ರೋಜರ್ ಬಿನ್ನಿ ಅವರ ಬಿಸಿಸಿಐ ಅಧ್ಯಕ್ಷ ಅವಧಿ ಅಂತ್ಯಗೊಂಡಿದ್ದು, ರಾಜೀವ್ ಶುಕ್ಲಾ ಹಂಗಾಮಿ ಅಧ್ಯಕ್ಷರಾಗುವ ಸಾಧ್ಯತೆ ಇದೆ. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ವಾರ್ಷಿಕ ಮಹಾಸಭೆಯಲ್ಲಿ ಹೊಸ ಅಧ್ಯಕ್ಷರ ಆಯ್ಕೆ ನಡೆಯಲಿದೆ.
ನವದೆಹಲಿ: 2022ರಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷರಾಗಿರುವ ಕರ್ನಾಟಕದ ರೋಜರ್ ಬಿನ್ನಿ ಅಧಿಕಾರಾವಧಿ ಶನಿವಾರ ಕೊನೆಗೊಂಡಿದೆ. ಅವರಿಂದ ತೆರವಾಗಲಿರುವ ಸ್ಥಾನಕ್ಕೆ ರಾಜ್ಯಸಭಾ ಸದಸ್ಯ ರಾಜೀವ್ ಶುಕ್ಲಾ ಹಂಗಾಮಿಯಾಗಿ ನೇಮಕಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
1983ರ ಐಸಿಸಿ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯ ರೋಜರ್ ಬಿನ್ನಿ ಅವರಿಗೆ ಜುಲೈ 19ರಂದು 70 ವರ್ಷ ಪೂರ್ಣಗೊಂಡಿತು. ಬಿಸಿಸಿಐ ನಿಯಮಗಳ ಪ್ರಕಾರ 70 ವರ್ಷದ ಬಳಿಕ ಅಧಿಕಾರದಲ್ಲಿ ಇರುವಂತಿಲ್ಲ. ಹೀಗಾಗಿ ಅವರು ಹುದ್ದೆ ತ್ಯಜಿಸಬೇಕಾಗಿದೆ.
ಆದರೆ ಬಿಸಿಸಿಐ ಮುಂದಿನ ವಾರ್ಷಿಕ ಮಹಾಸಭೆ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ. ಅಲ್ಲಿವರೆಗೂ ಶುಕ್ಲಾರನ್ನೇ ಹಂಗಾಮಿ ಅಧ್ಯಕ್ಷರಾಗಿ ನೇಮಿಸುವ ಸಾಧ್ಯತೆ ಹೆಚ್ಚಿದೆ ಎಂದು ವರದಿಯಾಗಿದೆ. ಈ ಹಿಂದೆ ಐಪಿಎಲ್ ಮುಖ್ಯಸ್ಥರಾಗಿದ್ದ 65 ವರ್ಷದ ಶುಕ್ಲಾ, ಸದ್ಯ ಬಿಸಿಸಿಐ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
75 ವರ್ಷದವರೆಗೂ ಇನ್ನು ಅಧ್ಯಕ್ಷ ಹುದ್ದೆ?
ಸದ್ಯ ಬಿಸಿಸಿಐ ನಿಯಮ ಪ್ರಕಾರ 70 ವರ್ಷ ಬಳಿಕ ಅಧಿಕಾರದಲ್ಲಿ ಇರುವಂತಿಲ್ಲ. ಆದರೆ ಮುಂದಿನ ಅಧಿವೇಶನದಲ್ಲಿ ಮಂಡನೆಯಾಗಲಿರುವ ನೂತನ ರಾಷ್ಟ್ರೀಯ ಕ್ರೀಡಾ ಕಾಯ್ದೆ ಪ್ರಕಾರ, 75 ವರ್ಷದ ವರೆಗೂ ಅಧಿಕಾರದಲ್ಲಿ ಮುಂದುವರಿಯಬಹುದು. ಇದನ್ನು ಪರಿಗಣಿಸಿ, ರೋಜರ್ ಬಿನ್ನಿ ಅವರನ್ನು ಮುಂದಿನ ಚುನಾವಣೆವರೆಗೂ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಿದರೂ ಅಚ್ಚರಿಯಿಲ್ಲ.
ದೇಸಿ ಕ್ರಿಕೆಟ್‌ನತ್ತ ಶಮಿ: ಬಂಗಾಳ ತಂಡಕ್ಕೆ ಆಯ್ಕೆ
ಕೋಲ್ಕತಾ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿರುವ ಟೀಂ ಇಂಡಿಯಾ ತಾರಾ ವೇಗಿ ಮೊಹಮ್ಮದ್ ಶಮಿ ದೇಸಿ ಕ್ರಿಕೆಟ್‌ನತ್ತ ಮುಖ ಮಾಡಿದ್ದಾರೆ. ಬಂಗಾಳ ಕ್ರಿಕೆಟ್ ಸಂಸ್ಥೆ ಮುಂದಿನ ಋತುವಿನಲ್ಲಿ ಆಡಲಿರುವ 50 ಕ್ರಿಕೆಟಿಗರ ಸಂಭವನೀಯ ಪಟ್ಟಿ ಪ್ರಕಟಿಸಿದ್ದು, ಅದರಲ್ಲಿ ಶಮಿ ಸ್ಥಾನ ಪಡೆದಿದ್ದಾರೆ.
ಐಪಿಎಲ್ ಟೂರ್ನಿಯ ಬಳಿಕ ಕ್ರಿಕೆಟ್‌ನಿಂದ ದೂರ ಉಳಿದಿರುವ ಶಮಿ ದೇಸಿ ಪಂದ್ಯಗಳಲ್ಲಿ ಆಡುವ ಸಾಧ್ಯತೆಯಿದೆ. ಆ.28ರಿಂದ ಆರಂಭವಾಗಲಿರುವ ದುಲೀಪ್ ಟೂರ್ನಿಯಲ್ಲಿ ಶಮಿ ಬಂಗಾಳ ತಂಡವನ್ನು ಪ್ರತಿನಿಧಿಸುವ ನಿರೀಕ್ಷೆಯಿದೆ. ಇನ್ನು, ಬಂಗಾಳ ಕ್ರಿಕೆಟ್ ಸಂಸ್ಥೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಆಕಾಶ್ ದೀಪ್ ಮತ್ತು ಅಭಿಮನ್ಯು ಈಶ್ವರನ್ ಕೂಡ ಸೇರಿದ್ದಾರೆ.
ಕಳೆದ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮೊಹಮ್ಮದ್ ಶಮಿ ಸನ್‌ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿದಿದ್ದರು. ಆದರೆ ಬೌಲಿಂಗ್‌ನಲ್ಲಿ ಸಾಕಷ್ಟು ದುಬಾರಿಯಾಗಿದ್ದರು. ಇದೀಗ ರಾಷ್ಟ್ರೀಯ ತಂಡಕ್ಕೆ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದ್ದಾರೆ.
2ನೇ ಮಹಿಳಾ ಏಕದಿನ ಪಂದ್ಯ ಸೋತ ಭಾರತ
ಲಂಡನ್: ಇಂಗ್ಲೆಂಡ್ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡ - ವಿಕೆಟ್‌ಗಳಲ್ಲಿ ಸೋಲನುಭವಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿ 1-1 ಸಮಬಲಗೊಂಡಿತು.
ಮಳೆಯಿಂದಾಗಿ ಪಂದ್ಯ ಕೆಲ ಗಂಟೆ ತಡವಾಗಿ ಆರಂಭಗೊಂಡಿತು. ತಲಾ 29 ಓವರ್ ಪಂದ್ಯ ಆಡಿಸಲಾಯಿತು. ಮೊದಲು ಬ್ಯಾಟ್ ಮಾಡಿದ ಭಾರತ 29 ಓವರ್‌ಗಳಲ್ಲಿ 8 ವಿಕೆಟ್‌ಗೆ 143 ರನ್ ಗಳಿಸಿತು. ಸ್ಮೃತಿ ಮಂಧನಾ 42, ದೀಪ್ತಿ ಶರ್ಮಾ ಔಟಾಗದೆ 30 ರನ್ ಸಿಡಿಸಿದರು. ಸುಲಭ ಗುರಿ ಬೆನ್ನತ್ತಿದ ಇಂಗ್ಲೆಂಡ್ 18.4 ಓವರ್‌ಗಳಲ್ಲಿ 1 ವಿಕೆಟ್‌ಗೆ 102 ರನ್ ಗಳಿಸಿದ್ದಾಗ ಮತ್ತೆ ಮಳೆ ಅಡ್ಡಿಪಡಿಸಿತು. ಹೀಗಾಗಿ ಇಂಗ್ಲೆಂಡ್‌ಗೆ 24 ಓವರ್‌ಗಳಲ್ಲಿ 115 ರನ್ ಗುರಿ ನೀಡಲಾಯಿತು. ತಂಡ 21ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ ಗೆಲುವು ತನ್ನದಾಗಿಸಿಕೊಂಡಿತು. 3ನೇ ಹಾಗೂ ಕೊನೆ ಪಂದ್ಯ ಜು.22ಕ್ಕೆ ನಡೆಯಲಿದೆ.
