ಲಾಹೋರ್[ಅ.08]: ಯುವ ಕ್ರಿಕೆಟಿಗ ಭಾನುಕ ರಾಜಪಕ್ಸೆ ಸಿಡಿಸಿದ ಚೊಚ್ಚಲ ಅರ್ಧಶತಕ ಹಾಗೂ ನುವಾನ್ ಪ್ರದೀಪ್ ಮತ್ತು ವನಿಂದು ಹಸರಂಗ ಮಿಂಚಿನ ಬೌಲಿಂಗ್ ನೆರವಿನಿಂದ ಶ್ರೀಲಂಕಾ ತಂಡವು 35 ರನ್ ಗಳಿಂದ ಪಾಕಿಸ್ತಾನ ತಂಡವನ್ನು ಮಣಿಸಿದೆ. ಈ ಮೂಲಕ 3 ಪಂದ್ಯಗಳ ಟಿ20 ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಶ್ರೀಲಂಕಾ ಸರಣಿ ಕೈವಶ ಮಾಡಿಕೊಂಡಿದೆ. ಇದರೊಂದಿಗೆ ಪಾಕಿಸ್ತಾನದಲ್ಲಿ ಟಿ20 ಸರಣಿ ಗೆದ್ದ ಮೊದಲ ತಂಡ ಎನ್ನುವ ಗೌರವಕ್ಕೆ ಶ್ರೀಲಂಕಾ ಪಾತ್ರವಾಗಿದೆ. 

ಲಂಕಾ ವಿರುದ್ಧ ಪಾಕ್‌ಗೆ ಏಕದಿನ ಸರಣಿ ಜಯ

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಆರಂಭಿಕ ಆಘಾತದ ಹೊರತಾಗಿಯೂ,  ಭಾನುಕ ರಾಜಪಕ್ಸೆ ಸ್ಫೊಟಕ ಬ್ಯಾಟಿಂಗ್[4 ಬೌಂಡರಿ ಹಾಗೂ 6 ಸಿಕ್ಸರ್] 77 ರನ್ ಹಾಗೂ ಶೆನಾನ್ ಜಯಸೂರ್ಯ 34 ರನ್’ಗಳ ನೆರವಿನಿಂದ ನಿಗದಿತ 20 ಓವರ್’ಗಳಲ್ಲಿ 6 ವಿಕೆಟ್ ಕಳೆದುಕೊಂಡು 182 ರನ್ ಬಾರಿಸಿತ್ತು. ಪಾಕಿಸ್ತಾನ ಪರ ವಹಾಬ್ ರಿಯಾಜ್, ಇಮಾದ್ ವಾಸೀಂ ಹಾಗೂ ಶಾದಬ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದರು. ಆವಿಷ್ಕೋ ಫರ್ನಾಂಡೊ, ಶೆನಾನ್ ಜಯಸೂರ್ಯ ಹಾಗೂ ಮಿನೊದ್ ಭಾನುಕ ರನೌಟ್ ಆದರು. 

ಪಾಕ್‌-ಲಂಕಾ ಪಂದ್ಯಕ್ಕೆ ಕರೆಂಟ್‌ ಇಲ್ಲ..!

ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಾಕಿಸ್ತಾನ ಕೂಡಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ತಂಡದ ಮೊತ್ತ 11 ರನ್’ಗಳಾಗುವಷ್ಟರಲ್ಲಿ ಪಾಕ್ ಆರಂಭಿಕರಿಬ್ಬರೂ ಪೆವಿಲಿಯನ್ ಸೇರಿದರು. ಇನ್ನು ತಂಡಕ್ಕೆ ಚೇತರಿಕೆ ನೀಡಲು ಯತ್ನಿಸುತ್ತಿದ್ದ ಅಹಮ್ಮದ್ ಶೆಹಜಾದ್[13], ಸರ್ಫರಾಜ್ ಅಹಮ್ಮದ್[26] ಹಾಗೂ ಉಮರ್ ಅಕ್ಮಲ್’ರನ್ನು ಒಂದೇ ಓವರ್’ನಲ್ಲಿ ವನಿಂದು ಹಸರಂಗ ಪೆವಿಲಿಯನ್’ಗೆ ಅಟ್ಟುವ ಮೂಲಕ ಪಾಕ್ ಬ್ಯಾಟಿಂಗ್ ಬೆನ್ನುಲಬನ್ನೇ ಮುರಿದರು. ಉಮರ್ ಅಕ್ಮಲ್ ಕಳೆದೆರಡು ಪಂದ್ಯಗಳಲ್ಲೂ ಮೊದಲ ಎಸೆತದಲ್ಲೇ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಕೊನೆಯಲ್ಲಿ ಮಾರಕ ದಾಳಿ ನಡೆಸಿದ  ನುವಾನ್ ಪ್ರದೀಪ್ ಪಾಕ್ ನಿಂದ ಗೆಲುವನ್ನು ಕಸಿದುಕೊಂಡರು. ಕೆಲಕಾಲ ಆಸಿಫ್ ಅಲಿ[29] ಹಾಗೂ ಇಮಾದ್ ವಾಸೀಂ[47] ದಿಟ್ಟ ಹೋರಾಟ ನಡೆಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

ICC ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ರೋಹಿತ್‌ಗೆ ಬಂಪರ್..!

ಲಂಕಾ ಪರ ನುವಾನ್ ಪ್ರದೀಪ್ 4 ವಿಕೆಟ್ ಪಡೆದರೆ, ವನಿಂದು ಹಸರಂಗ 3, ಇಸಾರು ಉದಾನ 2 ಹಾಗೂ ಕುಸಾನ ರಂಜಿತಾ ಒಂದು ಒಂದು ವಿಕೆಟ್ ಪಡೆದು ಮಿಂಚಿದರು.
ಟಿ20 ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿರುವ ಪಾಕಿಸ್ತಾನ ತಂಡವನ್ನು ಅವರದ್ದೇ ನೆಲದಲ್ಲಿ 8ನೇ ಶ್ರೇಯಾಂಕಿತ ಲಂಕಾ ತಂಡ ಸೋಲಿಸಿದೆ. ಮೂರನೇ ಹಾಗೂ ಕೊನೆಯ ಟಿ20 ಪಂದ್ಯ ಅಕ್ಟೋಬರ್ 09ರಂದು ನಡೆಯಲಿದೆ.