Asianet Suvarna News Asianet Suvarna News

Big Bash League: ಸಿಡ್ನಿ ಸಿಕ್ಸರ್ಸ್‌ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ ಪರ್ತ್‌ ಸ್ಕ್ರಾಚರ್ಸ್‌

* ಬಿಗ್‌ಬ್ಯಾಶ್ ಲೀಗ್‌ನಲ್ಲಿ 4ನೇ ಬಾರಿಗೆ ಚಾಂಪಿಯನ್ ಆದ ಪರ್ತ್‌ ಸ್ಕ್ರಾಚರ್ಸ್‌

* ಸಿಡ್ನಿ ಸಿಕ್ಸರ್ಸ್‌ ಎದುರು ಭರ್ಜರಿ ಗೆಲುವು ದಾಖಲಿಸಿದ ಪರ್ತ್‌

* ಹೋಬರ್ಟ್‌ ಹರಿಕೇನ್ಸ್‌ ತಂಡದ ಬ್ಯಾಟರ್‌ ಬೆನ್ ಮೆಕ್‌ಡರ್ಮೊಟ್‌ಗೆ ಒಲಿದ ಸರಣಿ ಶ್ರೇಷ್ಠ ಗೌರವ

Big Bash League Perth Scorchers Crush Sydney Sixers and Clinch Title 4th time kvn
Author
Bengaluru, First Published Jan 28, 2022, 7:56 PM IST

ಮೆಲ್ಬೊರ್ನ್‌(ಜ.28): ನಾಯಕ ಆಸ್ಟನ್ ಟರ್ನರ್ ಹಾಗೂ ಲೌರಿ ಇವಾನ್ಸ್‌ ಬಾರಿಸಿದ ಆಕರ್ಷಕ ಅರ್ಧಶತಕ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ 2021-22ನೇ ಸಾಲಿನ ಬಿಗ್‌ಬ್ಯಾಶ್ ಲೀಗ್ (Big Bash League) ಟಿ20 ಟೂರ್ನಿಯ ಫೈನಲ್‌ನಲ್ಲಿ ಸಿಡ್ನಿ ಸಿಕ್ಸರ್ಸ್ (Sydney Sixers) ತಂಡವನ್ನು ಮಣಿಸಿದ ಪರ್ತ್‌ ಸ್ಕ್ರಾಚರ್ಸ್‌ (Perth Scorchers) ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್‌ನಲ್ಲಿ ಪರ್ತ್‌ ಸ್ಕ್ರಾಚರ್ಸ್‌ ತಂಡವು ಬರೋಬ್ಬರಿ 79 ರನ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ. 

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪರ್ತ್‌ ಸ್ಕ್ರಾಚರ್ಸ್‌ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಪರ್ತ್‌ ಸ್ಕ್ರಾಚರ್ಸ್‌ ತಂಡವು 25 ರನ್‌ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ನಾಲ್ವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ಇಂತಹ ಸಂದರ್ಭದಲ್ಲಿ 5ನೇ ವಿಕೆಟ್‌ಗೆ ಜತೆಯಾದ ಆಸ್ಟನ್ ಟರ್ನರ್ (Ashton Turner) ಹಾಗೂ ಲೌರಿ ಇವಾನ್ಸ್ (Laurie Evans) ಜೋಡಿ 104 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ನಾಯಕ ಆಸ್ಟನ್ ಟರ್ನರ್ ಕೇವಲ 35 ಎಸೆತಗಳಲ್ಲಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 54 ರನ್ ಬಾರಿಸಿ ವಿಕೆಟ್‌ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಚುರುಕಾಗಿ ರನ್‌ ಗಳಿಸಿ ಲೌರಿ ಇವಾನ್ಸ್‌ 41 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 76 ರನ್ ಚಚ್ಚಿದರು. ಕೊನೆಯಲ್ಲಿ ಆಸ್ಟನ್ ಅಗರ್ 15 ರನ್ ಬಾರಿಸುವ ಮೂಲಕ ತಂಡ ಸವಾಲಿನ ಮೊತ್ತ ಕಲೆಹಾಕಲು ನೆರವಾದರು. ಅಂತಿಮವಾಗಿ ಪರ್ತ್‌ ಸ್ಕ್ರಾಚರ್ಸ್‌ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 171 ರನ್‌ ಗಳಿಸಿತು.

ಇನ್ನು ಸವಾಲಿನ ಗುರಿ ಬೆನ್ನತ್ತಿದ ಸಿಡ್ನಿ ಸಿಕ್ಸರ್‌ ತಂಡವು ಆರಂಭದಲ್ಲೇ ಫಾರ್ಮ್‌ನಲ್ಲಿದ್ದಂತಹ ಹೇಡನ್ ಕೆರ್ರ್ ವಿಕೆಟ್‌ ಕಳೆದುಕೊಂಡಿತು. ಇನ್ನು ನಿಕೋಲಸ್ ಬ್ರಿಟೋಸ್ (15) ಕೂಡ ಹೆಚ್ಚುಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲಿಲ್ಲ. ಡೇನಿಯಲ್ ಹ್ಯೂಸ್‌ ಕೆಲಕಾಲ ಪರ್ತ್ ಬೌಲರ್‌ಗಳನ್ನು ಕಾಡಿದರು. ಡೇನಿಯಲ್ ಹ್ಯೂಸ್ (Daniel Hughes) 33 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 42 ರನ್ ಬಾರಿಸಿ ವಿಕೆಟ್‌ ಒಪ್ಪಿಸಿದರು.

West Indies Squad: ಭಾರತ ಎದುರಿನ ಏಕದಿನ ಸರಣಿಗೆ ಬಲಿಷ್ಠ ವೆಸ್ಟ್ ಇಂಡೀಸ್ ತಂಡ ಪ್ರಕಟ..!

ಪೆವಿಲಿಯನ್ ಪೆರೇಡ್ ನಡೆಸಿದ ಸಿಡ್ನಿ ಸಿಕ್ಸರ್ಸ್‌ ಬ್ಯಾಟರ್‌ಗಳು: ಒಂದು ಹಂತದಲ್ಲಿ 45 ರನ್‌ಗಳವರೆಗೆ ಕೇವಲ 2 ವಿಕೆಟ್ ಕಳೆದುಕೊಂಡಿದ್ದ ಸಿಡ್ನಿ ಸಿಕ್ಸರ್ಸ್ ತಂಡವು ಇದಾದ ಬಳಿಕ ದಿಢೀರ್ ಕುಸಿತ ಕಂಡಿತು. ನಾಯಕ ಮೊಯ್ಸಿಸ್‌ ಹೆನ್ರಿಕೇಸ್, ಡೇನಿಯಲ್ ಕ್ರಿಶ್ಚಿಯನ್(Daniel Christian), ಸೀನ್ ಅಬ್ಬೋಟ್‌ ಸೇರಿದಂತೆ ಬಹುತೇಕ ಆಟಗಾರರು ಒಂದಂಕಿ ಮೊತ್ತಕ್ಕೆ ವಿಕೆಟ್‌ ಒಪ್ಪಿಸಿದರು. ಪರಿಣಾಮ ಸಿಡ್ನಿ ಸಿಕ್ಸರ್ಸ್‌ ತಂಡವು 16.2 ಓವರ್‌ಗಳಲ್ಲಿ ಕೇವಲ 92 ರನ್‌ಗಳಿಗೆ ಸರ್ವಪತನ ಕಂಡಿತು.

ಇನ್ನು 2021-21ನೇ ಸಾಲಿನ ಬಿಗ್‌ಬ್ಯಾಶ್ ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರಿದ ಹೋಬರ್ಟ್‌ ಹರಿಕೇನ್ಸ್‌ (Hobart Hurricanes) ತಂಡದ ಬ್ಯಾಟರ್‌ ಬೆನ್ ಮೆಕ್‌ಡರ್ಮೊಟ್‌ (Ben Mcdermott) ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಬೆನ್ ಮೆಕ್‌ಡರ್ಮೊಟ್‌ ಟೂರ್ನಿಯಲ್ಲಿ 2 ಶತಕ, ಮೂರು ಅರ್ಧಶತಕ ಸಹಿತ 577 ರನ್‌ ಸಿಡಿಸಿ ಗಮನ ಸೆಳೆದಿದ್ದರು. 

 

Follow Us:
Download App:
  • android
  • ios