* ರಣಜಿ ಟ್ರೋಫಿ ನಾಕೌಟ್ ಪಂದ್ಯಗಳಿಗೆ ಬೆಂಗಳೂರು ಆತಿಥ್ಯ* ಜೂನ್ 04ರಿಂದ ನಾಕೌಟ್ ಪಂದ್ಯಗಳು ಬೆಂಗಳೂರಿನಲ್ಲಿ ಆರಂಭ* ಜೂನ್ 12ರಿಂದ 16ರ ವರೆಗೂ ಎರಡು ಸೆಮಿಫೈನಲ್‌ ಪಂದ್ಯಗಳು ನಡೆಯಲಿವೆ

ಮುಂಬೈ(ಏ.29): ರಣಜಿ ಟ್ರೋಫಿ ನಾಕೌಟ್‌ ಪಂದ್ಯಗಳಿಗೆ (Ranji Trophy Knockout match) ಬೆಂಗಳೂರು ಆತಿಥ್ಯ ವಹಿಸಲಿದೆ. ಜೂನ್ 4ರಿಂದ ನಾಕೌಟ್‌ ಹಂತ ಆರಂಭಗೊಳ್ಳಲಿದ್ದು, ಕ್ವಾರ್ಟರ್‌ ಫೈನಲ್‌ ಪಂದ್ಯಗಳು ನಡೆಯಲಿವೆ. ಐಪಿಎಲ್‌ಗೂ ಮುನ್ನ ಲೀಗ್‌ ಹಂತದ ಪಂದ್ಯಗಳು ನಡೆದಿದ್ದವು. ಐಪಿಎಲ್‌ ಬಳಿಕ ನಾಕೌಟ್‌ ಆಯೋಜಿಸುವುದಾಗಿ ಬಿಸಿಸಿಐ (BCCI) ಮೊದಲೇ ಘೋಷಿಸಿತ್ತು. ಮೊದಲ ಕ್ವಾರ್ಟರ್‌ ಫೈನಲ್‌ನಲ್ಲಿ ಬಂಗಾಳ-ಜಾರ್ಖಂಡ್‌ ಮುಖಾಮುಖಿಯಾಗಲಿದ್ದು, 2ನೇ ಕ್ವಾರ್ಟರ್‌ನಲ್ಲಿ ಮುಂಬೈ-ಉತ್ತಾರಖಂಡ, 3ನೇ ಕ್ವಾರ್ಟರ್‌ನಲ್ಲಿ ಕರ್ನಾಟಕ-ಉತ್ತರ ಪ್ರದೇಶ ಹಾಗೂ 4ನೇ ಕ್ವಾರ್ಟರ್‌ನಲ್ಲಿ ಪಂಜಾಬ್‌-ಮಧ್ಯಪ್ರದೇಶ ಸೆಣಸಲಿವೆ.

ಜೂನ್ 12ರಿಂದ 16ರ ವರೆಗೂ ಎರಡು ಸೆಮಿಫೈನಲ್‌ ಪಂದ್ಯಗಳು ನಡೆಯಲಿದ್ದು, ಜೂ.20ರಿಂದ ಫೈನಲ್‌ ನಡೆಯಲಿದೆ. ಫೈನಲ್‌ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸುವ ನಿರೀಕ್ಷೆ ಇದ್ದು, ಜೂನ್ 19ರಂದು ಬೆಂಗಳೂರಿನ (Bengaluru) ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಭಾರತ-ದಕ್ಷಿಣ ಆಫ್ರಿಕಾ ನಡುವೆ ಟಿ20 ಪಂದ್ಯ ನಿಗದಿಯಾಗಿದೆ. ಟಿ20 ಪಂದ್ಯ ಮುಗಿಯುತ್ತಿದ್ದಂತೆ ಕೆಎಸ್‌ಸಿಎ (KSCA) ಮತ್ತೊಂದು ಮಹತ್ವದ ಪಂದ್ಯವನ್ನು ಆಯೋಜಿಸಬೇಕಿದೆ.

155 ಕಿ.ಮೀ. ನನ್ನ ಮುಂದಿನ ಗುರಿ: ಉಮ್ರಾನ್‌ ಮಲಿಕ್‌

ಮುಂಬೈ: ಐಪಿಎಲ್‌ನಲ್ಲಿ (IPL 2022) ತಮ್ಮ ವೇಗದ ಬೌಲಿಂಗ್‌ನಿಂದಲೇ ಗಮನ ಸೆಳೆಯುತ್ತಿರುವ ಜಮ್ಮು-ಕಾಶ್ಮೀರ ಮೂಲದ ಸನ್‌ರೈಸ​ರ್ಸ್ ವೇಗಿ ಉಮ್ರಾನ್‌ ಮಲಿಕ್‌ (Umran Malik), ತಮ್ಮ ಮುಂದಿನ ಗುರಿ ಗಂಟೆಗೆ 155 ಕಿ.ಮೀ. ವೇಗದಲ್ಲಿ ಬೌಲ್‌ ಮಾಡುವುದು ಎಂದಿದ್ದಾರೆ. ಆದಷ್ಟು ಬೇಗ ಆ ಗುರಿ ಸಾಧಿಸಲಿದ್ದೇನೆ ಎಂದು 22 ವರ್ಷದ ಉಮ್ರಾನ್‌ ಭರವಸೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಐಪಿಎಲ್‌ ಮುಗಿಯುತ್ತಿದ್ದಂತೆ ಉಮ್ರಾನ್‌ಗೆ ಭಾರತ ತಂಡದಲ್ಲಿ ಸ್ಥಾನ ಸಿಗಲಿದ್ದು, ಇಂಗ್ಲೆಂಡ್‌ ವಿರುದ್ಧದ ಏಕೈಕ ಟೆಸ್ಟ್‌ಗೂ ಅವರು ಆಯ್ಕೆಯಾಗುವ ಸಾಧ್ಯತೆ ಇದೆ.

ಪರ್ಪಲ್‌ ಕ್ಯಾಪ್‌ಗೆ ಚಹಲ್‌ ಜೊತೆ ಕುಲ್ದೀಪ್‌ ಪೈಪೋಟಿ!

ಮುಂಬೈ: ಐಪಿಎಲ್‌ 15ನೇ ಆವೃತ್ತಿಯಲ್ಲಿ ಗರಿಷ್ಠ ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕಾಗಿ ಭಾರತದ ಇಬ್ಬರು ತಾರಾ ಸ್ಪಿನ್ನರ್‌ಗಳಾದ ಯಜುವೇಂದ್ರ ಚಹಲ್‌ ಹಾಗೂ ಕುಲ್ದೀಪ್‌ ಯಾದವ್‌ (Kuldeep Yadav) ನಡುವೆ ಪೈಪೋಟಿ ಶುರುವಾಗಿದೆ. 8 ಪಂದ್ಯಗಳಲ್ಲಿ 18 ವಿಕೆಟ್‌ ಪಡೆದಿರುವ ರಾಜಸ್ಥಾನ ತಂಡದ ಚಹಲ್‌ ಮೊದಲ ಸ್ಥಾನದಲ್ಲಿದ್ದರೆ, ಗುರುವಾರ ಕೆಕೆಆರ್‌ ವಿರುದ್ಧ 14 ರನ್‌ಗೆ 4 ವಿಕೆಟ್‌ ಕಿತ್ತ ಕುಲ್ದೀಪ್‌, 8 ಪಂದ್ಯಗಳಲ್ಲಿ ಒಟ್ಟು 17 ವಿಕೆಟ್‌ ಪಡೆದು 2ನೇ ಸ್ಥಾನದಲ್ಲಿದ್ದಾರೆ. ಲೀಗ್‌ ಹಂತದಲ್ಲಿ ರಾಜಸ್ಥಾನ, ಡೆಲ್ಲಿಗೆ ಇನ್ನೂ 6 ಪಂದ್ಯಗಳು ಬಾಕಿ ಇದ್ದು ಈ ಇಬ್ಬರ ನಡುವಿನ ಪೈಪೋಟಿ ಮತ್ತಷ್ಟುತೀವ್ರಗೊಳ್ಳುವ ಸಾಧ್ಯತೆ ಇದೆ.

ಡೆಲ್ಲಿಗೆ 4 ಜಯ: 4ರಲ್ಲೂ ಕುಲ್ದೀಪ್ ಯಾದವ್ ಪಂದ್ಯ ಶ್ರೇಷ್ಠ

ಮುಂಬೈ: ಐಪಿಎಲ್‌ 15ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ 4 ಗೆಲುವು ಸಾಧಿಸಿದ್ದು, ನಾಲ್ಕೂ ಪಂದ್ಯಗಳಲ್ಲಿ ಚೇನಾಮನ್ ಬೌಲರ್‌ ಕುಲ್ದೀಪ್ ಅವರೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿರುವುದು ವಿಶೇಷ. ಮುಂಬೈ ಇಂಡಿಯನ್ಸ್ ವಿರುದ್ದ 18 ರನ್‌ಗೆ 3 ವಿಕೆಟ್ ಕಿತ್ತಿದ್ದ ಕುಲ್ದೀಪ್, ಕೆಕೆಆರ್ ವಿರುದ್ದ ಮೊದಲ ಮುಖಾಮುಖಿಯಲ್ಲಿ 35 ರನ್‌ಗೆ 4 ವಿಕೆಟ್ ಪಡೆದಿದ್ದರು. 

IPL 2022 ಜಯದ ಹಳಿಗೆ ಮರಳಿದ ಡೆಲ್ಲಿ, ಕೆಕೆಆರ್ ಗೆ ಸತತ 5ನೇ ಸೋಲು

ಪಂಜಾಬ್‌ ಕಿಂಗ್ಸ್‌ ವಿರುದ್ದ 24 ರನ್‌ಗೆ 2 ವಿಕೆಟ್ ಪಡೆದಿದ್ದ ಕುಲ್ದೀಪ್ ಯಾದವ್, ಗುರುವಾರದ ಪಂದ್ಯದಲ್ಲಿ ಕೆಕೆಆರ್ ವಿರುದ್ದ 14 ರನ್‌ಗೆ 4 ವಿಕೆಟ್ ಕಬಳಿಸಿ, ಡೆಲ್ಲಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. 8 ಪಂದ್ಯಗಳಲ್ಲಿ ಕುಲ್ದೀಪ್ ಯಾದವ್ ಒಟ್ಟು 17 ವಿಕೆಟ್ ಪಡೆದಿದ್ದಾರೆ.