* ಆಕರ್ಷಕ ಶತಕ ಚಚ್ಚಿದ ಆಲ್ರೌಂಡರ್ ರವೀಂದ್ರ ಜಡೇಜಾ* ವೃತ್ತಿಜೀವನದ ಮೂರನೇ ಶತಕ ದಾಖಲಿಸಿದ ಜಡ್ಡು* ಸ್ಪೋಟಕ 31 ರನ್ ಸಿಡಿಸಿ ಗಮನ ಸೆಳೆದ ಹಂಗಾಮಿ ನಾಯಕ ಬುಮ್ರಾ

ಬರ್ಮಿಂಗ್‌ಹ್ಯಾಮ್‌(ಜು.02): ಆಲ್ರೌಂಡರ್ ರವೀಂದ್ರ ಜಡೇಜಾ(104) ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 416 ರನ್‌ ಬಾರಿಸಿ ಸರ್ವಪತನ ಕಂಡಿದೆ. ರವೀಂದ್ರ ಜಡೇಜಾ ಟೆಸ್ಟ್‌ ವೃತ್ತಿಜೀವನದ ಮೂರನೇ ಶತಕ ಸಿಡಿಸಿ ಸಂಭ್ರಮಿಸಿದರೇ, ನಾಯಕನಾಗಿ ಮೊದಲ ಬಾರಿಗೆ ಭಾರತ ತಂಡವನ್ನು ಮುನ್ನಡೆಸುತ್ತಿರುವ ಜಸ್ಪ್ರೀತ್ ಬುಮ್ರಾ ಸ್ಪೋಟಕ ಬ್ಯಾಟಿಂಗ್ (31*) ಮೂಲಕ ಟೀಂ ಇಂಡಿಯಾವನ್ನು 400 ರನ್ ಗಡಿ ದಾಟಿಸುವಲ್ಲಿ ಮಹತ್ತರ ವಹಿಸಿದರು.

ಇಲ್ಲಿನ ಎಡ್ಜ್‌ಬಾಸ್ಟನ್‌ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದಾಟದಂತ್ಯದ ವೇಳೆಗೆ 7 ವಿಕೆಟ್‌ ಕಳೆದುಕೊಂಡು 338 ರನ್‌ ಬಾರಿಸಿದ್ದ ಭಾರತ ತಂಡವು, ಎರಡನೇ ದಿನದಾಟವನ್ನು ಉತ್ತಮವಾಗಿಯೇ ಆರಂಭಿಸಿತು. ರವೀಂದ್ರ ಜಡೇಜಾಗೆ (Ravindra Jadeja) ವೇಗಿ ಮೊಹಮ್ಮದ್ ಶಮಿ ಬ್ಯಾಟಿಂಗ್‌ನಲ್ಲಿ ಉತ್ತಮ ಸಾಥ್ ನೀಡಿದರು. ಶಮಿ 16 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಆಕರ್ಷಕ ಶತಕ ಸಿಡಿಸಿದ ರವೀಂದ್ರ ಜಡೇಜಾ:ಟೀಂ ಇಂಡಿಯಾ (Team India) 98 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಾಗ ಕ್ರೀಸ್‌ಗಿಳಿದ ರವೀಂದ್ರ ಜಡೇಜಾ, ವಿಕೆಟ್ ಕೀಪರ್ ಬ್ಯಾಟರ್‌ ರಿಷಭ್ ಪಂತ್ ಜತೆಗೂಡಿ ಆರನೇ ವಿಕೆಟ್‌ಗೆ 222 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದರು. ಮೊದಲ ದಿನದಾಟದಂತ್ಯದಲ್ಲಿ 83 ರನ್‌ ಗಳಿಸಿದ್ದ ಜಡೇಜಾ ಎರಡನೇ ದಿನದಾಟದಲ್ಲಿ ಶತಕ ಪೂರೈಸಿದರು, 183 ಎಸೆತಗಳನ್ನು ಎದುರಿಸಿ ಜಡ್ಡು ವೃತ್ತಿಜೀವನದ ಮೂರನೇ ಶತಕ ಬಾರಿಸಿದರು. ಅಂತಿಮವಾಗಿ ಜಡೇಜಾ 194 ಎಸೆತಗಳನ್ನು ಎದುರಿಸಿ 13 ಬೌಂಡರಿ ಸಹಿತ 104 ರನ್ ಬಾರಿಸಿ ಜೇಮ್ಸ್ ಆಂಡರ್‌ಸನ್ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್‌ ಆಗಿ ಪೆವಿಲಿಯನ್ ಸೇರಿದರು.

Scroll to load tweet…

Birmingham Test: ಸಚಿನ್‌ ತೆಂಡುಲ್ಕರ್‌ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಮುರಿದ ರಿಷಭ್ ಪಂತ್..!

ಸ್ಟುವರ್ಟ್‌ ಬ್ರಾಡ್‌ ಒಂದೇ ಓವರ್‌ನಲ್ಲಿ 35 ರನ್ ಚಚ್ಚಿದ ಜಸ್ಪ್ರೀತ್ ಬುಮ್ರಾ..!

ಟೆಸ್ಟ್‌ ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿಗೆ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ಜಸ್ಪ್ರೀತ್ ಬುಮ್ರಾ, ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಅದರಲ್ಲೂ ಸ್ಟುವರ್ಟ್‌ ಬ್ರಾಡ್‌ ಬೌಲಿಂಗ್‌ನಲ್ಲಿ ಬುಮ್ರಾ ಬರೋಬ್ಬರಿ 35 ರನ್‌ ದೋಚಿದರು. ಈ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಓವರ್‌ವೊಂದರಲ್ಲಿ ಗರಿಷ್ಠ ರನ್ ಬಿಟ್ಟುಕೊಟ್ಟ ಬೌಲರ್ ಎನ್ನುವ ಕುಖ್ಯಾತಿಗೆ ಸ್ಟುವರ್ಟ್‌ ಬ್ರಾಡ್‌ ಪಾತ್ರವಾದರು. ಈ ಮೊದಲು ಬ್ರಿಯಾನ್ ಲಾರಾ, ಜಾರ್ಜ್ ಬೈಲಿ ಹಾಗೂ ಕೇಶವ್ ಮಹರಾಜ್ ಟೆಸ್ಟ್‌ ಪಂದ್ಯದ ಓವರ್‌ವೊಂದರಲ್ಲಿ 28 ರನ್ ಬಾರಿಸಿದ್ದರು. ಆದರೆ ಇದೀಗ ಬುಮ್ರಾ ಓವರ್‌ವೊಂದರಲ್ಲಿ 35 ರನ್ ಬಾರಿಸಿ ಇತಿಹಾಸ ನಿರ್ಮಿಸಿದ್ದಾರೆ.

Scroll to load tweet…

32ನೇ ಬಾರಿಗೆ 5 ವಿಕೆಟ್ ಗೊಂಚಲು ಪಡೆದ ಜೇಮ್ಸ್ ಆಂಡರ್‌ಸನ್‌: ಇಂಗ್ಲೆಂಡ್‌ನ ಅನುಭವಿ ವೇಗಿ ಜೇಮ್ಸ್ ಆಂಡರ್‌ಸನ್‌ ಮತ್ತೊಮ್ಮೆ ಭಾರತದ ಎದುರು ಮಾರಕ ದಾಳಿ ನಡೆಸುವ ಮೂಲಕ ಗಮನ ಸೆಳೆದರು. ಭಾರತ ಎದುರು ಮೊದಲ ದಿನವೇ ಪ್ರಮುಖ 3 ವಿಕೆಟ್ ಕಬಳಿಸಿದ್ದ ಆಂಡರ್‌ಸನ್‌, ಎರಡನೇ ದಿನದಾಟದಲ್ಲಿ ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಸಿರಾಜ್ ವಿಕೆಟ್ ಪಡೆಯುವ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಇನಿಂಗ್ಸ್‌ವೊಂದರಲ್ಲಿ 32ನೇ ಬಾರಿಗೆ 5+ ವಿಕೆಟ್ ಕಬಳಿಸಿದ ಸಾಧನೆ ಮಾಡಿದರು.