Asianet Suvarna News Asianet Suvarna News

Impact Player: ಬಿಸಿಸಿಐ ಪ್ರಯೋಗ ಪಂದ್ಯದ ಮೇಲೆ ಆಗೋ ಪರಿಣಾಮವೇನು..?

ಇಂಪ್ಯಾಕ್ಟ್‌ ಆಟಗಾರ: ಬಿಸಿಸಿಐನಿಂದ ಹೊಸ ಕ್ರಾಂತಿಕಾರಿ ಪ್ರಯೋಗ
ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಹೊಸ ನಿಯಮ ಜಾರಿ
ಈ ಪ್ರಯೋಗ ಯಶಸ್ವಿಯಾದ್ರೆ ಐಪಿಎಲ್‌ನಲ್ಲೂ ಅಳವಡಿಕೆಯಾಗುವ ಸಾಧ್ಯತೆ

BCCI to Introduce Impact Players in SMAT Cricket fans need to know terms and condition kvn
Author
First Published Sep 18, 2022, 10:18 AM IST

ನವದೆಹಲಿ(ಸೆ.18): ಕ್ರಿಕೆಟ್‌ ಈಗ ಕೇವಲ ಆಟವಾಗಿ ಉಳಿದಿಲ್ಲ. ಅದರಲ್ಲೂ ಟಿ20 ಕ್ರಿಕೆಟ್‌ ಹಲವು ಆವಿಷ್ಕಾರಗಳನ್ನು ಕಾಣುತ್ತಿದೆ. ತಂತ್ರಜ್ಞಾನದ ಬಳಕೆಯೊಂದಿಗೆ ಪ್ರತಿ ಆಟಗಾರ, ಪ್ರತಿ ಎಸೆತವನ್ನು ಆಳವಾಗಿ ವಿಶ್ಲೇಷಿಸಲಾಗುತ್ತಿದೆ. ಇದೀಗ ಬಿಸಿಸಿಐ ಪರಿಚಯಿಸಲು ಹೊರಟಿರುವ ‘ಇಂಪ್ಯಾಕ್ಟ್ ಆಟಗಾರ’ ಎನ್ನುವ ನಿಯಮ ಟಿ20 ಕ್ರಿಕೆಟನ್ನು ಮತ್ತಷ್ಟುಬದಲಿಸಲಿದೆ.

ಅ.11ರಿಂದ ಆರಂಭಗೊಳ್ಳಲಿರುವ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಬಿಸಿಸಿಐ ಈ ನಿಯಮವನ್ನು ಪರಿಚಯಿಸಲಿದ್ದು, ಯಾವುದೇ ಗೊಂದಲಗಳಿಲ್ಲದೆ ಸುಸೂತ್ರವಾಗಿ ಕಾರ‍್ಯರೂಪಕ್ಕೆ ಬಂದರೆ 2023ರ ಐಪಿಎಲ್‌ನಲ್ಲೂ ಈ ನಿಯಮವನ್ನು ಅಳವಡಿಕೆ ಮಾಡಲು ಬಿಸಿಸಿಐ ಚಿಂತನೆ ನಡೆಸಿದೆ.

ಏನಿದು ಇಂಪ್ಯಾಕ್ಟ್ ಆಟಗಾರ ನಿಯಮ?

ಟಿ20 ಪಂದ್ಯವೊಂದರ ಎರಡೂ ಇನ್ನಿಂಗ್ಸ್‌ಗಳಲ್ಲಿ ಆಡುವ ಹನ್ನೊಂದರಲ್ಲಿರುವ ಒಬ್ಬ ಆಟಗಾರನ ಬದಲು ಮತ್ತೊಬ್ಬ ಆಟಗಾರ ಪಂದ್ಯದ ನಡುವೆಯೇ ಕಣಕ್ಕಿಳಿಯಬಹುದು. ಟಾಸ್‌ ವೇಳೆ ಆಡುವ ಹನ್ನೊಂದರ ಪಟ್ಟಿಯೊಂದಿಗೆ ನಾಲ್ವರು ಬದಲಿ ಆಟಗಾರನ ಹೆಸರನ್ನೂ ತಂಡಗಳು ನೀಡಬೇಕು. ಈ ನಾಲ್ವರ ಪೈಕಿ ಒಬ್ಬ ಆಟಗಾರ ಇನ್ನಿಂಗ್‌್ಸನ 14ನೇ ಓವರ್‌ನ ಮುಕ್ತಾಯದ ಮೊದಲು ಮತ್ತೊಬ್ಬ ಆಡುವ ಹನ್ನೊಂದರಲ್ಲಿರುವ ಒಬ್ಬ ಆಟಗಾರನ ಬದಲು ಮೈದಾನಕ್ಕಿಳಿಬಹುದು. ಔಟಾಗಿರುವ ಬ್ಯಾಟರ್‌ ಬದಲೂ ಇಂಪ್ಯಾಕ್ಟ್ ಆಟಗಾರ ಕಣಕ್ಕಿಳಿಯಬಹುದು. ಆದರೆ ತಂಡವು ಕೇವಲ 11 ಬ್ಯಾಟರ್‌ಗಳನ್ನಷ್ಟೇ ಬಳಸಬೇಕು. ಇನ್ನು ಕೆಲ ಓವರ್‌ಗಳನ್ನು ಬೌಲ್‌ ಮಾಡಿರುವ ಬೌಲರ್‌ನ ಬದಲಿಗೂ ಇಂಪ್ಯಾಕ್ಟ್ ಆಟಗಾರ ಕಣಕ್ಕಿಳಿದು ಪೂರ್ತಿ 4 ಓವರ್‌ ಎಸೆಯಬಹುದು.

Duleep Trophy ಸಾಯಿ ಕಿಶೋರ್ ಶೈನಿಂಗ್, ದಕ್ಷಿಣ ವಲಯಕ್ಕೆ ಬೃಹತ್ ಮುನ್ನಡೆ

ಇಂಪ್ಯಾಕ್ಟ್ ಪ್ಲೇಯರ್‌ ಒಂದು ಓವರ್‌ನ ಕೊನೆಯಲ್ಲಿ ಮಾತ್ರ ಕಣಕ್ಕಿಳಿಯಬಹುದು. ಆದರೆ ಎರಡು ಸನ್ನಿವೇಶಗಳಲ್ಲಿ ಇದಕ್ಕೆ ವಿನಾಯಿತಿ ಇದೆ. ಬ್ಯಾಟ್ಸ್‌ಮನ್‌ ಔಟಾದಾಗ ಇಂಪ್ಯಾಕ್ಟ್ ಆಟಗಾರನನ್ನು ಕಣಕ್ಕಿಳಿಸಲು ತಂಡಗಳಿಗೆ ಅವಕಾಶವಿರಲಿದೆ. ಇನ್ನು ಆಟಗಾರ ಗಾಯಗೊಂಡು ಮೈದಾನದಿಂದ ಹೊರನಡೆದರೆ ಆ ಸಂದರ್ಭದಲ್ಲಿ ಇಂಪ್ಯಾಕ್ಟ್ ಆಟಗಾರ ಮೈದಾನ ಪ್ರವೇಶಿಸಬಹುದು. ಒಮ್ಮೆ ಇಂಪ್ಯಾಕ್ಟ್ ಆಟಗಾರನಿಗೆ ಜಾಗ ಬಿಟ್ಟುಕೊಟ್ಟು ಮೈದಾನ ತೊರೆಯುವ ಆಟಗಾರ ಮತ್ತೆ ಕಣಕ್ಕಿಳಿಯುವಂತಿಲ್ಲ. ಬದಲಿ ಫೀಲ್ಡರ್‌ ಆಗಿಯೂ ಅವರಿಗೆ ಕಣಕ್ಕಿಳಿಯಲು ಅವಕಾಶವಿರುವುದಿಲ್ಲ.

ಪಂದ್ಯದ ಮೇಲೆ ಪರಿಣಾಮವೇನು?

ಈ ನಿಯಮವು ಟಾಸ್‌ ಒಂದು ತಂಡಕ್ಕೆ ಲಾಭವಾಗುವುದನ್ನು ತಪ್ಪಿಸಬಹುದು. ಉದಾಹರಣೆಗೆ ತಂಡವೊಂದು ಟಾಸ್‌ ಸೋತು 2ನೇ ಇನ್ನಿಂಗ್‌್ಸನಲ್ಲಿ ಬೌಲ್‌ ಮಾಡಬೇಕಾದಾಗ ಇಬ್ಬನಿ ಬೀಳುತ್ತಿದ್ದರೆ ಒಬ್ಬ ಹೆಚ್ಚುವರಿ ತಜ್ಞ ಬೌಲರನ್ನು ಕಣಕ್ಕಿಳಿಸಿ ತನ್ನ ಬೌಲಿಂಗ್‌ ಬಲವನ್ನು ಹೆಚ್ಚಿಸಿಕೊಳ್ಳಬಹುದು. ಅದೇ ರೀತಿ ಪಿಚ್‌ ಬ್ಯಾಟರ್‌ಗಳಿಗೆ ನೆರವು ನೀಡುತ್ತಿದ್ದರೆ ಒಬ್ಬ ಹೆಚ್ಚುವರಿ ಬ್ಯಾಟರ್‌ ಅನ್ನು ಆಡಿಸಿ ಲಾಭ ಪಡೆಯಬಹುದು. ಇದಲ್ಲದೇ ತಮ್ಮ ತಾರಾ ಆಟಗಾರರ ಮೇಲಿನ ಕೆಲಸದ ಒತ್ತಡವನ್ನು ನಿರ್ವಹಿಸಲು ಸಹ ಈ ನಿಯಮ ಸಹಕಾರಿಯಾಗಲಿದೆ. ಆಟಗಾರರು ಗಾಯಗೊಳ್ಳುವುದನ್ನೂ ತಪ್ಪಿಸಬಹುದು.

ಸೂಪರ್ ಸಬ್‌ಗೂ ಇಂಪ್ಯಾಕ್ಟ್‌ ಪ್ಲೇಯರ್‌ಗೂ ಏನು ವ್ಯತ್ಯಾಸ..?

ಬದಲಿ ಆಟಗಾರ ಮೈದಾನಕ್ಕಿಳಿಯುವ ನಿಯಮ ಕ್ರಿಕೆಟ್‌ನಲ್ಲಿ ಹೊಸದಲ್ಲ. 2005-06ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ‘ಸೂಪರ್‌-ಸಬ್‌’ ಎನ್ನುವ ವ್ಯವಸ್ಥೆ ಜಾರಿ ಮಾಡಲಾಗಿತ್ತು. ಆ ನಿಯಮದ ಪ್ರಕಾರ ಒಬ್ಬ ಆಟಗಾರ ಮತ್ತೊಬ್ಬ ಆಟಗಾರನ ಬದಲು ಮೈದಾನಕ್ಕಿಳಿಯಬಹುದು. ಆದರೆ ಆಡುವ ಹನ್ನೊಂದರಲ್ಲಿದ್ದ ಆಟಗಾರ ಔಟಾಗಿದ್ದರೆ ಹೊಸದಾಗಿ ಮೈದಾನಕ್ಕಿಳಿಯುವ ಆಟಗಾರ ಬ್ಯಾಟ್‌ ಮಾಡುವಂತಿಲ್ಲ. ಇನ್ನು ಬೌಲರ್‌ನ ಕೋಟಾದಲ್ಲಿ ಎಷ್ಟು ಬಾಕಿ ಇರುತ್ತದೆಯೋ ಅಷ್ಟುಓವರ್‌ಗಳನ್ನು ಮಾತ್ರ ಎಸೆಯಬಹುದಾಗಿತ್ತು.

ಆಸ್ಪ್ರೇಲಿಯಾದ ಬಿಗ್‌ಬ್ಯಾಶ್‌ ಟಿ20 ಟೂರ್ನಿಯಲ್ಲಿ ‘ಎಕ್ಸ್‌-ಫ್ಯಾಕ್ಟರ್‌’ ಎನ್ನುವ ನಿಯಮವಿದೆ. ಪ್ರತಿ ಇನ್ನಿಂಗ್‌್ಸನ ಮಧ್ಯಭಾಗ ಎಂದರೆ 10 ಓವರ್‌ಗಳ ಬಳಿಕ ಒಬ್ಬ ಆಟಗಾರ ಆಡುವ ಹನ್ನೊಂದರಲ್ಲಿರುವ ಆಟಗಾರನ ಬದಲು ಮೈದಾನಕ್ಕಿಳಿಬಹುದು. ಆದರೆ ಹೊರಹೋಗುವ ಆಟಗಾರ ಬ್ಯಾಟ್‌ ಮಾಡಿರಬಾರದು. ಜೊತೆಗೆ 1 ಓವರ್‌ಗಿಂತ ಹೆಚ್ಚು ಬೌಲ್‌ ಮಾಡಿರಬಾರದು.

Follow Us:
Download App:
  • android
  • ios