ದುಬೈ(ನ.12): ಭಾರತ ಕ್ರಿಕೆಟ್ ತಂಡದ ಯುವ ವೇಗದ ಬೌಲರ್ ದೀಪಕ್ ಚಹರ್, ಭಾನುವಾರ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ವಿಶ್ವ ದಾಖಲೆಯ ಪ್ರದರ್ಶನ ತೋರಿದ ಬಳಿಕ ಐಸಿಸಿ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರೀ ಏರಿಕೆ ಕಂಡಿದ್ದಾರೆ. ದೀಪಕ್ ಚಹರ್ ಹ್ಯಾಟ್ರಿಕ್ ಸಹಿತ ಕೇವಲ 7 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು.

ದೀಪಕ್ ಚಹಾರ್ ದಾಳಿಗೆ ತತ್ತರಿಸಿದ ಬಾಂಗ್ಲಾ; ಸರಣಿ ಕೈವಶ ಮಾಡಿದ ಭಾರತ

ಸೋಮವಾರ ಪ್ರಕಟಗೊಂಡ ನೂತನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಬರೋಬ್ಬರಿ 88 ಸ್ಥಾನಗಳ ಏರಿಕೆ ಕಂಡ ಬಲಗೈ ವೇಗಿ 42ನೇ ಸ್ಥಾನ ಪಡೆದಿದ್ದಾರೆ. ದೀಪಕ್‌ರ ಆಕರ್ಷಕ ಪ್ರದರ್ಶನದ ನೆರವಿನಿಂದ ಟೀಂ ಇಂಡಿಯಾ, ಬಾಂಗ್ಲಾದೇಶ ವಿರುದ್ಧ ಸರಣಿ ಗೆದ್ದು 5ನೇ ಸ್ಥಾನ ಉಳಿಸಿಕೊಂಡಿತು. ಟಿ20 ಕ್ರಿಕೆಟ್’ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎನ್ನುವ ದಾಖಲೆಗೂ ಚಹರ್ ಭಾಜನರಾಗಿದ್ದರು. ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ರೋಹಿತ್ 7ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಕೆ.ಎಲ್.ರಾಹುಲ್ ಒಂದು ಸ್ಥಾನ ಏರಿಕೆ ಕಂಡು 8ನೇ ಸ್ಥಾನದಲ್ಲಿದ್ದಾರೆ. 

ಒಟ್ಟಾರೆ ಬ್ಯಾಟ್ಸ್’ಮನ್’ಗಳ ವಿಭಾಗದಲ್ಲಿ ಪಾಕಿಸ್ತಾನದ ಬಾಬರ್ ಅಜಂ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದರೆ, ಆಸ್ಟ್ರೇಲಿಯಾ ನಾಯಕ ಆ್ಯರೋನ್ ಫಿಂಚ್ 2 ಸ್ಥಾನ ಏರಿಕೆ ಕಂಡು ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ಇಂಗ್ಲೆಂಡ್ ಸ್ಫೋಟಕ ಬ್ಯಾಟ್ಸ್’ಮನ್ ಡೇವಿಡ್ ಮಲಾನ್ ನಂ.3ನೇ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಕಾಲಿನ್ ಮನ್ರೋ ಒಂದು ಸ್ಥಾನ ಕುಸಿದು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೆ, ಮ್ಯಾಕ್ಸ್’ವೆಲ್ ಇದೀಗ ಮೂರು ಸ್ಥಾನ ಕುಸಿದು 5ನೇ ಸ್ಥಾನಕ್ಕೆ ಜಾರಿದ್ದಾರೆ.

ಇನ್ನು ಬೌಲರ್’ಗಳ ವಿಭಾಗದಲ್ಲಿ ಆಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್ ನಂ.1 ಸ್ಥಾನದಲ್ಲೇ ಮುಂದುವರೆದಿದ್ದರೆ, ನ್ಯೂಜಿಲೆಂಡ್ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ 3 ಸ್ಥಾನ ಏರಿಕೆ ಕಂಡು ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ಪಾಕ್ ಎಡಗೈ ಸ್ಪಿನ್ನರ್ ಇಮಾದ್ ವಾಸೀಂ, ಆ್ಯಡಂ ಜಂಪಾ ಹಾಗೂ ಶಾದಾಬ್ ಖಾನ್ ಟಾಪ್ 5 ಬೌಲರ್’ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಆಲ್ರೌಂಡರ್ ಟಾಪ್ 5 ಪಟ್ಟಿಯಲ್ಲಿ ಭಾರತದ ಯಾವೊಬ್ಬ ಆಟಗಾರನೂ ಸ್ಥಾನ ಪಡೆದಿಲ್ಲ. 

 

ನವೆಂಬರ್ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ