Delhi Test: ಅಕ್ಷರ್-ಅಶ್ವಿನ್ ಆಕರ್ಷಕ ಶತಕದ ಜತೆಯಾಟ; ಆಸ್ಟ್ರೇಲಿಯಾಗೆ ಕೇವಲ 1 ರನ್ ಮುನ್ನಡೆ
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಎರಡನೇ ಟೆಸ್ಟ್ ಪಂದ್ಯಕ್ಕೆ ಡೆಲ್ಲಿ ಆತಿಥ್ಯ
ಆಕರ್ಷಕ ಶತಕದ ಜತೆಯಾಟವಾಡಿ ಆಸರೆಯಾದ ಅಶ್ವಿನ್-ಅಕ್ಷರ್ ಜೋಡಿ
ಆಸ್ಟ್ರೇಲಿಯಾಗೆ ಕೇವಲ ಒಂದು ರನ್ ಮುನ್ನಡೆ
ದೆಹಲಿ(ಫೆ.16): ಟೀಂ ಇಂಡಿಯಾ ತಾರಾ ಆಲ್ರೌಂಡರ್‌ಗಳಾದ ಅಕ್ಷರ್ ಪಟೇಲ್-ರವಿಚಂದ್ರನ್ ಅಶ್ವಿನ್ 8ನೇ ವಿಕೆಟ್‌ಗೆ ಶತಕದ ಜತೆಯಾಟವಾಡುವ ಮೂಲಕ ಟೀಂ ಇಂಡಿಯಾವನ್ನು ಆಘಾತದಿಂದ ಪಾರು ಮಾಡಿದ್ದಾರೆ. ಡೆಲ್ಲಿ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 262 ರನ್‌ಗಳಿಗೆ ಸರ್ವಪತನ ಕಂಡಿದ್ದು, ಆಸ್ಟ್ರೇಲಿಯಾ ಕೇವಲ ಒಂದು ರನ್ ಮುನ್ನಡೆ ಗಳಿಸಿದೆ.
ಹೌದು, ಟೀಂ ಇಂಡಿಯಾ ಒಂದು ಹಂತದಲ್ಲಿ 139 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿದ್ದ, ಭಾರತ ತಂಡಕ್ಕೆ 8ನೇ ವಿಕೆಟ್‌ಗೆ ಅಕ್ಷರ್ ಪಟೇಲ್ ಹಾಗೂ ರವಿಚಂದ್ರನ್ ಅಶ್ವಿನ್ 114 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಅಶ್ವಿನ್ 37 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಅಕ್ಷರ್ ಪಟೇಲ್ ಸಮಯೋಚಿತ 74 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು.
ಎರಡನೇ ಪಂದ್ಯದ ಮೊದಲ ದಿನದಾಟದಂತ್ಯದ ವೇಳೆಗೆ ಟೀಂ ಇಂಡಿಯಾ ವಿಕೆಟ್ ನಷ್ಟವಿಲ್ಲದೇ 21 ರನ್ ಗಳಿಸಿತ್ತು. ಆದರೆ ಎರಡನೇ ದಿನ ತನ್ನ ಖಾತೆಗೆ ಟೀಂ ಇಂಡಿಯಾ 25 ರನ್ ಸೇರಿಸುವಷ್ಟರಲ್ಲಿ ಆರಂಭಿಕ ಬ್ಯಾಟರ್ ಕೆ ಎಲ್ ರಾಹುಲ್ ವಿಕೆಟ್ ಕಳೆದುಕೊಂಡಿತ್ತು. ಕೆ ಎಲ್ ರಾಹುಲ್, 41 ಎಸೆತಗಳನ್ನು ಎದುರಿಸಿ ಕೇವಲ ಒಂದು ಬೌಂಡರಿ ಸಹಿತ 17 ರನ್ ಬಾರಿಸಿ ಲಯನ್ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಕಳೆದ ಪಂದ್ಯದಲ್ಲಿ ಶತಕ ಚಚ್ಚಿದ್ದ ರೋಹಿತ್ ಶರ್ಮಾ, 100ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಚೇತೇಶ್ವರ್ ಪೂಜಾರ ಹಾಗೂ ನಂಬಿಗಸ್ಥ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು. ಕೇವಲ 20 ರನ್ ಅಂತರದಲ್ಲಿ ಟೀಂ ಇಂಡಿಯಾ ಅಗ್ರಕ್ರಮಾಂಕದ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
Delhi Test: 100ನೇ ಟೆಸ್ಟ್‌ನಲ್ಲಿ ಶೂನ್ಯ ಸುತ್ತಿದ ಪೂಜಾರ, ಟೀಂ ಇಂಡಿಯಾ 4 ವಿಕೆಟ್ ಲಯನ್ ಪಾಲು
ಇನ್ನು ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ 5ನೇ ವಿಕೆಟ್‌ಗೆ 59 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಜಡೇಜಾ 26 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ವಿರಾಟ್ ಕೊಹ್ಲಿ 44 ರನ್ ಬಾರಿಸಿ ಮ್ಯಾಥ್ಯೂ ಕುನ್ಹೇಮನ್‌ಗೆ ಚೊಚ್ಚಲ ಬಲಿಯಾದರು. ವಿಕೆಟ್ ಕೀಪರ್ ಬ್ಯಾಟರ್ ಕೆ ಎಸ್ ಭರತ್ ಕೇವಲ 6 ರನ್ ಬಾರಿಸಿ ನೇಥನ್ ಲಯನ್‌ಗೆ 5ನೇ ಬಲಿಯಾದರು.
ಸತತ ಎರಡನೇ ಅರ್ಧಶತಕ ಸಿಡಿಸಿದ ಅಕ್ಷರ್ ಪಟೇಲ್: ಮೊದಲ ಟೆಸ್ಟ್ ಪಂದ್ಯದಲ್ಲೂ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ್ದ ಅಕ್ಷರ್ ಪಟೇಲ್, ಇದೀಗ ಎರಡನೇ ಟೆಸ್ಟ್ ಪಂದ್ಯದಲ್ಲೂ ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಅಕ್ಷರ್ ಪಟೇಲ್ 115 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 74 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು.
ಆಸ್ಟ್ರೇಲಿಯಾ ದಿಟ್ಟ ಆರಂಭ: ಇನ್ನು ಕೇವಲ ಒಂದು ರನ್ ಮುನ್ನಡೆ ಪಡೆದು ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು ಆರಂಭದಲ್ಲೇ ಉಸ್ಮಾನ್ ಖವಾಜ(6) ವಿಕೆಟ್ ಕಳೆದುಕೊಂಡಿತು. ಇನ್ನು ಎರಡನೇ ವಿಕೆಟ್‌ಗೆ ಟ್ರಾವಿಸ್ ಹೆಡ್ ಹಾಗೂ ಮಾರ್ನಸ್ ಲಬುಶೇನ್ ಮುರಿಯದ 38 ರನ್‌ಗಳ ಜತೆಯಾಟವಾಡಿದೆ. ಎರಡನೇ ದಿನದಾಟದಂತ್ಯದ ವೇಳೆಗೆ ಆಸ್ಟ್ರೇಲಿಯಾ ತಂಡವು ಒಂದು ವಿಕೆಟ್ ಕಳೆದುಕೊಂಡು 61 ರನ್ ಗಳಿಸಿದ್ದು, ಒಟ್ಟಾರೆ 62 ರನ್‌ಗಳ ಮುನ್ನಡೆ ಗಳಿಸಿದೆ.