West Indies Squad: ಭಾರತ ಎದುರಿನ ಏಕದಿನ ಸರಣಿಗೆ ಬಲಿಷ್ಠ ವೆಸ್ಟ್ ಇಂಡೀಸ್ ತಂಡ ಪ್ರಕಟ..!
* ಭಾರತ ವಿರುದ್ದದ ಏಕದಿನ ಸರಣಿಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಪ್ರಕಟ
* 2019ರ ಬಳಿಕ ಏಕದಿನ ತಂಡದಲ್ಲಿ ಸ್ಥಾನ ಪಡೆದ ವೇಗಿ ಕೀಮಾರ್ ರೋಚ್
* ಫೆಬ್ರವರಿ 06ರಿಂದ 3 ಪಂದ್ಯಗಳ ಏಕದಿನ ಸರಣಿ ಆರಂಭ
ಸೇಂಟ್ ಜಾನ್ಸ್(ಜ.28): ಮುಂದಿನ ತಿಂಗಳು ಭಾರತದ ವಿರುದ್ಧ ನಡೆಯಲಿರುವ ಏಕದಿನ ಸರಣಿಗೆ 15 ಮಂದಿಯ ವೆಸ್ಟ್‌ಇಂಡೀಸ್ ತಂಡ (West Indies Cricket Squad) ಪ್ರಕಟಗೊಂಡಿದ್ದು, 2019ರ ಬಳಿಕ ಮೊದಲ ಬಾರಿಗೆ ವೇಗಿ ಕೀಮಾರ್ ರೋಚ್ (Kemar Roach) ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕೀರನ್ ಪೊಲ್ಲಾರ್ಡ್(Kieron Pollard) ತಂಡವನ್ನು ಮುನ್ನಡೆಸಲಿದ್ದಾರೆ. ಅಲ್ರೌಂಡರ್ ಎನ್‌ಕ್ರುಮಾ ಬೊನೆರ್ ಕೂಡಾ ವರ್ಷದ ಬಳಿಕ ತಂಡಕ್ಕೆ ಮರಳಿದ್ದಾರೆ.
ಕೀಮಾರ್ ರೋಚ್ 92 ಏಕದಿನ ಪಂದ್ಯಗಳಿಂದ 124 ವಿಕೆಟ್ ಕಬಳಿಸಿದ್ದಾರೆ. ಬರೋಬ್ಬರಿ 3 ವರ್ಷಗಳ ಬಳಿಕ ರೋಚ್ ಏಕದಿನ ಕ್ರಿಕೆಟ್‌ಗೆ ರಾಷ್ಟ್ರೀಯ ತಂಡವನ್ನು ಕೂಡಿಕೊಂಡಿದ್ದಾರೆ. ಇನ್ನು ಕಳೆದ ವರ್ಷ ಬಾಂಗ್ಲಾದೇಶ ವಿರುದ್ದ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಎನ್‌ಕ್ರುಮಾ ಬೊನೆರ್ ಕೂಡಾ ಮತ್ತೊಮ್ಮೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಐಸಿಸಿ ಏಕದಿನ ಸೂಪರ್ ಲೀಗ್‌ನ ಭಾಗವಾಗಿರುವ 3 ಪಂದ್ಯಗಳ ಸರಣಿ ಅಹಮದಾಬಾದ್‌ನಲ್ಲಿ ಫೆಬ್ರವರಿ 6ಕ್ಕೆ ಆರಂಭವಾಗಲಿದ್ದು. ಮತ್ತೆರಡು ಪಂದ್ಯಗಳು ಇದೇ ಕ್ರೀಡಾಂಗಣದಲ್ಲಿ ಫೆಬ್ರವರಿ 9, ಫೆಬ್ರವರಿ 11ಕ್ಕೆ ನಡೆಯಲಿದೆ. ವೆಸ್ಟ್ ಇಂಡೀಸ್ ತಂಡವು ಭಾರತ ಪ್ರವಾಸದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.
Ind vs WI : ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ, ದೀಪಕ್ ಹೂಡಾ ಅಚ್ಚರಿಯ ಆಯ್ಕೆ
ಮೊದಲಿಗೆ ಮೂರು ಪಂದ್ಯಗಳ ಏಕದಿನ ಸರಣಿಯು ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇನ್ನು ಫೆಬ್ರವರಿ 16, 18 ಹಾಗೂ 21ರಂದು ಮೂರು ಪಂದ್ಯಗಳ ಟಿ20 ಸರಣಿಯು ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿದೆ.
ವೆಸ್ಟ್ ಇಂಡೀಸ್ ತಂಡ:
ಕೀರನ್ ಪೊಲ್ಲಾರ್ಡ್(ನಾಯಕ), ಆ್ಯಲನ್, ಬೊನರ್, ಡರೆನ್ ಬ್ರಾವೋ, ಬ್ರೂಕ್ಸ್, ಹೋಲ್ಡರ್, ಹೋಪ್, ಹೊಸೆನ್, ಜೋಸೆಫ್, ಕಿಂಗ್, ಪೂರನ್, ರೋಚ್, ಶೆಫರ್ಡ್, ಸ್ಮಿತ್, ವಾಲ್ಶ್ ಜೂ.
ಮೊದಲು ಟಿ20 ನಡೆಸಲು ಬಿಸಿಸಿಐಗೆ ಲಂಕಾ ಮನವಿ
ಕೊಲಂಬೊ: ಮುಂದಿನ ತಿಂಗಳು ನಡೆಯಲಿರುವ ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವಿನ ಸರಣಿಗಳ ವೇಳಾಪಟ್ಟಿಬದಲಾಗುವ ಸಾಧ್ಯತೆ ಇದೆ. ಫೆ.25ರಿಂದ 2 ಪಂದ್ಯಗಳ ಟೆಸ್ಟ್ ಸರಣಿ ಆರಂಭಗೊಳ್ಳಬೇಕಿದ್ದು, ಮಾರ್ಚ್ 13ರಿಂದ 3 ಪಂದ್ಯಗಳ ಟಿ20 ಸರಣಿ ನಡೆಯಬೇಕಿದೆ.
ಆದರೆ ಟೆಸ್ಟ್ ಬದಲು ಮೊದಲು ಟಿ20 ಸರಣಿ ನಡೆಸುವಂತೆ ಬಿಸಿಸಿಐಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ (Sri Lanka Cricket) ಮನವಿ ಸಲ್ಲಿಸಿದೆ. ಭಾರತಕ್ಕೆ ಆಗಮಿಸುವ ಮೊದಲು ಲಂಕಾ ತಂಡ ಆಸ್ಪ್ರೇಲಿಯಾದಲ್ಲಿ ಟಿ20 ಸರಣಿ ಆಡಲಿದೆ. ಟಿ20 ತಂಡವನ್ನು ಒಂದು ಬಯೋಬಬಲ್‌ನಿಂದ ಮತ್ತೊಂದು ಬಯೋಬಬಲ್‌ಗೆ ಕಳುಹಿಸಲು ಅನುಕೂಲವಾಗಲಿದೆ ಎನ್ನುವ ಕಾರಣಕ್ಕೆ ಲಂಕಾ ಮನವಿ ಸಲ್ಲಿಸಿದೆ.
ಅಂಡರ್-19 ವಿಶ್ವಕಪ್: ಸೆಮೀಸ್‌ಗೆ ಇಂಗ್ಲೆಂಡ್
ಆ್ಯಂಟಿಗಾ: ಐಸಿಸಿ ಅಂಡರ್-19 ಏಕದಿನ ವಿಶ್ವಕಪ್‌ನಲ್ಲಿ ಮಾಜಿ ಚಾಂಪಿಯನ್ ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶಿಸಿದೆ. ಬುಧವಾರ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ 6 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 43.4 ಓವರ್‌ಗಳಲ್ಲಿ 209 ರನ್‌ಗೆ ಆಲೌಟಾಯಿತು. ಒಂದೆಡೆ ಸತತ ವಿಕೆಟ್ ಕಳೆದುಕೊಳ್ಳುತ್ತಿದ್ದರೂ ಕ್ರೀಸ್ ಕಚ್ಚಿ ನಿಂತ ಡೆವಾಲ್ಡ್ ಬ್ರೆವಿಸ್ 88 ಎಸೆತಗಳಲ್ಲಿ 97 ರನ್ ಸಿಡಿಸಿದರು. ಇಂಗ್ಲೆಂಡ್‌ನ ರೆಹಾನ್ ಅಹ್ಮದ್ 4 ವಿಕೆಟ್ ಕಿತ್ತರು. ಸಾಧಾರಣ ಗುರಿ ಬೆನ್ನತ್ತಿದ ಇಂಗ್ಲೆಂಡ್ 31.2 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಜಾಕೊಬ್ ಬೆಥೆಲ್ ಕೇವಲ 42 ಎಸೆತಗಳಲ್ಲಿ 88 ರನ್ ಸಿಡಿಸಿದರೆ, ವಿಲಿಯಂ ಲಕ್ಷ್‌ಟನ್ ಅಜೇಯ 47 ರನ್ ಗಳಿಸಿದರು.