ಕ್ರಿಕೆಟ್ to ಅಗ್ರಿಕಲ್ಚರ್: ಚಾಮರಾಜನಗರದಲ್ಲಿ ಟ್ರಾಕ್ಟರ್ ಖರೀದಿಸಿದ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ
ಕ್ರಿಕೆಟ್ ಜತೆಗೆ ಹೊಸ ಇನಿಂಗ್ಸ್ ಆರಂಭಿಸಿದ ಬಿಸಿಸಿಐ ಅಧ್ಯಕ್ಷ
ಚಾಮರಾಜನಗರದಲ್ಲಿ ಕೃಷಿ ಮಾಡಲು ಟ್ರ್ಯಾಕ್ಟರ್ ಖರೀದಿಸಿದ ರೋಜರ್ ಬಿನ್ನಿ
1983ರ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯ ಬಿನ್ನಿ
ಚಾಮರಾಜನಗರ(ಜೂ.16): ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಗಳಲ್ಲಿ ಒಂದಾದ ಬಿಸಿಸಿಐನ ಅಧ್ಯಕ್ಷ ರೋಜರ್ ಬಿನ್ನಿ ಕೃಷಿಯತ್ತ ಒಲವು ತೋರಿದ್ದು ಚಾಮರಾಜನಗರದಲ್ಲಿ ಟ್ರಾಕ್ಟರ್ ಒಂದನ್ನು ಖರೀದಿ ಮಾಡಿದ್ದಾರೆ.
ಭಾರತ ಕ್ರಿಕೆಟ್ ತಂಡವು 1983ರಲ್ಲಿ ಚೊಚ್ಚಲ ವಿಶ್ವಕಪ್ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದ ಮಾರಕ ವೇಗಿ ರೋಜರ್ ಬಿನ್ನಿ ಕೃಷಿ ಮೂಲಕ ಇದೀಗ ಎರಡನೇ ಇನ್ನಿಂಗ್ಸ್ ಆರಂಭ ಮಾಡಿದ್ದು ಗುಂಡ್ಲುಪೇಟೆ ಬಳಿ 36 ಎಕರೆ ಜಮೀನು ಖರೀದಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.ಜಿಲ್ಲೆಯ ಶೋ ರೂಂ ನಲ್ಲಿ ಟ್ರಾಕ್ಟರ್ ಖರೀದಿಸಿ ಎಂದು ಬೆಂಗಳೂರಲ್ಲಿ ತಿಳಿಸಿದ್ದರಿಂದ ಚಾಮರಾಜನಗರದ ಮಹೀಂದ್ರಾ ಟ್ರಾಕ್ಟರ್ ಶೋ ರೂಂನಲ್ಲಿ ಇಂದು ರೋಜರ್ ಬಿನ್ನಿ ಟ್ರಾಕ್ಟರ್ ಖರೀದಿ ಮಾಡಿದ್ದಾರೆ.
ನಮ್ಮ ಪೂರ್ವಿಕರು ಕೃಷಿಕರಲ್ಲ, ಆದರೆ ನಾನು ಕೃಷಿಯತ್ತ ಆಸಕ್ತಿ ಬೆಳೆಸಿಕೊಂಡಿದ್ದು ನಾನು ಗುಂಡ್ಲುಪೇಟೆಯ ಸಮೀಪದಲ್ಲಿ ಜಮೀನು ಖರೀದಿಸಿದ್ದು ಕೃಷಿ ಚಟುವಟಿಕೆಗಾಗಿ ಚಾಮರಾಜನಗರದಲ್ಲಿ ಟ್ರಾಕ್ಟರ್ ಖರೀದಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಕ್ಯಾಪ್ಟನ್ ಕೂಲ್ ಧೋನಿಗೂ ಇದೆ ಕೃಷಿ ಪ್ರೀತಿ:
ಖ್ಯಾತ ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರು ಮಹೀಂದ್ರಾ ಕಂಪನಿಯ ಗ್ರಾಹಕರಾಗಿದ್ದಾರೆ. ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಧೋನಿ, ಕೋವಿಡ್ ವೇಳೆ ಬಹಳಷ್ಟು ಸಮಯವನ್ನು ನಾನು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೆ. ಈ ವೇಳೆ ಕೃಷಿ ಚಟುವಟಿಕೆಗೆ ಶಕ್ತಿಶಾಲಿಯಾದ ಟ್ರ್ಯಾಕ್ಟರ್ ಅವಶ್ಯಕತೆ ಇದೆ ಎಂದು ಮನಗಂಡೆ. ಇದೀಗ ಸ್ವರಾಜ್ ಬಿಡುಗಡೆ ಮಾಡಿರುವ ಟ್ರ್ಯಾಕ್ಟರ್ ರೈತರಿಗೆ ಅನುಕೂಲಕಾರಿಯಾಗಿದೆ ಎಂದರು. ಇವರನ್ನು ಸ್ವರಾಜ್ ಟ್ರ್ಯಾಕ್ಟರ್‌ನ ರಾಯಭಾರಿಯಾಗಿ ನೇಮಿಸಲು ಸಂಸ್ಥೆ ನಿರ್ಧರಿಸಿದೆ.
ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಎಂ ಎಸ್ ಧೋನಿ, ಐಪಿಎಲ್ ಟೂರ್ನಿಯಲ್ಲಿ ಮಾತ್ರ ಪಾಲ್ಗೊಳ್ಳುತ್ತಿದ್ದಾರೆ. ರಾಂಚಿಯಲ್ಲಿದ್ದಾಗ ಹಣ್ಣು ತರಕಾರಿ, ಹೈನುಗಾರಿಕೆ ಕ್ಷೇತ್ರದತ್ತ ಧೋನಿ ಹೆಚ್ಚಿನ ಒಲವನ್ನು ಹೊಂದಿದ್ದಾರೆ. ರಾಂಚಿ ನಗರದ ಹೊರವಲಯದಲ್ಲಿ 43 ಎಕರೆ ಪ್ರದೇಶದಲ್ಲಿ ತಾವು ಸಾವಯವ ಕೃಷಿ ನಡೆಸುತ್ತಿದ್ದು, ಸ್ಟ್ರಾಬೆರಿ, ಕ್ಯಾಪ್ಸಿಕಮ್, ಡ್ರ್ಯಾಗನ್ ಫ್ರೂಟ್, ಕಲ್ಲಂಗಡಿ ಮುಂತಾದ ಹಣ್ಣುಗಳು ಸೇರಿದಂತೆ ವಿವಿಧ ರೀತಿಯ ತರಕಾರಿಗಳನ್ನು ಬೆಳೆಯುವ ಮೂಲಕ ಹಲವರ ಪಾಲಿಗೆ ಸ್ಪೂರ್ತಿ ಹಾಗೂ ಮಾದರಿಯಾಗಿದ್ದಾರೆ.
ಇನ್ನು ಕೃಷಿ ಜೊತೆಗೆ ಧೋನಿ ದೇಸಿ ಹಸುಗಳು, ಕೋಳಿ, ಮೀನು ಸಾಕಾಣಿಕೆಯನ್ನೂ ಮಾಡುತ್ತಿದ್ದಾರೆ. ಸದ್ಯದಲ್ಲೇ ಜೇನು ಹುಳು ಸಾಕಾಣಿಕೆಯನ್ನೂ ಆರಂಭಿಸಲಿದ್ದಾರೆ ಎನ್ನಲಾಗಿದೆ.