* ರಣಜಿ ಟ್ರೋಫಿ ಟೂರ್ನಿಯ ನಾಕೌಟ್ ಪಂದ್ಯಗಳ ವೇಳಾಪಟ್ಟಿಯಲ್ಲಿ ಬದಲಾವಣೆ* ಕ್ವಾರ್ಟರ್ ಫೈನಲ್ ಪಂದ್ಯಗಳು ಜೂನ್ 4ರ ಬದಲು ಜೂನ್ 6ರಿಂದ ಪ್ರಾರಂಭ* ರಣಜಿ ಟ್ರೋಫಿ ಫೈನಲ್ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ
ಬೆಂಗಳೂರು(ಮೇ.01): ರಣಜಿ ಟ್ರೋಫಿ ನಾಕೌಟ್ ಪಂದ್ಯಗಳನ್ನು (Ranji Trophy Knockout) ಬಿಸಿಸಿಐ 2 ದಿನ ತಡವಾಗಿ ಆರಂಭಿಸಲು ನಿರ್ಧರಿಸಿದ್ದು, ಕ್ವಾರ್ಟರ್ ಫೈನಲ್ ಪಂದ್ಯಗಳು ಜೂನ್ 4ರ ಬದಲು ಜೂನ್ 6ರಿಂದ ಪ್ರಾರಂಭವಾಗಲಿದೆ. ಈ ಮೊದಲು ನಿಗದಿಯಾಗಿದ್ದಕ್ಕಿಂತ ಎರಡು ದಿನ ತಡವಾಗಿ ರಣಜಿ ಟ್ರೋಫಿ ಟೂರ್ನಿಯ ನಾಕೌಟ್ ಪಂದ್ಯಗಳು ಆರಂಭವಾಗಲಿವೆ. ನಾಕೌಟ್ ಪಂದ್ಯಗಳಿಗೆ ಬೆಂಗಳೂರು ಆತಿಥ್ಯ ವಹಿಸಲಿದೆ. 2 ಸೆಮಿಫೈನಲ್ ಪಂದ್ಯಗಳು ಜೂನ್ 14ರಿಂದ 18ರವರೆಗೆ ಹಾಗೂ ಫೈನಲ್ ಪಂದ್ಯ ಜೂನ್ 22ರಿಂದ 26ರ ವರೆಗೆ ನಿಗದಿಯಾಗಿದೆ. ಫೈನಲ್ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ವೇಳಾಪಟ್ಟಿ ಬದಲಾವಣೆಗೆ ಬಿಸಿಸಿಐ ಕಾರಣ ನೀಡದಿದ್ದರೂ, ಜೂನ್ 19ಕ್ಕೆ ಚಿನ್ನಸ್ವಾಮಿಯಲ್ಲಿ ಭಾರತ-ದ.ಆಫ್ರಿಕಾ ಟಿ20 ಇರುವ ಕಾರಣ, ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. 2021-22ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಈಗಾಗಲೇ ಮುಕ್ತಾಯವಾಗಿದ್ದು, ಐಪಿಎಲ್ ಬಳಿಕ ನಾಕೌಟ್ ಪಂದ್ಯಗಳನ್ನು ಆಯೋಜಿಸುವುದಾಗಿ ಬಿಸಿಸಿಐ (BCCI) ಈ ಮೊದಲೇ ಘೋಷಿಸಿತ್ತು. ರಣಜಿ ಟ್ರೋಫಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಬಳಿಕ ಕರ್ನಾಟಕ, ಮಧ್ಯಪ್ರದೇಶ, ಪಂಜಾಬ್, ಉತ್ತರ ಪ್ರದೇಶ, ಉತ್ತರಖಂಡ, ಜಾರ್ಖಂಡ್, ಮುಂಬೈ ಹಾಗೂ ಬಂಗಾಳ ತಂಡಗಳು ನಾಕೌಟ್ ಹಂತಕ್ಕೆ ಲಗ್ಗೆಯಿಟ್ಟಿವೆ. ಇದೀಗ ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ಬಂಗಾಳ-ಜಾರ್ಖಂಡ್ ಮುಖಾಮುಖಿಯಾಗಲಿದ್ದು, 2ನೇ ಕ್ವಾರ್ಟರ್‌ನಲ್ಲಿ ಮುಂಬೈ-ಉತ್ತಾರಖಂಡ, 3ನೇ ಕ್ವಾರ್ಟರ್‌ನಲ್ಲಿ ಕರ್ನಾಟಕ-ಉತ್ತರ ಪ್ರದೇಶ ಹಾಗೂ 4ನೇ ಕ್ವಾರ್ಟರ್‌ನಲ್ಲಿ ಪಂಜಾಬ್-ಮಧ್ಯಪ್ರದೇಶ ಸೆಣಸಲಿವೆ.
ಇಂಗ್ಲೆಂಡ್ ಕೌಂಟಿ: ಪೂಜಾರ 3 ಪಂದ್ಯಗಳಲ್ಲಿ 2 ದ್ವಿಶತಕ
ಹೋವ್(ಇಂಗ್ಲೆಂಡ್): ಭಾರತದ ಹಿರಿಯ ಬ್ಯಾಟರ್ ಚೇತೇಶ್ವರ್ ಪೂಜಾರ (Cheteshwar Pujar) ಇಂಗ್ಲೆಂಡ್ ಕೌಂಟಿ ತಂಡ ಸಸೆಕ್ಸ್ ಪರ 3 ಪಂದ್ಯಗಳಲ್ಲಿ 2ನೇ ದ್ವಿಶತಕ ಸಿಡಿಸಿದ್ದಾರೆ. ಡರ್ಹಮ್ ವಿರುದ್ಧದ ಪಂದ್ಯದಲ್ಲಿ ಶನಿವಾರ ಪೂಜಾರ 334 ಎಸೆತಗಳಲ್ಲಿ 203 ರನ್ ಸಿಡಿಸಿ ಔಟಾದರು. ಅವರು ಪಾಕಿಸ್ತಾನದ ಮೊಹಮದ್ ರಿಜ್ವಾನ್(79) ಜೊತೆ 154 ರನ್ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು.
Ranji Trophy: ನಾಕೌಟ್ ಹಂತದ ಪಂದ್ಯಗಳಿಗೆ ಬೆಂಗಳೂರು ಆತಿಥ್ಯ
ಚೇತೇಶ್ವರ್ ಪೂಜಾರ ಹಾಗೂ ಮೊಹಮ್ಮದ್ ರಿಜ್ವಾನ್ ಅವರದ್ದು ಎಂತಹ ಅದ್ಭುತ ಜತೆಯಾಟ ಎಂದು ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬಣ್ಣಿಸಿದೆ. ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿಗಳು ನಡೆಯುತ್ತಿಲ್ಲ. ಆದರೆ ಇದೀಗ ಭಾರತ ಹಾಗೂ ಪಾಕಿಸ್ತಾನ ತಂಡದ ಆಟಗಾರರಿಬ್ಬರು ಒಟ್ಟಾಗಿ ಕ್ರಿಕೆಟ್ ಆಡಿದ್ದು, ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಇತ್ತೀಚೆಗಷ್ಟೇ ಸಸೆಕ್ಸ್ ಪರ ಪಾದಾರ್ಪಣೆ ಮಾಡಿದ್ದ ಪೂಜಾರ ಮೊದಲ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಔಟಾಗದೆ 201 ರನ್ ಸಿಡಿಸಿದ್ದರು. ಬಳಿಕ ವೋರ್ಚೆಸ್ಟರ್ ವಿರುದ್ಧದ ಪಂದ್ಯದಲ್ಲಿ 109 ರನ್ ಗಳಿಸಿದ್ದರು.
ಚೆನ್ನೈಗೆ ಮತ್ತೆ ಧೋನಿ ಸಾರಥ್ಯ
ಮುಂಬೈ: 12 ಐಪಿಎಲ್ ಆವೃತ್ತಿಗಳಲ್ಲಿ 4 ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಎಂ.ಎಸ್.ಧೋನಿ ಮತ್ತೊಮ್ಮೆ ತಂಡದ ನಾಯಕತ್ವ ವಹಿಸಲು ಸಿದ್ಧರಾಗಿದ್ದಾರೆ. 15ನೇ ಆವೃತ್ತಿಯ ಐಪಿಎಲ್‌ಗೂ ಮುನ್ನ ಸಹ ಆಟಗಾರ ರವೀಂದ್ರ ಜಡೇಜಾಗೆ ನಾಯಕತ್ವದ ಹೊಣೆ ಹಸ್ತಾಂತರಿಸಿದ್ದರೂ, ಸತತ ಸೋಲುಗಳ ಬಳಿಕ ಜಡೇಜಾ ಶನಿವಾರ ನಾಯಕತ್ವ ತ್ಯಜಿಸಲು ನಿರ್ಧರಿಸಿದ್ದು, ಧೋನಿ ಮತ್ತೊಮ್ಮೆ ನಾಯಕನಾಗಿ ಮುಂದುವರಿಯಲು ಒಪ್ಪಿದ್ದಾರೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿದ ಚೆನ್ನೈ, ‘ತಮ್ಮ ಆಟದತ್ತ ಹೆಚ್ಚು ಗಮನ ಹರಿಸುವ ನಿಟ್ಟಿನಲ್ಲಿ ಜಡೇಜಾ ನಾಯಕತ್ವವನ್ನು ಮರಳಿ ಧೋನಿಗೆ ನೀಡಲು ನಿರ್ಧರಿಸಿದ್ದಾರೆ. ಧೋನಿ ಇದಕ್ಕೆ ಒಪ್ಪಿದ್ದು, ಮುಂದೆ ತಂಡದ ನಾಯಕತ್ವ ವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದೆ. ಜಡೇಜಾ ನಾಯಕತ್ವದಲ್ಲಿ ತಂಡ 8 ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆದ್ದಿದೆ.
