ಮ್ಯಾಂಚೆಸ್ಟರ್(ಜು.20): ಪ್ರವಾಸಿ ವೆಸ್ಟ್‌ ಇಂಡೀಸ್ ವಿರುದ್ಧ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದ್ದ ಇಂಗ್ಲೆಂಡ್‌ ಎರಡನೇ ಇನಿಂಗ್ಸ್‌ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡಿದೆ. ಹೀಗಾಗಿ ಎರಡನೇ ಟೆಸ್ಟ್ ಪಂದ್ಯದ ಅಂತಿಮ ದಿನದ ಮೇಲೆ ಕ್ರಿಕೆಟ್ ಪ್ರೇಕ್ಷಕರ ಚಿತ್ತ ನೆಟ್ಟಿದೆ.

ಹೌದು, ಮೂರನೇ ದಿನದಾಟವು ಒಂದೂ ಎಸೆತ ಕಾಣದೇ ರದ್ದಾಗಿತ್ತು. ಆದೆ ನಾಲ್ಕನೇ ದಿನದಾಟದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 287 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಇಂಗ್ಲೆಂಡ್ ಬೌಲರ್‌ಗಳು ಯಶಸ್ವಿಯಾದರು. ಕ್ರೇಗ ಬ್ರಾಥ್‌ವೇಟ್(75), ಸಮರ್ಥ್ ಬ್ರೂಕ್ಸ್(68) ಹಾಗೂ ರೋಸ್ಟನ್ ಚೇಸ್(51) ಆಕರ್ಷಕ ಅರ್ಧಶತಕದ ಹೊರತಾಗಿಯೂ ವಿಂಡೀಸ್ ನಾಟಕೀಯ ಕುಸಿತ ಕಂಡಿತು. ಕೆರಿಬಿಯನ್ ಪಾಳಯದ ಕೊನೆಯ ಐವರು ಬ್ಯಾಟ್ಸ್‌ಮನ್‌ಗಳು ಎರಡಂಕಿ ಮೊತ್ತ ದಾಖಲಿಸಲು ವಿಫಲರಾದರು. ಬ್ರಾಡ್. ವೋಕ್ಸ್  ತಲಾ ಮೂರು ವಿಕೆಟ್ ಪಡೆದರೆ, ಕರ್ರನ್ 2 ಹಾಗೂ ಸ್ಟೋಕ್ಸ್ ಹಾಗೂ ಬ್ಲೆಸ್ ತಲಾ ಒಂದೊಂದು ವಿಕೆಟ್ ಪಡೆದರು.

ಒಟ್ಟಾರೆ 182 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್‌ಗೆ ಕೀಮರ್ ರೋಚ್ ಶಾಕ್ ನೀಡಿದ್ದಾರೆ. ಚುರುಕಾಗಿ ರನ್‌ಗಳಿಸುವ ಉದ್ದೇಶದಿಂದ ಇಂಗ್ಲೆಂಡ್ ಆರಂಭಿಕಾಗಿ ಜೋಸ್ ಬಟ್ಲರ್ ಹಾಗೂ ಬೆನ್ ಸ್ಟೋಕ್ಸ್ ಕಣಕ್ಕಿಳಿದರು. ಬಟ್ಲರ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರೆ, ಜಾಕ್ ಕ್ರಾವ್ಲಿ 11 ರನ್ ಬಾರಿಸಿ ಕ್ಲೀನ್ ಬೌಲ್ಡ್ ಆದರು. ಇದೀಗ ಸ್ಟೋಕ್ಸ್ 16 ಹಾಗೂ ನಾಯಕ ಜೋ ರೂಟ್ 8 ರನ್ ಗಳಿಸಿ ಐದನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ನಾಲ್ಕನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 219 ರನ್ ಮುನ್ನಡೆ ಸಾಧಿಸಿದೆ.

ಡೆಕ್ಕನ್‌ ಚಾರ್ಜರ್ಸ್‌ಗೆ ಬಿಸಿ​ಸಿಐನಿಂದ 4800 ಕೋಟಿ ಪರಿಹಾರ?

ಮೊದಲ ಸೆಷನ್‌ನಲ್ಲಿ ವೇಗವಾಗಿ ರನ್‌ಗಳಿಸಿ ಇಂಗ್ಲೆಂಡ್ ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಇನ್ನು ವಿಂಡೀಸ್ ಪಾಳಯಕ್ಕೆ ಈ ಪಂದ್ಯ ಗೆಲುವು ಕಷ್ಟಸಾಧ್ಯವಿರುವುದರಿಂದ ಡ್ರಾ ಮಾಡಿಕೊಳ್ಳಲು ಪ್ರಯತ್ನಿಸಬಹುದು.

ಸಂಕ್ಷಿಪ್ತ ಸ್ಕೋರ್:
ಇಂಗ್ಲೆಂಡ್: 469/9D &37/2
ವೆಸ್ಟ್ ಇಂಡೀಸ್: 287/10
(* ನಾಲ್ಕನೇ ದಿನದಾಟದ ಅಂತ್ಯಕ್ಕೆ)