ನವದೆಹಲಿ(ನ.13): ಟಿ20 ಕ್ರಿಕೆಟ್‌ನಲ್ಲಿ ಭಾರತ ಪರ ಚೊಚ್ಚಲ ಹ್ಯಾಟ್ರಿಕ್ ವಿಕೆಟ್ ಪಡೆದ ವೇಗಿ ದೀಪಕ್ ಚಹರ್ ಸಾಧನೆ ಹಿಂದೆ ರೋಚಕ ಕಥೆಯೊಂದಿದೆ. 11 ವರ್ಷಗಳ ಹಿಂದೆ, ಭಾರತ ತಂಡದ ಮಾಜಿ ಕೋಚ್ ಹಾಗೂ ರಾಜಸ್ಥಾನ ಕ್ರಿಕೆಟ್ ಸಂಸ್ಥೆಯ ಮಾಜಿ ನಿರ್ದೇಶಕ ಗ್ರೆಗ್ ಚಾಪೆಲ್, ದೀಪಕ್‌ರನ್ನು ತಿರಸ್ಕರಿಸಿದ್ದರು. ರಾಜ್ಯ ತಂಡಕ್ಕಾಗಿ ಅಂತಿಮ 50 ಆಟಗಾರರ ಪಟ್ಟಿಯಲ್ಲಿ ದೀಪಕ್‌ಗೆ ಸ್ಥಾನ ನೀಡಿರಲಿಲ್ಲ ಎನ್ನುವ ಕುತೂಹಲಕಾರಿ ಅಂಶ ಮತ್ತೊಮ್ಮೆ ಸುದ್ದಿ ಯಾಗುತ್ತಿದೆ.

ಇದನ್ನೂ ಓದಿ: ICC ಟಿ20 ರ‍್ಯಾಂಕಿಂಗ್ ಪ್ರಕಟ: ಹ್ಯಾಟ್ರಿಕ್ ವೀರ ದೀಪಕ್ ಚಹರ್’ಗೆ ಬಂಪರ್..!

2008 ರಲ್ಲಿ ದೀಪಕ್ ಫಿಟ್ನೆಸ್ ಟೆಸ್ಟ್‌ನಲ್ಲಿ ಎಲ್ಲರಿಗಿಂತ ಉತ್ತಮ ಅಂಕ ಗಳಿಸಿದ್ದರು. ಆದರೂ ಅವರನ್ನು ಆಯ್ಕೆಗೆ ಪರಿಗಣಿಸಿರಲಿಲ್ಲ. ಈ ಬಗ್ಗೆ ಚಾಪೆಲ್ ಬಳಿ ದೀಪಕ್ ಪ್ರಶ್ನಿಸಿದಾಗ, ‘ನೀನು ಕ್ರಿಕೆಟ್‌ನಲ್ಲಿ ಬಹಳ ದೂರ ಸಾಗುತ್ತೀಯ ಎನ್ನುವ ನಂಬಿಕೆ ನನಗಿಲ್ಲ’ ಎಂದಿದ್ದರಂತೆ. ಈ ಘಟನೆಯನ್ನು ನೆನಪಿಸಿಕೊಂಡಿರುವ ದೀಪಕ್, ‘ನನ್ನ ವೃತ್ತಿಬದುಕಿನಲ್ಲಿ ಅದೊಂದೇ ದಿನ ನಾನು ಕಣ್ಣೀರು ಹಾಕಿದ್ದು. ಆದರೆ ಚಾಪೆಲ್ ನನ್ನನ್ನು ತಿರಸ್ಕರಿಸಿದ್ದರಿಂದ ನನ್ನಲ್ಲಿ ಛಲ ಹೆಚ್ಚಾಯಿತು.  ಎರಡೇ ವರ್ಷದಲ್ಲಿ ರಾಜಸ್ಥಾನ ರಣಜಿ ಟ್ರೋಫಿ ತಂಡದಲ್ಲಿ ಸ್ಥಾನ ಪಡೆದೆ’ ಎಂದಿದ್ದಾರೆ.

ಇದನ್ನೂ ಓದಿ: ಬಾಂಗ್ಲಾ ವಿರುದ್ದ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ದಾಖಲೆ ಬರೆದ ದೀಪಕ್ ಚಹಾರ್!

ಗಾಯದ ಸಮಸ್ಯೆ: ರಣಜಿಗೆ ಪಾದಾರ್ಪಣೆ ಮಾಡುತ್ತಿದ್ದಂತೆ ದೀಪಕ್ ಭಾರೀ ಸದ್ದು ಮಾಡಿದರು. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 10 ರನ್‌ಗೆ 8ವಿಕೆಟ್ ಕಿತ್ತು ಎಲ್ಲರ ಗಮನ ಸೆಳೆದರು. ಆದರೆ ಮುಂದಿನ 3 ವರ್ಷಗಳು ಗಾಯದ ಸಮಸ್ಯೆಗಳಿಂದ ಬಳಲಿದರು. ಮೊದಲು ಕಾಮಾಲೆ ಕಾಯಿಲೆಯಿಂದ ಬಳಲಿದ ದೀಪಕ್, ಬಳಿಕ ಹೆಬ್ಬೆರಳಿನ ಗಾಯಕ್ಕೆ ತುತ್ತಾದರು. ಆನಂತರ ಆಯ್ಕೆ ಪ್ರಕ್ರಿಯೆಯ ಹಿಂದಿನ ದಿನ ಭುಜದ ಗಾಯಕ್ಕೆ ಗುರಿಯಾದರು. 

2012 ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಸ್ಥಾನ ಪಡೆದರೂ, ಚಹರ್  ಹೆಸರು ಜನಪ್ರಿಯಗೊಂಡಿದ್ದು 2018ರ ಐಪಿಎಲ್ ನಲ್ಲಿ. ಚೆನ್ನೈ ಪರ ಆಡಿದ ದೀಪಕ್ 10 ವಿಕೆಟ್ ಕಬಳಿಸಿ ದರು. 2019 ರ ಆವೃತ್ತಿಯ ಐಪಿಎಲ್‌ನಲ್ಲಿ 22 ವಿಕೆಟ್ ಕಿತ್ತು ಎಲ್ಲರು ಹುಬ್ಬೇರಿಸುವಂತೆ ಮಾಡಿದರು.

ಟಿ20 ವಿಶ್ವಕಪ್ ಮೇಲೆ ಕಣ್ಣು: ಪ್ರಮುಖ ಬೌಲರ್ ಗಳ ಅನುಪಸ್ಥಿತಿಯಲ್ಲಿ ತಂಡದ ಬೌಲಿಂಗ್ ವಿಭಾಗವನ್ನು ಮುನ್ನಡೆಸಿರುವ ದೀಪಕ್, 2020ರ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆ ಯುವ ಗುರಿ ಹೊಂದಿದ್ದಾರೆ. ದೀಪಕ್‌ಗೆ ಧೋನಿಯ ಬೆಂಬಲವಿದೆ. ಹಂಗಾಮಿ ನಾಯಕ ರೋಹಿತ್ ಶರ್ಮಾ ಸಹ ದೀಪಕ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ವಿಶ್ವಕಪ್ ತಂಡದಲ್ಲಿ ಭುವನೇಶ್ವರ್ ಕುಮಾರ್ ಬದಲಿಗೆ ಚಹರ್ ಸ್ಥಾನ ಪಡೆದರೆ ಅಚ್ಚರಿಯಿಲ್ಲ. 

ದೀಪಕ್ ಕೈತಪ್ಪಿದ 2ನೇ ಹ್ಯಾಟ್ರಿಕ್!
ತಿರುವನಂತಪುರಂ: ನಾಗ್ಪುರದಲ್ಲಿ ಬಾಂಗ್ಲಾದೇಶ ವಿರುದ್ಧ 3ನೇ ಟಿ20 ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ್ದ ಯುವ ವೇಗಿ ದೀಪಕ್ ಚಹರ್, ಮಂಗಳವಾರ ಮತ್ತೊಂದು ಹ್ಯಾಟ್ರಿಕ್ ವಿಕೆಟ್‌ನ ಸನಿಹಕ್ಕೆ ಬಂದಿದ್ದರು. ಸತತ 3 ನ್ಯಾಯಯುತ ಎಸೆತಗಳಲ್ಲಿ ವಿಕೆಟ್ ಕಬಳಿಸಿದರೂ, ಮಧ್ಯದಲ್ಲಿ ಒಂದು ವೈಡ್ ಎಸೆದ ಕಾರಣ ಹ್ಯಾಟ್ರಿಕ್ ವಿಕೆಟ್ ಎಂದು ಪರಿಗಣಿಸಲಿಲ್ಲ. 

ವಿದರ್ಭ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನದ ದೀಪಕ್ 13ನೇ ಓವರ್‌ನ 4ನೇ ಎಸೆತದಲ್ಲಿ ದರ್ಶನ್ ನಲ್ಕಂಡೆ ವಿಕೆಟ್ ಕಿತ್ತ ದೀಪಕ್ ಮುಂದಿನ ಎಸೆತವನ್ನು ವೈಡ್ ಹಾಕಿದರು. ಆದರೆ 5ನೇ ಎಸೆತದಲ್ಲಿ ಶ್ರೀಕಾಂತ್ ವಾಘ್ ಹಾಗೂ 6 ಎಸೆತದಲ್ಲಿ ಅಕ್ಷಯ್ ವಾಡ್ಕರ್ ರನ್ನು ಪೆವಿಲಿಯನ್‌ಗಟ್ಟಿದರು. ಟಿ20 ಕ್ರಿಕೆಟ್‌ನಲ್ಲಿ ಅತಿ ಕಡಿಮೆ ದಿನಗಳ ಅಂತರದಲ್ಲಿ 2 ಬಾರಿ ಹ್ಯಾಟ್ರಿಕ್ ಪಡೆದ ಬೌಲರ್ ಎನ್ನುವ ವಿಶ್ವ ದಾಖಲೆಯನ್ನು ದೀಪಕ್ ಚಹರ್ ಬರೆಯುತ್ತಿದ್ದರು. ಆದರೆ ಒಂದು ವೈಡ್ ದಾಖಲೆಯಿಂದ ಅವರು ವಂಚಿತರಾಗುವಂತೆ ಮಾಡಿತು. ಯುವರಾಜ್ ಸಿಂಗ್ 16 ದಿನಗಳಲ್ಲಿ 2ಹ್ಯಾಟ್ರಿಕ್ ವಿಕೆಟ್ ಪಡೆದು ದಾಖಲೆ ಬರೆದಿದ್ದರು. ಆಸ್ಟ್ರೇಲಿಯಾದ ಆ್ಯಂಡ್ರೂ ಟೈ 93 ದಿನಗಳಲ್ಲಿ ಈ ಸಾಧನೆ ಮಾಡಿ, ನಂತರದ ಸ್ಥಾನದಲ್ಲಿದ್ದಾರೆ.