ಕರಾಚಿ(ಜು.23): IPL 2020 ಟೂರ್ನಿ ಆಯೋಜನೆಗೆ ಟಿ20 ವಿಶ್ವಕಪ್ ಟೂರ್ನಿ ಬಲಿಕೊಡಲಾಗಿದೆ ಅನ್ನೋ ಆರೋಪವನ್ನು ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಅಕ್ತರ್, ರಶೀದ್ ಲತಿಫ್ ಸೇರಿದಂತೆ ಹಲವರು ಆರೋಪಿಸಿದ್ದಾರೆ. ಆದರೆ ಆ ಆರೋಪಗಳನ್ನು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಬಸಿತ್ ಆಲಿ ತಳ್ಳಿಹಾಕಿದ್ದಾರೆ. ಇಷ್ಟೇ ಅಲ್ಲ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿ ಉಳಿಸಿದ್ದು ಇದೇ ಬಿಸಿಸಿಐ ಎಂದಿದ್ದಾರೆ.

T20 ವಿಶ್ವಕಪ್ ಟೂರ್ನಿ ಮುಂದೂಡಿದ ಐಸಿಸಿ, IPL 2020 ಖಚಿತ!.

ಟಿ20 ವಿಶ್ವಕಪ್ ಟೂರ್ನಿ ಆಯೋಜನೆಗಾಗಿ ಐಸಿಸಿ ಸಭೆಯಲ್ಲಿ ಮಹತ್ವದ ಚರ್ಚೆ ನಡೆದಿತ್ತು. ಕೆಲ ಕ್ರಿಕೆಟ್ ಮಂಡಳಿಗಳು ಟಿ20 ವಿಶ್ವಕಪ್ ಟೂರ್ನಿಯನ್ನು ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಆಯೋಜನೆ ಮಾಡಲು ಸಲಹೆ ನೀಡಿತ್ತು. ಇದಕ್ಕೆ ಐಸಿಸಿ ಕೂಡ ಸಮ್ಮತಿಸಿತು. ಆದರೆ ತಕ್ಷಣವೇ ಪಾಕಿಸ್ತಾನ ವಿರೋಧ ವ್ಯಕ್ತಪಡಿಸಿದೆ. ಕಾರಣ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿ ಆಯೋಜಿಸಲಾಗುತ್ತದೆ.

ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿ ಆದಾಯವನ್ನು ದೇಸಿ ಕ್ರಿಕೆಟ್‍‌ಗೆ ಬಳಸಲಾಗುತ್ತಿದೆ. ಇಷ್ಟೇ ಅಲ್ಲ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಪ್ರಮುಖ ಆದಾಯವೂ ಇದೇ ಆಗಿದೆ. ಹೀಗಾಗಿ ಮಾರ್ಚ್ ತಿಂಗಳಲ್ಲಿ ಟಿ20 ವಿಶ್ವಕಪ್ ಆಯೋಜಿಸುವುದು ಸಾಧ್ಯವಿಲ್ಲ ಎಂದಿತ್ತು. ಇತ್ತ ಪಾಕಿಸ್ತಾನದ ನೆರವಿಗೆ ಬಿಸಿಸಿಐ ನಿಂತಿತ್ತು. ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿ ರದ್ದು ಮಾಡಿ ಟಿ20 ವಿಶ್ವಕಪ್ ಆಯೋಜನೆ ಸೂಕ್ತವಲ್ಲ. ಇದಕ್ಕೆ ಬಿಸಿಸಿಐ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಸ್ಪಷ್ಟಪಡಿಸಿತು. ಬಿಸಿಸಿಐ ಬೆನ್ನಲ್ಲೇ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಕೂಡ ಪಾಕ್ ಪರ ನಿಂತಿತು. ಬಿಸಿಸಿಐ ಬೆಂಬಲದಿಂದ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿ ಉಳಿಯಿತು ಎಂದು ಬಸಿತ್ ಆಲಿ ಹೇಳಿದ್ದಾರೆ.

ಬಿಸಿಸಿಐ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪರ ನಿಲ್ಲದಿದ್ದರೆ ಖಂಡಿತವಾಗಿ 2021ರ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿ ರದ್ದಾಗಿ, ಆ ವೇಳೆ ಟಿ20 ವಿಶ್ವಕಪ್ ಆಯೋಜನೆಯಾಗುತ್ತಿತ್ತು. ಕೊರೋನಾ ವೈರಸ್ ಕಾರಣ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತೀವ್ರ ನಷ್ಟ ಅನುಭವಿಸುತ್ತಿತ್ತು. ಇದೀಗ ನಷ್ಟ ಸರಿದೂಗಿಸುವ ಅವಕಾಶವನ್ನು ಬಿಸಿಸಿಐ ಮಾಡಿಕೊಟ್ಟಿದೆ ಎಂದು ಬಸಿತ್ ಆಲಿ ಹೇಳಿದ್ದಾರೆ.