ಭಾರತದಲ್ಲಿ ನಡೆಯಲಿರುವ  ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಬಿಸಿಸಿಐ ಬೆಂಗಳೂರು ಸೇರಿದಂತೆ 9 ನಗರಗಳನ್ನು ಶಾರ್ಟ್‌ಲಿಸ್ಟ್‌ ಮಾಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಏ.21): ಇದೇ ವರ್ಷ ಅಕ್ಟೋಬರ್‌-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ ಬಿಸಿಸಿಐ 9 ನಗರಗಳನ್ನು ಅಂತಿಮಗೊಳಿಸಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಮುಂದೆ ಪ್ರಸ್ತಾಪವಿರಿಸಿದೆ. 

ಬೆಂಗಳೂರು, ಅಹಮದಾಬಾದ್‌, ಮುಂಬೈ, ಚೆನ್ನೈ, ದೆಹಲಿ, ಕೋಲ್ಕತಾ, ಧರ್ಮಶಾಲಾ, ಹೈದರಾಬಾದ್‌ ಹಾಗೂ ಲಖನೌನಲ್ಲಿ ಪಂದ್ಯಗಳನ್ನು ನಡೆಸಲು ಯೋಜಿಸಲಾಗಿದೆ. ಏ.26ಕ್ಕೆ ಐಸಿಸಿ ತಂಡ ಭಾರತಕ್ಕೆ ಆಗಮಿಸಿ ಬಿಸಿಸಿಐ ಪ್ರಸ್ತಾಪಿಸಿರುವ ನಗರಗಳಲ್ಲಿನ ಕೋವಿಡ್‌ ಪರಿಸ್ಥಿತಿ, ಕ್ರೀಡಾಂಗಣಗಳ ಸ್ಥಿತಿ ಹಾಗೂ ಸೌಲಭ್ಯಗಳನ್ನು ಪರಿಶೀಲಿಸಲಿದೆ. ಆ ಬಳಿಕ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಲಿದೆ.

ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿ ಪ್ರಕಟ: ಕೊಹ್ಲಿ, ರೋಹಿತ್, ಬುಮ್ರಾಗೆ A+ ಗ್ರೇಡ್‌

ಪೂರ್ವನಿಗದಿಯಂತೆ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು 2020ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿತ್ತು. ಆದರೆ ಕೊರೋನಾ ಭೀತಿಯಿಂದಾಗಿ ಐಸಿಸಿ ಈ ಜಾಗತಿಕ ಟೂರ್ನಿಯನ್ನು ಮುಂದೂಡಿತ್ತು. ಇನ್ನು 2021ರಲ್ಲಿ ಭಾರತದಲ್ಲೇ ನಡೆಯಬೇಕಿದ್ದ ಟಿ20 ಟೂರ್ನಿಯ ಆತಿಥ್ಯವನ್ನು ಬಿಸಿಸಿಐ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇನ್ನು 2020ರಲ್ಲಿ ಮುಂದೂಲ್ಪಟ್ಟಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ.