ಮ್ಯಾಂಚೆ​ಸ್ಟರ್‌(ಜು.21): ವೆಸ್ಟ್‌ಇಂಡೀಸ್‌ ವಿರು​ದ್ಧದ 2ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ 113 ರನ್‌ಗಳ ಭರ್ಜರಿ ಗೆಲುವು ಪಡೆ​ಯುವ ಮೂಲಕ, 3 ಪಂದ್ಯ​ಗಳ ಸರ​ಣಿ​ಯಲ್ಲಿ 1-1ರ ಸಮ​ಬಲ ಸಾಧಿ​ಸಿದೆ. 

ಗೆಲು​ವಿಗೆ 312 ರನ್‌ಗಳ ಗುರಿ ಬೆನ್ನ​ತ್ತಿದ್ದ ವಿಂಡೀಸ್‌, 2ನೇ ಇನ್ನಿಂಗ್ಸ್‌ನಲ್ಲಿ 198 ರನ್‌ಗಳಿಗೆ ಆಲೌಟ್‌ ಆಯಿತು. ಬ್ರೂಕ್ಸ್‌ (62) ಹಾಗೂ ಬ್ಲ್ಯಾಕ್‌ವುಡ್‌ (55) ಹೋರಾಟ ಯಶ​ಸ್ವಿ​ಯಾ​ಗ​ಲಿಲ್ಲ. ಇಂಗ್ಲೆಂಡ್ ಸಂಘಟಿತ ಬೌಲಿಂಗ್ ಪ್ರದರ್ಶನಕ್ಕೆ ಕೆರಿಬಿಯನ್ನರು ತತ್ತರಿಸಿ ಹೋದರು. ಒಂದು ಹಂತದಲ್ಲಿ ವೆಸ್ಟ್ ಇಂಡೀಸ್ 37 ರನ್‌ಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖ ಮಾಡಿತ್ತು. ಆದರೆ ಬ್ಲಾಕ್‌ವುಡ್ ಹಾಗೂ ಬ್ರೂಕ್ಸ್ ಆಂಗ್ಲ ಬೌಲರ್‌ಗಳೆದುರು ದಿಟ್ಟ ಪ್ರತಿರೋಧ ತೋರಿದರು. ಕೊನೆಯಲ್ಲಿ ನಾಯಕ ಜೇಸನ್ ಹೋಲ್ಡರ್(35) ಏಕಾಂಗಿ ಹೋರಾಟ ಮಾಡಿದರಾದರೂ ಅವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಹಕಾರ ದೊರೆಯಲಿಲ್ಲ.

2ನೇ ಟೆಸ್ಟ್‌: ರೋಚಕ ಘಟ್ಟದತ್ತ ಆಂಗ್ಲೋ-ವಿಂಡೀಸ್ ಟೆಸ್ಟ್

ಇದಕ್ಕೂ ಮೊದಲು 5ನೇ ದಿನದಾಟವನ್ನು ಭರ್ಜ​ರಿ​ಯಾಗಿ ಆರಂಭಿ​ಸಿದ ಇಂಗ್ಲೆಂಡ್‌, 2ನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌ ನಷ್ಟಕ್ಕೆ 129 ರನ್‌ ಗಳಿಸಿ ಡಿಕ್ಲೇರ್‌ ಮಾಡಿ​ಕೊಂಡಿತು. ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಬೆನ್ ಸ್ಟೋಕ್ಸ್ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 57 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ ಅಜೇಯ 78 ರನ್ ಬಾರಿಸಿದರು. ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನ ತೋರಿದ ಬೆನ್ ಸ್ಟೋಕ್ಸ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.
ಇನ್ನು ಸರಣಿಯ ಮೂರನೇ ಹಾಗೂ ನಿರ್ಣಾಯಕ ಪಂದ್ಯವು ಜುಲೈ 24ರಿಂದ ಮ್ಯಾಂಚೆಸ್ಟರ್ ಮೈದಾನದಲ್ಲಿ ನಡೆಯಲಿದೆ

ಸ್ಕೋರ್‌: ಇಂಗ್ಲೆಂಡ್‌ 469/9 ಡಿ. ಹಾಗೂ 129/3 ಡಿ., 
ವಿಂಡೀಸ್‌ 287 ಹಾಗೂ 198