್ಕೆ ತಿಳಿಸಿದ ಹೆಗ್ಗಳಿಕೆಯೂ ಅವರಿಗೆ ಸಲ್ಲುತ್ತದೆ.
ಅಂಕಿ-ಅಂಶ, ಫೋಟೋಗಳ ಕೃಪೆ: ಎಚ್.ಆರ್.ಗೋಪಾಲಕೃಷ್ಣ