Birmingham Test: ಸಚಿನ್‌ ತೆಂಡುಲ್ಕರ್‌ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಮುರಿದ ರಿಷಭ್ ಪಂತ್..!

* ಬರ್ಮಿಂಗ್‌ಹ್ಯಾಮ್ ಟೆಸ್ಟ್ ಪಂದ್ಯದಲ್ಲಿ ಸ್ಪೋಟಕ ಶತಕ ಸಿಡಿಸಿ ಬೀಗಿದ ರಿಷಭ್ ಪಂತ್
* ಕೇವಲ 89 ಎಸೆತಗಳಲ್ಲಿ ಶತಕ ಬಾರಿಸಿ ದಾಖಲೆ ಬರೆದ ವಿಕೆಟ್ ಕೀಪರ್ ಬ್ಯಾಟರ್
* ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಅಳಿಸಿ ಹಾಕಿದ ಪಂತ್

Rishabh Pant Surpasses Sachin Tendulkar To Achieve youngest Cricketer to hit 100 sixes in International Cricket kvn

ಬರ್ಮಿಂಗ್‌ಹ್ಯಾಮ್‌(ಜು.02): ಇಲ್ಲಿನ ಎಡ್ಜ್‌ಬಾಸ್ಟನ್‌ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಪುನರ್‌ನಿಗದಿಯಾಗಿರುವ ಟೆಸ್ಟ್‌ ಪಂದ್ಯದ ಮೊದಲ ದಿನವೇ ರಿಷಭ್ ಪಂತ್ ಸ್ಪೋಟಕ ಶತಕ ಸಿಡಿಸುವ ಮೂಲಕ ಟೀಂ ಇಂಡಿಯಾಗೆ ಆಸರೆಯಾಗಿದ್ದಾರೆ. ಒಂದು ಹಂತದಲ್ಲಿ 98 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ಕ್ರಿಕೆಟ್ ತಂಡಕ್ಕೆ ಆರನೇ ವಿಕೆಟ್‌ಗೆ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ 222 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಇನ್ನು ಮೊದಲ ದಿನದಾಟದಲ್ಲೇ ರಿಷಭ್ ಪಂತ್, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ಅಪರೂಪದ ದಾಖಲೆಯನ್ನು ಅಳಿಸಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಟೆಸ್ಟ್‌ ಪಂದ್ಯದ ಮೊದಲ ದಿನದಾಟದಲ್ಲಿ ರಿಷಭ್ ಪಂತ್ (Rishabh Pant) ಅವರ ನಿರ್ಭಯ ಬ್ಯಾಟಿಂಗ್ ಕ್ರಿಕೆಟ್‌ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಟೀಂ ಇಂಡಿಯಾ (Team India) ಇನ್ನೂ ಮೂರಂಕಿ ಮೊತ್ತ ದಾಖಲಿಸುವ ಮುನ್ನವೇ ಅಗ್ರಕ್ರಮಾಂಕದ ಐವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರೂ ಸಹಾ, ಆ ಬಳಿಕ ಇಂಗ್ಲೆಂಡ್‌ಗೆ ಕೌಂಟರ್ ಅಟ್ಯಾಕ್ ಮಾಡುವ ಮೂಲಕ ಮೊದಲ ದಿನದಾಟದಂತ್ಯದ ವೇಳೆಗೆ ಭಾರತ ಮೇಲಗೈ ಸಾಧಿಸಲು ಪಂತ್ ಹಾಗೂ ಜಡೇಜಾ ಜೋಡಿ ಯಶಸ್ವಿಯಾಯಿತು. ರಿಷಭ್ ಪಂತ್ ಕೇವಲ 89 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಮಿಂಚಿದರು. ರಿಷಭ್ ಪಂತ್ ಅವರ ಸೊಗಸಾದ ಇನಿಂಗ್ಸ್‌ನಲ್ಲಿ 19 ಬೌಂಡರಿ ಹಾಗೂ 4 ಮನಮೋಹಕ ಸಿಕ್ಸರ್‌ಗಳು ಸೇರಿದ್ದವು. ಇದೇ ವೇಳೆ ಪಂತ್, ಅಂತಾರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕ ಸಿಡಿಸಿದ ಭಾರತೀಯ ಎನ್ನುವ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ (Sachin Tendulkar), ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಾವು 25 ವರ್ಷದವರಾಗಿದ್ದಾಗ ನೂರು ಸಿಕ್ಸರ್ ಪೂರೈಸಿದ ಸಾಧನೆ ಮಾಡಿದ್ದರು. ಆದರೆ ಇದೀಗ ಉತ್ತರಖಂಡ ಮೂಲದ ರಿಷಭ್ ಪಂತ್ ತಮ್ಮ 24ನೇ ವಯಸ್ಸಿನಲ್ಲಿಯೇ 100 ಅಂತರರಾಷ್ಟ್ರೀಯ ಸಿಕ್ಸರ್ ಬಾರಿಸಿದ ಸಾಧನೆ ಮಾಡಿದ್ದಾರೆ. ಸದ್ಯ ರಿಷಭ್ ಪಂತ್ ಟೆಸ್ಟ್‌ ಕ್ರಿಕೆಟ್‌ನಲ್ಲಿ 48, ಏಕದಿನ ಕ್ರಿಕೆಟ್‌ನಲ್ಲಿ 24 ಹಾಗೂ ಟಿ20 ಕ್ರಿಕೆಟ್‌ನಲ್ಲಿ 31 ಮುಗಿಲೆತ್ತರದ ಸಿಕ್ಸರ್ ಬಾರಿಸಿದ್ಧಾರೆ.

Birmingham Test: 146 ರನ್ ಚಚ್ಚಿ ಹಲವು ದಾಖಲೆ ಬರೆದ ರಿಷಭ್ ಪಂತ್..!

ಎಡ್ಜ್‌ಬಾಸ್ಟನ್‌ ಟೆಸ್ಟ್ ಪಂದ್ಯಕ್ಕೂ ಮುನ್ನ ರಿಷಭ್ ಪಂತ್, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 99 ಸಿಕ್ಸರ್ ಸಿಡಿಸಿದ್ದರು. ಆದರೆ ಇನಿಂಗ್ಸ್‌ನ 37ನೇ ಓವರ್ ಎಸೆದ ಜಾಕ್ ಲೀಚ್‌ ಅವರ ಬೌಲಿಂಗ್‌ನಲ್ಲಿ ಭರ್ಜರಿ ಸಿಕ್ಸರ್ ಚಚ್ಚುವ ಮೂಲಕ ಮೂರಂಕಿ ಸಿಕ್ಸರ್ ಬಾರಿಸಿದ ಸಾಧನೆ ಮಾಡಿದರು. ಅಂದಹಾಗೆ, ಇದು ಎಡ್ಜ್‌ಬಾಸ್ಟನ್ ಟೆಸ್ಟ್‌ ಪಂದ್ಯದಲ್ಲಿ ದಾಖಲಾದ ಮೊದಲ ಸಿಕ್ಸರ್ ಕೂಡಾ ಹೌದು.

ಟೆಸ್ಟ್ ಕ್ರಿಕೆಟ್‌ನಲ್ಲಿ 2,000 ರನ್‌ ಪೂರೈಸಿದ ರಿಷಭ್ ಪಂತ್

31ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ರಿಷಭ್ ಪಂತ್, ವೃತ್ತಿಜೀವನದ 5ನೇ ಟೆಸ್ಟ್ ಶತಕ ಸಿಡಿಸಿದ್ದಾರೆ. ಇದರ ಜತೆಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 2,000 ರನ್ ಬಾರಿಸುವ ಮೂಲಕ ಈ ಸಾಧನೆ ಮಾಡಿದ ಅತಿಕಿರಿಯ ಬ್ಯಾಟರ್ ಎನ್ನುವ ಹಿರಿಮೆಗೆ ರಿಷಭ್ ಪಂತ್ ಪಾತ್ರರಾಗಿದ್ದಾರೆ. ಇನ್ನು ರಿಷಭ್ ಪಂತ್ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಕೇವಲ 89 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಏಷ್ಯಾಖಂಡದಾಚೆಗೆ ಮೂರನೇ ಅತಿವೇಗದ ಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ವಿರೇಂದ್ರ ಸೆಹ್ವಾಗ್(78 ಎಸೆತ) ಹಾಗೂ ಮೊಹಮ್ಮದ್ ಅಜರುದ್ದೀನ್(88 ಎಸೆತ) ವೇಗವಾಗಿ ಶತಕ ಸಿಡಿಸಿದ್ದರು. 

ಇನ್ನು ರಿಷಭ್ ಪಂತ್, ಕ್ಯಾಲೆಂಡರ್‌ ವರ್ಷವೊಂದರಲ್ಲಿ ಎರಡು ಶತಕ ಬಾರಿಸಿದ ಭಾರತದ ನಾಲ್ಕನೇ ವಿಕೆಟ್‌ ಕೀಪರ್ ಬ್ಯಾಟರ್ ಎನ್ನುವ ಕೀರ್ತಿಗೂ ಪಾತ್ರರಾಗಿದ್ದಾರೆ. ಇದಷ್ಟೇ ಅಲ್ಲದೇ ಸಚಿನ್ ತೆಂಡುಲ್ಕರ್ ಹಾಗೂ ವಿರಾಟ್ ಕೊಹ್ಲಿ ಬಳಿಕ ಎಡ್ಜ್‌ಬಾಸ್ಟನ್‌ ಮೈದಾನದಲ್ಲಿ ಟೆಸ್ಟ್ ಶತಕ ಸಿಡಿಸಿದ ಮೂರನೇ ಭಾರತೀಯ ಆಟಗಾರ ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ.

Latest Videos
Follow Us:
Download App:
  • android
  • ios