Asianet Suvarna News Asianet Suvarna News

Delhi Test: 100ನೇ ಟೆಸ್ಟ್‌ನಲ್ಲಿ ಶೂನ್ಯ ಸುತ್ತಿದ ಪೂಜಾರ, ಟೀಂ ಇಂಡಿಯಾ 4 ವಿಕೆಟ್‌ ಲಯನ್‌ ಪಾಲು

* ಡೆಲ್ಲಿ ಟೆಸ್ಟ್‌ ಪಂದ್ಯದಲ್ಲಿ ಆರಂಭದಲ್ಲೇ 4 ವಿಕೆಟ್ ಕಳೆದುಕೊಂಡ ಭಾರತ
* 100ನೇ ಟೆಸ್ಟ್‌ ಪಂದ್ಯದಲ್ಲಿ ಶೂನ್ಯ ಸುತ್ತಿದ ಚೇತೇಶ್ವರ್ ಪೂಜಾರ
* 4 ವಿಕೆಟ್ ಕಬಳಿಸಿ ಟೀಂ ಇಂಡಿಯಾ ಬ್ಯಾಟರ್‌ಗಳನ್ನು ಕಾಡಿದ ಪೂಜಾರ

Ind vs Aus Virat Kohli Ravindra Jadeja Fight Back After Nathan Lyon's Four Wicket Haul in Delhi Test kvn
Author
First Published Feb 18, 2023, 12:03 PM IST

ದೆಹಲಿ(ಫೆ.18): ಟೀಂ ಇಂಡಿಯಾ ಟೆಸ್ಟ್‌ ಸ್ಪೆಷಲಿಸ್ಟ್‌ ಎಂದೇ ಗುರುತಿಸಿಕೊಂಡಿರುವ ಚೇತೇಶ್ವರ್ ಪೂಜಾರ ತಮ್ಮ ವೃತ್ತಿಜೀವನದ ನೂರನೇ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ ಸ್ಮರಣೀಯವಾಗಿಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಪೂಜಾರ ಕೇವಲ 7 ಎಸೆತಗಳನ್ನು ಎದುರಿಸಿ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದ್ದಾರೆ. ಆಸ್ಟ್ರೇಲಿಯಾ ಎದುರಿನ ಎರಡನೇ ಟೆಸ್ಟ್‌ ಪಂದ್ಯದ ಎರಡನೇ ದಿನದಾಟದ ಲಂಚ್ ಬ್ರೇಕ್‌ ವೇಳೆಗೆ ಟೀಂ ಇಂಡಿಯಾ 4 ವಿಕೆಟ್‌ ಕಳೆದುಕೊಂಡು 88 ರನ್‌ ಬಾರಿಸಿದ್ದು, ಇನ್ನೂ 175 ರನ್‌ಗಳ ಹಿನ್ನಡೆಯಲ್ಲಿದೆ. ಅನುಭವಿ ಆಫ್‌ಸ್ಪಿನ್ನರ್‌ ನೇಥನ್ ಲಯನ್ ಎಲ್ಲಾ 4 ವಿಕೆಟ್‌ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯುತ್ತಿರುವ ಬಾರ್ಡರ್‌-ಗವಾಸ್ಕರ್ ಟೆಸ್ಟ್‌ ಸರಣಿಯ ಎರಡನೇ ಪಂದ್ಯದ ಮೊದಲ ದಿನದಾಟದಂತ್ಯದ ವೇಳೆಗೆ ಟೀಂ ಇಂಡಿಯಾ ವಿಕೆಟ್‌ ನಷ್ಟವಿಲ್ಲದೇ 21 ರನ್‌ ಗಳಿಸಿತ್ತು. ಆದರೆ ಎರಡನೇ ದಿನ ತನ್ನ ಖಾತೆಗೆ ಟೀಂ ಇಂಡಿಯಾ 25 ರನ್ ಸೇರಿಸುವಷ್ಟರಲ್ಲಿ ಆರಂಭಿಕ ಬ್ಯಾಟರ್ ಕೆ ಎಲ್ ರಾಹುಲ್ ವಿಕೆಟ್‌ ಕಳೆದುಕೊಂಡಿತ್ತು. ಭಾರತ ಟೆಸ್ಟ್‌ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಕೆ ಎಲ್ ರಾಹುಲ್ ಮತ್ತೊಮ್ಮೆ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. ಕೆ ಎಲ್ ರಾಹುಲ್, 41 ಎಸೆತಗಳನ್ನು ಎದುರಿಸಿ ಕೇವಲ ಒಂದು ಬೌಂಡರಿ ಸಹಿತ 17 ರನ್‌ ಬಾರಿಸಿ ಲಯನ್‌ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು.

ಲಯನ್‌ ಭೀತಿಯಲ್ಲಿ ಟೀಂ ಇಂಡಿಯಾ: ಹೌದು, ಕೆ ಎಲ್ ರಾಹುಲ್ ವಿಕೆಟ್‌ ಪತನದ ಬಳಿಕ ಟೀಂ ಇಂಡಿಯಾ, ನಾಟಕೀಯ ಕುಸಿತ ಕಂಡಿತು. ಸ್ಪಿನ್‌ ಸ್ನೇಹಿ ಪಿಚ್‌ನಲ್ಲಿ ತಮ್ಮ ಕೈಚಳಕ ತೋರಿಸಿರುವ ನೇಥನ್ ಲಯನ್‌, ಕಳೆದ ಪಂದ್ಯದಲ್ಲಿ ಶತಕ ಚಚ್ಚಿದ್ದ ರೋಹಿತ್ ಶರ್ಮಾ, 100ನೇ ಟೆಸ್ಟ್‌ ಪಂದ್ಯವನ್ನಾಡುತ್ತಿರುವ ಚೇತೇಶ್ವರ್ ಪೂಜಾರ ಹಾಗೂ ನಂಬಿಗಸ್ಥ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು. ಕೇವಲ 20 ರನ್‌ ಅಂತರದಲ್ಲಿ ಟೀಂ ಇಂಡಿಯಾ ಅಗ್ರಕ್ರಮಾಂಕದ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಕೊಹ್ಲಿ-ಜಡ್ಡು ಆಸರೆ: ಕೇವಲ 66 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಕಂಗಾಲಾಗಿರುವ ಟೀಂ ಇಂಡಿಯಾಗೆ 5ನೇ ವಿಕೆಟ್‌ಗೆ ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಮುರಿಯದ 22 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗುವ ಯತ್ನ ನಡೆಸಿದ್ದಾರೆ. ಮಾಜಿ ನಾಯಕ ವಿರಾಟ್ ಕೊಹ್ಲಿ 14 ರನ್ ಬಾರಿಸಿದರೆ, ರವೀಂದ್ರ ಜಡೇಜಾ 15 ರನ್‌ ಬಾರಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಹೆಚ್ಚು ತಿರುವು ಪಡೆಯುತ್ತಿರುವ ಪಿಚ್‌ನಲ್ಲಿ ಈ ಜೋಡಿ ಎರಡನೇ ಸೆಷನ್‌ನಲ್ಲಿ ಯಾವ ರೀತಿ ಪ್ರದರ್ಶನ ತೋರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Follow Us:
Download App:
  • android
  • ios