ಕೊಹ್ಲಿ ಜೊತೆ ಕ್ರಿಕೆಟ್ ಆಡಿದ್ದ ತೇಜಸ್ವಿ ಯಾದವ್ ಈಗ ಬಿಹಾರ ಸರ್ಕಾರದಲ್ಲಿ ವೈಸ್ ಕ್ಯಾಪ್ಟನ್!
ಬಿಹಾರ ಸರ್ಕಾರದಲ್ಲಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜಕೀಯ ಹೊರತಾಗಿ ಕ್ರಿಕೆಟ್‌ನೊಂದಿಗೂ ತೇಜಸ್ವಿ ಯಾದವ್ ವಿಶೇಷ ಸಂಬಂಧ ಹೊಂಡಿದ್ದಾರೆ. ತೇಜಸ್ವಿ ಯಾದವ್ ರಾಜಕೀಯಕ್ಕೂ ಮೊದಲು ಕ್ರಿಕೆಟ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ, ಅದರಲ್ಲಿ ಫೇಲ್ ಆಗುವುದರೊಂದಿಗೆ ರಾಜಕೀಯಕ್ಕೆ ಇಳಿದಿದ್ದರು.
ಬೆಂಗಳೂರು (ಆ.10): ಕಳೆದ ಕೆಲವು ದಿನಗಳಿಂದ ಬಿಹಾರದ ರಾಜಕೀಯದಲ್ಲಿ ಭಾರೀ ಅಲ್ಲೋಲ ಕಲ್ಲೋಲವಾಗಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಎನ್‌ಡಿಎ ತೊರೆದು ಮತ್ತೊಮ್ಮೆ ಮಹಾಮೈತ್ರಿಕೂಟದೊಂದಿಗೆ ಸರ್ಕಾರ ರಚಿಸಿದ್ದು, ದಾಖಲೆಯ ಎಂಟನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ನಿತೀಶ್ ಅವರ ನಿರ್ಧಾರದಿಂದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಖುಷಿಗೆ ಪಾರವೇ ಇಲ್ಲದಂತಾಗಿದೆ. 32 ವರ್ಷದ ತೇಜಸ್ವಿ ಯಾದವ್, 2ನೇ ಬಾರಿಗೆ ಬಿಹಾರದ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಲಿದ್ದಾರೆ. ಇದಕ್ಕೂ ಮುನ್ನ 2015ರಲ್ಲಿಯೂ ಬಿಹಾರದ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ರಾಜಕೀಯ ಅಲ್ಲದೆ, ತೇಜಸ್ವಿ ಯಾದವ್ ಇನ್ನೊಂದು ಕ್ಷೇತ್ರದಲ್ಲೂ ತಮ್ಮ ಐಡೆಂಟಿಟಿ ಹೊಂದಿದ್ದಾರೆ. ಕ್ರಿಕೆಟ್‌ನೊಂದಿಗೂ ತೇಜಸ್ವಿ ಯಾದವ್ ನಂಟು ಹೊಂದಿದ್ದು, ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿಯ ಜೊತೆಯಲ್ಲಿ ಒಂದೇ ತಂಡದ ಪರವಾಗಿ ಆಟವಾಡಿದ್ದರು. ಅವರು ತಮ್ಮ ವೃತ್ತಿಜೀವನವನ್ನು ಕ್ರಿಕೆಟ್‌ನೊಂದಿಗೆ ಪ್ರಾರಂಭಿಸಿದರು, ಆದರೆ ಕ್ರಿಕೆಟ್‌ನಲ್ಲಿ ಯಶಸ್ಸು ಕಾಣಲು ಸಂಪೂರ್ಣವಾಗಿ ವಿಫಲರಾಗಿದ್ದರಯ. ತೇಜಸ್ವಿ ಮಧ್ಯಮ ಕ್ರಮಾಂಕದ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದು ಆಡುವ ದಿನಗಳಲ್ಲಿ ಪ್ರಖ್ಯಾತರಾಗಿದ್ದರು. ಕ್ರಿಕೆಟ್‌ನಲ್ಲಿ ಹೆಚ್ಚು ಅವಕಾಶ ಸಿಗದ ನಂತರ ತೇಜಸ್ವಿ ರಾಜಕೀಯಕ್ಕೆ ಬಂದಿದ್ದರು.
1989ರ ನವೆಂಬರ್ 9 ರಂದು ತೇಜಸ್ವಿ ಯಾದವ್ ಪಾಟ್ನಾದಲ್ಲಿ ಜನಿಸಿದ್ದರು. 11ನೇ ವರ್ಷದ ವೇಳೆಗಾಗಲೇ ಹಿರಿಯ ಕೋಚ್ ಎಂಪಿ ಸಿಂಗ್ ಅವರಿಂದ ಕ್ರಿಕೆಟ್ ತರಬೇತಿ ಪಡೆಯಲು ಆರಂಭಿಸಿದ್ದರು. ಹಿಂದೊಮ್ಮೆ ಎಂಪಿಸಿ ಸಿಂಗ್, ತೇಜಸ್ವಿ ಯಾದವ್ ಅವರೊಂದಿಗಿನ ತಮ್ಮ ಬಾಂಧವ್ಯ ಕ್ರಿಕೆಟ್‌ಗಿಂತ ಮಿಗಿಲಾದದ್ದು. ಅವರು ಮೈದಾನಕ್ಕೆ ಬಂದ ಕೂಡಲೇ ತನ್ನೊಂದಿಗೆ ಬರುತ್ತಿದ್ದ ಭದ್ರತಾ ಸಿಬ್ಬಂದಿಗಳಿಗೆ ಮೈದಾನಕ್ಕೆ ಬರದೇ ಇರುವಂತೆ ಹೇಳುತ್ತಿದ್ದ. ಮೈದಾನದಲ್ಲಿರುವ ಇತರ ಹುಡುಗರಿಗೆ ಇದರಿಂದ ಗಮನ ಬೇರೆ ಕಡೆಗೆ ಹೋಗುತ್ತದೆ ಎನ್ನುವ ಕಾರಣಕ್ಕೆ ಈ ರೀತಿ ಮಾಡುತ್ತಿದ್ದ ಎಂದು ಎಂಪಿ ಸಿಂಗ್ ಹೇಳುತ್ತಾರೆ.
ಸೀನಿಯರ್ ಕೆರಿಯರ್‌ನಲ್ಲಿ 7 ಪಂದ್ಯ ಆಡಿದ್ದ ತೇಜಸ್ವಿ ಯಾದವ್: ತೇಜಸ್ವಿ ಯಾದವ್, ತಮ್ಮ ಕ್ರಿಕೆಟ್ ಜೀವನದಲ್ಲಿ ಸೀನಿಯರ್ ವಿಭಾಗದಲ್ಲಿ ಕೇವಲ 7 ಪಂದ್ಯವಾಡಿದ್ದಾರೆ. ಇದರಲ್ಲಿ ಒಂದು ರಣಜಿ ಪಂದ್ಯ ಕೂಡ ಸೇರಿದೆ. ಎರಡು ಲಿಸ್ಟ್-ಎ ಪಂದ್ಯಗಳು ಹಾಗೂ ಮೂರು ಟಿ20 ಪಂದ್ಯಗಳನ್ನೂ ಆಡಿದ್ದಾರೆ. ತಮ್ಮ ಕ್ರಿಕೆಟ್ ಜೀವನದಲ್ಲಿ ಬರೀ 37 ರನ್ ಬಾರಿಸಿರುವ ತೇಜಸ್ವಿ ಯಾದವ್ ಒಂದು ವಿಕೆಟ್ ಕೂಡ ಉರುಳಿಸಿದ್ದಾರೆ. 2009ರಲ್ಲಿ ತಮ್ಮ ಕ್ರಿಕೆಟ್ ಜೀವನವನ್ನು ತೇಜಸ್ವಿ ಯಾದವ್ ಆರಂಭಿಸಿದ್ದರು. 2009ರ ಅಕ್ಟೋಬರ್ 20 ರಂದು ತ್ರಿಪುರ ವಿರುದ್ಧ ಜಾರ್ಖಂಡ್ ಪರವಾಗಿ ಅವರು ಟಿ20 ಪಂದ್ಯ ಅಡಿದ್ದರು. ಆದರೆ, ಈ ಪಂದ್ಯದಲ್ಲಿ ಬೌಲಿಂಗ್ ಆಗಲಿ ಬ್ಯಾಟಿಂಗ್ ಆಗಲಿ ಮಾಡಿರಲಿಲ್ಲ.
ರಣಜಿ ಪಂದ್ಯವನ್ನೂ ಆಡಿರುವ ತೇಜಸ್ವಿ ಯಾದವ್: ತೇಜಸ್ವಿ ಯಾದವ್ 2009ರ ನವೆಂಬರ್ 10 ರಂದು ತಮ್ಮ ಮೊದಲ ರಣಜಿ ಪಂದ್ಯ ಆಡಿದ್ದರು. ವಿದರ್ಭ ವಿರುದ್ಧ ಅವರು ಕಣಕ್ಕಿಳಿದಿದ್ದರು. ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 1 ರನ್ ಬಾರಿಸಿದ್ದ ತೇಜಸ್ವಿ 2ನೇ ಇನ್ನಿಂಗ್ಸ್‌ನಲ್ಲಿ 19 ರನ್ ಸಿಡಿಸಿದ್ದರು. ಬಳಿಕ ಬೌಲಿಂಗ್‌ನಲ್ಲಿ 17 ರನ್ ನೀಡಿದ್ದ ಅವರು, ವಿಕೆಟ್ ಪಡೆಯಲು ವಿಫಲರಾಗಿದ್ದರು. ತೇಜಸ್ವಿ 2010ರ ಫೆಬ್ರವರಿ 14 ರಂದು ಒಡಿಶಾ ವಿರುದ್ಧ ತಮ್ಮ ಮೊದಲ ಲಿಸ್ಟ್-ಎ ಪಂದ್ಯವನ್ನು ಆಡಿದರು. ಈ ಪಂದ್ಯದಲ್ಲಿ ಒಂಬತ್ತು ರನ್ ಗಳಿಸಿದ್ದಲ್ಲದೆ,ಬೌಲಿಂಗ್‌ನಲ್ಲಿ ಯಾವುದೇ ವಿಕೆಟ್ ಪಡೆಯದೆ 13 ರನ್‌ಗಳನ್ನು ಬಿಟ್ಟುಕೊಟ್ಟರು.
ಐಪಿಎಲ್ ಭಾಗವಾಗಿದ್ದ ತೇಜಸ್ವಿ: ಬಿಹಾರದ ಉಪಮುಖ್ಯಮಂತ್ರಿ ತಮ್ಮ ಮೊದಲ ಲಿಸ್ಟ್-ಎ ವಿಕಟ್‌ಅನ್ನು ತ್ರಿಪುರ ವಿರುದ್ಧ ಪಡೆದಿದ್ದರು. ಆದರೆ, ಇದೇ ಪಂದ್ಯ ಅವರ ವೃತ್ತಿಜೀವನದ ಕೊನೆಯ ಪಣದ್ಯ ಎನಿಸಿತು. ಇವುಗಳಲ್ಲದೆ, ತೇಜಸ್ವಿ ಯಾದವ್ 2008 ರಿಂದ 2012ರಲ್ಲಿ ಐಪಿಎಲ್ ತಂಡ ಡೆಲ್ಲಿ ಡೇರ್‌ಡೆವಿಲ್ಸ್‌ನ ಭಾಗವಾಗಿದ್ದರು. ಆದರೆ, ಪ್ಲೇಯಿಂಗ್ ಇಲೆವೆನ್‌ನಲ್ಲಿ ಒಮ್ಮೆಯೂ ಸ್ಥಾ ಪಡೆದಿರಲಿಲ್ಲ. ತೇಜಸ್ವಿ ಅವರನ್ನು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಎಂದು ಪರಿಗಣಿಸಲಾಗಿತ್ತು. ವೇಗದ ಬೌಲಿಂಗ್ ಮಾಡುವ ಸಾಮರ್ಥ್ಯವೂ ಅವರಲ್ಲಿತ್ತು.
ಬಿಹಾರದ ಸಿಎಂ ಆಗಿ ನಿತೀಶ್, ಡಿಸಿಎಂ ಆಗಿ ತೇಜಸ್ವಿ ಯಾದವ್ ಇಂದು ಶಪಥ
ನೀರಾದ್ರೂ ಕೊಡ್ತಿದ್ದಾನಲ್ಲ ಖುಷಿ ಪಡಿ ಎಂದಿದ್ದ ಲಾಲೂ: ನಾಲ್ಕು ಸೀಸನ್‌ಗಳಲ್ಲಿ ಐಪಿಎಲ್‌ನ ಭಾಗವಾಗಿದ್ದರೂ ಆಡಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ತೇಜಸ್ವಿ ಅವರ ತಂದೆ ಲಾಲು ಪ್ರಸಾದ್ ಅವರಿಗೆ ಈ ಪ್ರಶ್ನೆ ಕೇಳಲಾಗಿತ್ತು. ಕನಿಷ್ಠ ನನ್ನ ಮಗನಿಗಾದರೂ ಆಟಗಾರರಿಗೆ ನೀರು ಕೊಡುವ ಅವಕಾಶ ಸಿಕ್ಕಿದೆ ಎಂದು ವ್ಯಂಗ್ಯವಾಡಿದ್ದರು. ಎಲ್ಲಾ ನಾಲ್ಕು ಋತುಗಳಲ್ಲಿ, ತೇಜಸ್ವಿ ಹೆಚ್ಚುವರಿ ಆಟಗಾರನಾಗಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡದಲ್ಲಿದ್ದರು ಮತ್ತು ಆಟಗಾರರಿಗೆ ನೀರು ನೀಡುತ್ತಿದ್ದರು.
Tejashwi weds Rachel ರಾಚೆಲ್ ಜೊತೆ ಸಪ್ತಪದಿ ತುಳಿದ ಲಾಲೂ ಪುತ್ರ ತೇಜಸ್ವಿ
ವಿರಾಟ್ ಕೊಹ್ಲಿ ಜೊತೆ ಆಡಿದ್ದ ತೇಜಸ್ವಿ: ತೇಜಸ್ವಿ ದೆಹಲಿಯ ಅಂಡರ್-17 ಮತ್ತು ಅಂಡರ್-19 ಕ್ರಿಕೆಟ್ ತಂಡದಲ್ಲಿ ವಿರಾಟ್ ಕೊಹ್ಲಿ ಜೊತೆ ಕೂಡ ಆಡಿದ್ದಾರೆ. ದೆಹಲಿಯ ಅಂಡರ್-15 ತಂಡದಲ್ಲಿ ವಿರಾಟ್ ಕೊಹ್ಲಿಗೆ ತೇಜಸ್ವಿ ನಾಯಕರಾಗಿದ್ದರು ಎಂದು ಹಲವು ಮಾಧ್ಯಮ ವರದಿಗಳಲ್ಲಿ ಹೇಳಲಾಗಿದೆ. ತೇಜಸ್ವಿ 2008 ರ ವಿಶ್ವಕಪ್ ವಿಜೇತ ಅಂಡರ್-19 ಭಾರತೀಯ ಕ್ರಿಕೆಟ್ ತಂಡಕ್ಕಾಗಿ ಸ್ಟ್ಯಾಂಡ್‌ಬೈ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ತೇಜಸ್ವಿ ತಮ್ಮ ಕ್ರಿಕೆಟ್ ವೃತ್ತಿಜೀವನದ ಆರಂಭದಲ್ಲಿ ಮಹೇಂದ್ರ ಸಿಂಗ್ ಧೋನಿಯಂತೆ ಉದ್ದನೆಯ ಕೂದಲನ್ನು ಬಿಟ್ಟಿದ್ದರು.