Kohli vs BCCI: ವಿರಾಟ್ ಕೊಹ್ಲಿ ಹೇಳಿಕೆ ಕುರಿತು ಮೌನ ಮುರಿದ ಸೌರವ್ ಗಂಗೂಲಿ..!
* ಏಕದಿನ ನಾಯಕತ್ವದಿಂದ ಕೆಳಗಿಳಿಸಿದ್ದರ ಬಗ್ಗೆ ಬಹಿರಂಗ ಹೇಳಿಕೆ ನೀಡಿದ ವಿರಾಟ್ ಕೊಹ್ಲಿ
* ಕೊಹ್ಲಿ ಹೇಳಿಕೆ ಪರ-ವಿರೋಧ ಚರ್ಚೆಗಳು ಆರಂಭ
* ಇದನ್ನೆಲ್ಲ ಬಿಸಿಸಿಐ ನೋಡಿಕೊಳ್ಳಲಿದೆ ಎಂದ ಸೌರವ್ ಗಂಗೂಲಿ
ಕೋಲ್ಕತ(ಡಿ.17): ನಾಯಕತ್ವ ಬದಲಾವಣೆ ಕುರಿತು ವಿರಾಟ್ ಕೊಹ್ಲಿ (Virat Kohli) ಹೇಳಿಕೆ ಬಗ್ಗೆ ಬಿಸಿಸಿಐ (BCCI) ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಕೊನೆಗೂ ಮೌನ ಮುರಿದಿದ್ದು, ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಇದನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನೋಡಿಕೊಳ್ಳಲಿದೆ ಎಂದಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ (India Tour of South Africa) ಮುನ್ನ ಭಾರತ ಕ್ರಿಕೆಟ್ ಆಯ್ಕೆ ಸಮಿತಿಯು ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ತಂಡದ ನಾಯಕತ್ವದಿಂದ ಕೆಳಗಿಳಿಸಲಾಗಿತ್ತು.
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳುವ ಮುನ್ನ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ವಿರಾಟ್ ಕೊಹ್ಲಿ, ‘ನಾನು ಟಿ20 ನಾಯಕತ್ವ ತೊರೆಯುವ ಬಗ್ಗೆ ಬಿಸಿಸಿಐ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೆ. ಇದಕ್ಕೆ ಅವರಿಂದ ಯಾವುದೇ ಆಕ್ಷೇಪ ವ್ಯಕ್ತವಾಗಲಿಲ್ಲ. ಯಾರೂ ಕೂಡಾ ಟಿ20 ನಾಯಕತ್ವ ತೊರೆಯದಂತೆ ನನ್ನಲ್ಲಿ ಮನವಿಯೂ ಮಾಡಿಲ್ಲ’ ಎಂದಿದ್ದರು. ಇದು ಕೊಹ್ಲಿ ನಾಯಕತ್ವ ತ್ಯಜಿಸುವ ಕುರಿತು ಕೆಲ ದಿನಗಳ ಹಿಂದೆ ಗಂಗೂಲಿ ನೀಡಿದ್ದ ಹೇಳಿಕೆಗೆ ತದ್ವಿರುದ್ಧವಾಗಿತ್ತು. ಕೊಹ್ಲಿ ಈ ಹೇಳಿಕೆ ನೀಡುತ್ತಿದ್ದಂತೆ ಭಾರೀ ಚರ್ಚೆಗಳು ಆರಂಭಗೊಂಡಿದ್ದವು. ಈ ಕುರಿತು ಪ್ರತಿಕ್ರಿಯೆಗಾಗಿ ತಮ್ಮನ್ನು ಸಂಪರ್ಕಿಸಿದ ಸ್ಥಳೀಯ ಮಾಧ್ಯಮಗಳಿಗೆ ಗಂಗೂಲಿ, ‘ಈ ಕುರಿತು ಯಾವುದೇ ಹೇಳಿಕೆ ಕೊಡುವುದಿಲ್ಲ, ಪ್ರಕಟಣೆಯನ್ನು ನೀಡುವುದಿಲ್ಲ, ಸುದ್ದಿಗೋಷ್ಠಿ ಸಹ ನಡೆಸುವುದಿಲ್ಲ. ನಾವು ಅದನ್ನು ನೋಡಿಕೊಳ್ಳುತ್ತೇವೆ, ಬಿಸಿಸಿಐಗೆ ಬಿಟ್ಟುಬಿಡಿ’ ಎಂದಿದ್ದಾರೆ.
ಇತ್ತೀಚೆಗಷ್ಟೇ ಕೊಹ್ಲಿ ನಾಯಕತ್ವದ ಬಗ್ಗೆ ಹೇಳಿಕೆ ನೀಡಿದ್ದ ಗಂಗೂಲಿ, ‘ಟಿ20 ನಾಯಕತ್ವ ತ್ಯಜಿಸದಂತೆ ಕೊಹ್ಲಿಗೆ ಮನವಿ ಮಾಡಲಾಗಿತ್ತು. ಆದರೆ ನಮ್ಮ ಮನವಿಗೆ ಅವರು ಸ್ಪಂದಿಸಲಿಲ್ಲ’ ಎಂದಿದ್ದರು.
ಕೊಹ್ಲಿಯ ಕಠಿಣ ಪದಗಳಿಂದಾಗಿಯೇ ನಾಯಕತ್ವ ಕೈತಪ್ಪಿರಬಹುದು: ಗವಾಸ್ಕರ್
ನವದೆಹಲಿ: ವಿರಾಟ್ ಕೊಹ್ಲಿ ಅವರ ಏಕದಿನ ನಾಯಕತ್ವ ಕೈತಪ್ಪಲು ಅವರು ಸೆಪ್ಟಂಬರ್‌ನಲ್ಲಿ ನೀಡಿದ್ದ ಹೇಳಿಕೆ ಕಾರಣವಾಗಿರಬಹುದು ಎಂದು ಸುನಿಲ್ ಗವಾಸ್ಕರ್ (Sunil Gavaskar) ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಟಿ20 ವಿಶ್ವಕಪ್‌ಗೂ (ICC T20 World Cup) ಮುನ್ನ ಹೇಳಿಕೆ ನೀಡಿದ್ದ ಕೊಹ್ಲಿ, ವಿಶ್ವಕಪ್ ಬಳಿಕ ಟಿ20 ನಾಯಕತ್ವ ತ್ಯಜಿಸುವುದಾಗಿ ಹೇಳಿದ್ದರು. ಆದರೆ ಏಕದಿನ ಹಾಗೂ ಟೆಸ್ಟ್ ತಂಡಕ್ಕೆ ನಾಯಕನಾಗಿ ಮುಂದುವರಿಯುತ್ತೇನೆ ಎಂದು ಸ್ಪಷ್ಟನೆ ನೀಡಿದ್ದರು.
India Tour of South Africa: ಹರಿಣಗಳ ನಾಡಿಗೆ ಬಂದಿಳಿದ ಟೀಂ ಇಂಡಿಯಾ
ಈ ಬಗ್ಗೆ ಬುಧವಾರ ಪ್ರತಿಕ್ರಿಯಿಸಿದ ಗವಾಸ್ಕರ್, ಕೊಹ್ಲಿಯ ಕಠಿಣ ಪದಗಳಿಂದಾಗಿಯೇ ಏಕದಿನ ನಾಯಕತ್ವ ಕೈತಪ್ಪಿರಬಹುದು ಎಂದಿದ್ದಾರೆ. ‘ಟಿ20 ನಾಯಕತ್ವ ತ್ಯಜಿಸುತ್ತೇನೆ ಎಂಬ ಕೊಹ್ಲಿಯ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ಟೆಸ್ಟ್ ಹಾಗೂ ಏಕದಿನ ತಂಡಕ್ಕೆ ಅವರೇ ನಾಯಕನಾಗಿ ಮುಂದುವರಿಯಲಿದ್ದಾರೆ ಎಂದಿದ್ದರು. ಆದರೆ ಇದು ಆಡಳಿತ ಮಂಡಳಿಗೆ ಬೇಸರ ತರಿಸಿರಬಹುದು. ಅದರ ಬದಲು ಕೊಹ್ಲಿ, ಏಕದಿನ ಹಾಗೂ ಟೆಸ್ಟ್ ನಾಯಕತ್ವಕ್ಕೆ ತಾನು ಲಭ್ಯವಿದ್ದೇನೆ ಎಂದು ಹೇಳಬಹುದಿತ್ತು’ ಎಂದು ಗವಾಸ್ಕರ್ ತಿಳಸಿದ್ದಾರೆ.
Kohli vs BCCI: ವಿರಾಟ್ ಕೊಹ್ಲಿ ನಡೆಗೆ ಕ್ರಿಕೆಟ್ ದಿಗ್ಗಜರ ತೀವ್ರ ಆಕ್ರೋಶ..!
‘ಕೊಹ್ಲಿ ಭಾರತ ಹಾಗೂ ವಿದೇಶಗಳಲ್ಲಿ ಹಲವು ದ್ವಿಪಕ್ಷೀಯ ಸರಣಿಗಳನ್ನು ಗೆದ್ದಿದ್ದಾರೆ. ಐಸಿಸಿ ಟ್ರೋಫಿಗಳನ್ನು ಗೆಲ್ಲದಿದ್ದರೂ ಅವರ ಸಾಧನೆ ಉತ್ತಮವಾಗಿತ್ತು. ಹೀಗಾಗಿ ಅವರ ನಾಯಕತ್ವದ ಬಗ್ಗೆ ಅಸಮಾಧಾನಕ್ಕೆ ಕಾರಣಗಳಿಲ್ಲ. ಆದರೆ ತಂಡವನ್ನು ಮುನ್ನಡೆಸುವ ಬಗ್ಗೆ ಹೇಳಿಕೆ ನೀಡುವಾಗ ಅವರು ಮಾಡಿದ ಎಡವಟ್ಟಿನಿಂದಾಗಿಯೇ ಅವರು ಏಕದಿನ ನಾಯಕನ ಸ್ಥಾನ ಕಳೆದುಕೊಂಡಿರಬಹುದು’ ಎಂದಿದ್ದಾರೆ.