ಬಿಸಿಸಿಐಗೂ ಇದೀಗ ನಕಲಿ ಅರ್ಜಿಗಳ ಕಾಟ ಶುರುವಾಗಿದೆ. ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯನ್ನು ವಜಾ ಮಾಡಿದ ಬೆನ್ನಲ್ಲೇ ಬಿಸಿಸಿಐ ಹೊಸ ಸಮಿತಿಗೆ ಅರ್ಹರಿಂದ ಅರ್ಜಿ ಅಹ್ವಾನಿಸಿದೆ. ಇದೀಗ ಸಚಿನ್ ತೆಂಡುಲ್ಕರ್, ಎಂ.ಎಸ್.ಧೋನಿ ಹೆಸರಲ್ಲಿ ಅರ್ಜಿ ಬಂದಿದೆ.

ಮುಂಬೈ(ಡಿ.22): ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹೀನಾಯ ಸೋಲಿನ ಬೆನ್ನಲ್ಲೇ ಬಿಸಿಸಿಐ ಆಯ್ಕೆ ಸಮಿತಿಯನ್ನು ವಜಾ ಮಾಡಿತ್ತು. ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿ ವಜಾ ಮಾಡಿದ ಬಿಸಿಸಿಐ ನೂತನ ಸಮಿತಿಗೆ ಅರ್ಹರಿಂದ ಅರ್ಜಿ ಅಹ್ವಾನಿಸಿತ್ತು. ಐವರು ಸದಸ್ಯರ ಸಮಿತಿಗೆ ಅರ್ಜಿ ಆಹ್ವಾನಿಸಿದ ಬೆನ್ನಲ್ಲೇ ಹಲವರ ಹೆಸರುಗಳು ಕೇಳಿಬಂದಿತ್ತು. ಇದರಲ್ಲಿ ಸಚಿನ್ ತೆಂಡುಲ್ಕರ್, ಎಂ.ಎಸ್.ಧೋನಿ ಹೆಸರುಗಳು ಸೇರಿತ್ತು. ಇದರಂತೆ ಹಲವು ಅರ್ಜಿಗಳನ್ನು ಬಿಸಿಸಿಐ ಕಚೇರಿಗೆ ತಲುಪಿದೆ. ಇದರಲ್ಲಿ ಸಚಿನ್ ಹಾಗೂ ಧೋನಿ ಅರ್ಜಿಗಳು ಇವೆ. ಅರೇ ಇದೇನು ಧೋನಿ, ಸಚಿನ್ ಆಯ್ಕೆ ಸಮಿತಿಗೆ ಅರ್ಜಿ ಸಲ್ಲಿಸಿದ್ರಾ? ಅನ್ನೋ ಅನುಮಾನ ಕ್ರಿಕೆಟ್ ಸಲಹಾ ಸಮಿತಿಗೆ ಮೂಡಿದೆ. ಹೀಗಾಗಿ ಅರ್ಜಿಗಳನ್ನು ಪರಿಶೀಲನೆ ನಡೆಸಿದೆ. ಈ ವೇಳೆ ಇದು ನಕಲಿ ಅರ್ಜಿಗಳು ಅನ್ನೋದು ಗೊತ್ತಾಗಿದೆ.

ಸಚಿನ್ ತೆಂಡೂಲ್ಕರ್, ಎಂ.ಎಸ್.ಧೋನಿ, ವಿರೇಂದ್ರ ಸೆಹ್ವಾಗ್, ಪಾಕಿಸ್ತಾನ ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್ ಹೆಸರಲ್ಲೂ ಅರ್ಜಿಗಳು ಬಂದಿದೆ. ಈ ಎಲ್ಲಾ ಅರ್ಜಿಗಳು ನಕಲಿಯಾಗಿವೆ. ಇತ್ತೀಚೆಗೆ ಬಿಸಿಸಿಐ ಆಯ್ಕೆ ಸಮಿತಿಯ ಐವರು ಸದಸ್ಯರನ್ನು ನೇಮಿಸಲು ಮೂವರು ಸದಸ್ಯರ ಕ್ರಿಕೆಟ್ ಸಲಹಾ ಸಮಿತಿಯನ್ನು ನೇಮಿಸಿದೆ. ಮಾಜಿ ಕ್ರಿಕೆಟಿಗರಾದ ಅಶೋಕ್ ಮಲ್ಹೋತ್ರ, ಜತಿನ್ ಪ್ರಾಂಜಿಪೆ ಹಾಗೂ ಸುಲಕ್ಷಣಾ ನಾಯ್ಕ್ ಅವರ ಮೂವರು ಸದಸ್ಯರನ್ನು ಕ್ರಿಕೆಟ್ ಸಲಹಾ ಸಮಿತಿಗೆ ನೇಮಕ ಮಾಡಿದೆ.

IPL Auction 2023: ಕೊಚ್ಚಿಯಲ್ಲಿ ಐಪಿಎಲ್‌ ಮಿನಿ ಹರಾಜಿಗೆ ಕ್ಷಣಗಣನೆ..! ಇಲ್ಲಿದೆ ಸಂಪೂರ್ಣ ಮಾಹಿತಿ

ಮಾಜಿ ಕ್ರಿಕೆಟಿಗರಾದ ಅಶೋಕ್‌ ಮಲ್ಹೋತ್ರಾ ಹಾಗೂ ಜತಿನ್‌ ಪರಂಜಪೆ ಬಿಸಿಸಿಐನ ಕ್ರಿಕೆಟ್‌ ಸಲಹಾ ಸಮಿತಿ(ಸಿಎಸಿ)ಗೆ ಸೇರ್ಪಡೆಗೊಂಡಿದ್ದಾರೆ. ಮಾಜಿ ಆಟಗಾರ್ತಿ ಸುಲಕ್ಷಣಾ ನಾಯ್ಕ್ ಸಮಿತಿಯಲ್ಲಿ ಮುಂದುವರಿಯಲಿದ್ದಾರೆ. ಈ ಸಮಿತಿಯು ಬಿಸಿಸಿಐ ಅಯ್ಕೆ ಸಮಿತಿಯ ಸದಸ್ಯರ ಸ್ಥಾನಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಸಂದರ್ಶನ ನಡೆಸಿ ಆಯ್ಕೆ ನಡೆಸಲಿದೆ.

ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರಾಗಲು ಮಾಜಿ ಕ್ರಿಕೆಟಿಗರಾದ ಮಣೀಂದರ್‌ ಸಿಂಗ್‌, ಶಿವಸುಂದರ್‌ ದಾಸ್‌, ಸಲೀಲ್‌ ಅಂಕೋಲಾ, ಸಮೀರ್‌ ದಿಘೆ, ವಿನೋದ್‌ ಕಾಂಬ್ಳಿ ಸೇರಿ 50ಕ್ಕೂ ಹೆಚ್ಚು ಮಂದಿಯಿಂದ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಪೈಕಿ ಮಣೀಂದರ್‌ ಹಾಗೂ ದಾಸ್‌ಗೆ ಮಾತ್ರ 20ಕ್ಕಿಂತ ಹೆಚ್ಚು ಟೆಸ್ಟ್‌ ಆಡಿದ ಅನುಭವವಿದೆ. ಇದೇ ವೇಳೆ ಮಾಜಿ ವೇಗಿ ಅಜಿತ್‌ ಅಗರ್ಕರ್‌ ಸಹ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗುತ್ತಿದ್ದು, ಈ ವಿಷಯ ಖಚಿತವಾಗಿಲ್ಲ. ಒಂದು ವೇಳೆ ಅಗರ್ಕರ್‌ ಅರ್ಜಿ ಸಲ್ಲಿಸಿದ್ದರೆ ಅವರ ಅನುಭವವನ್ನು ಪರಿಗಣಿಸಿ ಅವರನ್ನೇ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ನೇಮಿಸುವ ಸಾಧ್ಯತೆ ಇದೆ.

ಟೀಂ ಇಂಡಿಯಾ ಆಟಗಾರರ ವಾರ್ಷಿಕ ವೇತನ ಹೆಚ್ಚಳಕ್ಕೆ BCCI ಚಿಂತನೆ?

ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ವೈಫಲ್ಯ ಅನುಭವಿಸಿದ ಹಿನ್ನೆಲೆಯಲ್ಲಿ ಬಿಸಿಸಿಐ ನಾಲ್ವರು ಸದಸ್ಯರ ಆಯ್ಕೆ ಸಮಿತಿಯನ್ನು ವಜಾಗೊಳಿಸಿತ್ತು. ಚೇತನ್‌ ಶರ್ಮಾ ನೇತೃತ್ವದ ಸಮಿತಿ ಆಯ್ಕೆ ಮಾಡಿದ್ದ ತಂಡದ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಅಲ್ಲದೇ 2021ರ ಟಿ20 ವಿಶ್ವಕಪ್‌ನಲ್ಲಿ ನಾಕೌಟ್‌ ಹಂತಕ್ಕೇರಲು ವಿಫಲವಾಗಿತ್ತು. ಹೀಗಾಗಿ ಬಿಸಿಸಿಐ ನಿರ್ಧಾರ ಕೈಗೊಂಡಿತ್ತು. ಚೇತನ್‌ ಶರ್ಮಾ, ಹರ್ವಿಂದರ್‌ ಸಿಂಗ್‌, ಸುನಿಲ್‌ ಜೋಶಿ ಹಾಗೂ ದೇಬಾಶಿಶ್‌ ಮೊಹಂತಿ ಅವರ ಸೇವಾವಧಿ ಮುಕ್ತಾಯಗೊಳ್ಳುವ ಮೊದಲೇ ಹುದ್ದೆಯಿಂದ ಕೆಳಗಿಳಿಸಲಾಗಿದೆ. ಸಾಮಾನ್ಯವಾಗಿ ಆಯ್ಕೆ ಸಮಿತಿ 4 ವರ್ಷಗಳ ಅವಧಿ ಹೊಂದಿರಲಿದೆ.