* ಟೀಂ ಇಂಡಿಯಾ ಆಟಗಾರರ ಸ್ಯಾಲರಿ ಹೆಚ್ಚಾಗುವ ಸಾಧ್ಯತೆಯಿದೆ* ಆಟಗಾರರ ವೇತನ ಶೇ.10ರಿಂದ 20ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ* ಸದ್ಯ ಎ+ ದರ್ಜೆಗೆ 7 ಕೋಟಿ ರು. ವೇತನವಿದ್ದು, 10 ಕೋಟಿ ರು.ಗೆ ಏರಿಕೆಯಾಗುವ ಸಾಧ್ಯತೆ

ನವದೆಹಲಿ(ಡಿ.16): ಬಿಸಿಸಿಐ ಕೇಂದ್ರ ಗುತ್ತಿಗೆ ಪಡೆಯುವ ಆಟಗಾರರ ವಾರ್ಷಿಕ ವೇತನ ಹೆಚ್ಚಿಸಲು ಮಂಡಳಿ ಚಿಂತನೆ ನಡೆಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ‘ಆಟಗಾರರ ವಾರ್ಷಿಕ ವೇತನ ಹೆಚ್ಚಿಸಲು ಮಂಡಳಿ ಆಸಕ್ತಿ ಹೊಂದಿದೆ. ಶೇ.10ರಿಂದ 20ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಬಗ್ಗೆ ಡಿ.21ಕ್ಕೆ ನಡೆಯಲಿರುವ ಬಿಸಿಸಿಐ ಅಪೆಕ್ಸ್‌ ಕೌನ್ಸಿಲ್‌ ಸಭೆಯಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

2017-18ರಲ್ಲಿ ಕೊನೆ ಬಾರಿ ಆಟಗಾರರ ವೇತನ ಹೆಚ್ಚಳವಾಗಿತ್ತು. ಸದ್ಯ ಎ+ ದರ್ಜೆಗೆ 7 ಕೋಟಿ ರು. ವೇತನವಿದ್ದು, 10 ಕೋಟಿ ರು.ಗೆ ಏರಿಕೆಯಾಗುವ ಸಾಧ್ಯತೆ ಇದೆ. ‘ಎ’ ದರ್ಜೆಗೆ 5ರ ಬದಲು 7 ಕೋಟಿ ರು., ‘ಬಿ’ ದರ್ಜೆಗೆ 3 ಕೋಟಿ ರು. ಬದಲು 5 ಕೋಟಿ ರು., ‘ಸಿ’ ದರ್ಜೆಗೆ 1 ಕೋಟಿ ರು. ಬದಲಿಗೆ 3 ಕೋಟಿ ರು. ವೇತನ ನೀಡುವ ಸಾಧ್ಯತೆ ಎಂದು ತಿಳಿದುಬಂದಿದೆ.

ತಂಡಕ್ಕೆ ಬೌಲಿಂಗ್‌ ಕೋಚ್‌ ಬೇಕಿದೆ: ಹರ್ಮನ್‌ಪ್ರೀತ್‌

ಮುಂಬೈ: ಭಾರತ ಮಹಿಳಾ ತಂಡ ಬೌಲಿಂಗ್‌ ಕೋಚ್‌ ಸೇವೆಯಿಂದ ವಂಚಿತವಾಗಿದೆ ಎಂದು ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬುಧವಾರ ಆಸ್ಪ್ರೇಲಿಯಾ ವಿರುದ್ಧ 3ನೇ ಟಿ20 ಪಂದ್ಯದಲ್ಲಿ ಸೋಲುಂಡ ಬಳಿಕ ಪ್ರತಿಕ್ರಿಯಿಸಿದ ಅವರು, ‘ನಮಗೆ ಖಂಡಿತಾ ಕೋಚ್‌ ಅಗತ್ಯವಿದೆ. ಕೋಚ್‌ ಸೇವೆಯಿಂದ ನಾವು ವಂಚಿತರಾಗಿದ್ದೇವೆ. ಆದರೆ ನಮ್ಮ ಬೌಲರ್‌ಗಳು ಜವಾಬ್ದಾರಿ ಹೊತ್ತುಕೊಂಡಿದ್ದಾರೆ ಮತ್ತು ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ. ರಮೇಶ್‌ ಪೊವಾರ್‌ ತಂಡದ ಕೋಚ್‌ ಆಗಿದ್ದಾಗ ಬೌಲಿಂಗ್‌ ಕೋಚ್‌ ಆಗಿಯೂ ಕಾರ‍್ಯನಿರ್ವಹಿಸುತ್ತಿದ್ದರು. ಆದರೆ ಅವರನ್ನು ಎನ್‌ಸಿಎಗೆ ವರ್ಗಾವಣೆ ಮಾಡಿದ ಬಳಿಕ ಹೃಷಿಕೇಶ್‌ ಕಾನಿಟ್ಕರ್‌ರನ್ನು ಬ್ಯಾಟಿಂಗ್‌ ಕೋಚ್‌ ಆಗಿ ನೇಮಿಸಲಾಯಿತು.

ICC ODI Rankings: ಬರೋಬ್ಬರಿ 117 ಸ್ಥಾನ ಜಿಗಿದ ದ್ವಿಶತಕ ವೀರ ಇಶಾನ್‌ ಕಿಶನ್‌!

ಹಾಕಿ: ಸೆಮೀಸ್‌ನಲ್ಲಿಂದು ಭಾರತ-ಐರ್ಲೆಂಡ್‌ ಸೆಣಸು

ವೆಲೆನ್ಸಿಯಾ(ಸ್ಪೇನ್‌): ಚೊಚ್ಚಲ ಆವೃತ್ತಿಯ ಮಹಿಳಾ ನೇಷನ್ಸ್‌ ಕಪ್‌ ಹಾಕಿ ಟೂರ್ನಿಯ ಸೆಮಿಫೈನಲ್‌ನಲ್ಲಿ ಶುಕ್ರವಾರ ಭಾರತ ತಂಡ ಐರ್ಲೆಂಡ್‌ ವಿರುದ್ಧ ಸೆಣಸಲಿದೆ. ಗುಂಪು ಹಂತದಲ್ಲಿ ಆಡಿದ್ದ ಮೂರೂ ಪಂದ್ಯಗಳನ್ನು ಗೆದ್ದಿದ್ದ ಭಾರತ ‘ಬಿ’ ಗುಂಪಿನಲ್ಲಿ 9 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿತ್ತು. ಚಿಲಿ, ಜಪಾನ್‌ ಹಾಗೂ ದ.ಆಫ್ರಿಕಾ ತಂಡಗಳನ್ನು ಮಣಿಸಿದ್ದ ಸವಿತಾ ಪೂನಿತಾ ಬಳಗ ಐರ್ಲೆಂಡ್‌ಗೂ ಸೋಲುಣಿಸಿ ಫೈನಲ್‌ಗೇರುವ ತವಕದಲ್ಲಿದೆ. ಮತ್ತೊಂದೆಡೆ ಗುಂಪು ಹಂತದಲ್ಲಿ ಆಡಿದ 3 ಪಂದ್ಯಗಳಲ್ಲಿ ಐರ್ಲೆಂಡ್‌ ಕೇವಲ 1 ಪಂದ್ಯ ಗೆದ್ದಿದ್ದು, ‘ಎ’ ಗುಂಪಿನಲ್ಲಿ 2ನೇ ಸ್ಥಾನ ಪಡೆದುಕೊಂಡಿತ್ತು. ಶುಕ್ರವಾರ ಮತ್ತೊಂದು ಸೆಮಿಫೈನಲ್‌ನಲ್ಲಿ ಸ್ಪೇನ್‌-ಜಪಾನ್‌ ಮುಖಾಮುಖಿಯಾಗಲಿವೆ.