Equal Pay Policy: BCCI Planning Massive ₹125 Cr Reward ಒಂದು ವೇಳೆ ಹರ್ಮಾನ್‌ಪ್ರೀತ್‌ ಕೌರ್‌ ಪಡೆ ಟ್ರೋಫಿ ಗೆದ್ದರೆ, ಬಿಸಿಸಿಐನ 'ಸಮಾನ ವೇತನ' ನೀತಿಯ ಅಡಿಯಲ್ಲಿ ಪುರುಷರ ತಂಡಕ್ಕೆ ನೀಡಿದಷ್ಟೇ ಅಂದರೆ 125 ಕೋಟಿ ರೂ. ಬಹುಮಾನ ನೀಡಲು ಚಿಂತನೆ ನಡೆಸಿದೆ.

ಬೆಂಗಳೂರು (ನ.1): ಮಹಿಳಾ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿರುವ ಭಾರತ ಮಹಿಳಾ ತಂಡ ಐತಿಹಾಸಿಕ ಸಾಧನೆ ಮಾಡುವ ಹೊಸ್ತಿಲಲ್ಲಿದೆ. ಭಾನುವಾರ ನವೀ ಮುಂಬೈನಲ್ಲಿ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಹರ್ಮಾನ್‌ಪ್ರೀತ್‌ ಕೌರ್‌ ನೇತೃತ್ವದ ಭಾರತ ತಂಡವೇನಾದರೂ ಟ್ರೋಫಿ ಜಯಿಸಿದ್ದಲ್ಲಿ ಆಟಗಾರ್ತಿಯರು ನಿರೀಕ್ಷೆಗೂ ಮೀರಿದ ಮೊತ್ತವನ್ನು ಬಹುಮಾನವಾಗಿ ಘೋಷಣೆ ಮಾಡಲು ಬಿಸಿಸಿಐ ಸಂಪೂರ್ಣವಾಗಿ ಸಿದ್ದವಾಗಿದೆ.

ಬಿಸಿಸಿಐ ಕಾರ್ಯದರ್ಶಿ ಮತ್ತು ಈಗ ಐಸಿಸಿ ಅಧ್ಯಕ್ಷರಾಗಿರುವ ಜಯ್ ಶಾ ಪ್ರತಿಪಾದಿಸಿದ "ಸಮಾನ ವೇತನ" ನೀತಿಯನ್ನು ಅನುಸರಿಸಿ, ಕಳೆದ ವರ್ಷ ಅಮೆರಿಕಾದಲ್ಲಿ ನಡೆದ ಟಿ20 ವಿಶ್ವಕಪ್ ಗೆದ್ದ ನಂತರ ರೋಹಿತ್ ಶರ್ಮಾ ನೇತೃತ್ವದ ತಂಡಕ್ಕೆ ನೀಡಲಾದ ಮೊತ್ತವನ್ನು ಮಹಿಳಾ ತಂಡಕ್ಕೂ ನೀಡುವ ಬಗ್ಗೆ ಉನ್ನತ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಟಿ20 ವಿಶ್ವಕಪ್‌ ಗೆದ್ದ ಪುರುಷರ ತಂಡಕ್ಕೆ 125 ಕೋಟಿ ಬಹುಮಾನ

ಪುರುಷರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿದ ಪ್ರದರ್ಶನಕ್ಕಾಗಿ ಇಡೀ ತಂಡ, ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ 125 ಕೋಟಿ ರೂ. ಬಹುಮಾನವನ್ನು ಬಿಸಿಸಿಐ ಘೋಷಣೆ ಮಾಡಿತ್ತು.

"ಬಿಸಿಸಿಐ ಪುರುಷರು ಮತ್ತು ಮಹಿಳೆಯರಿಗೆ ಸಮಾನ ವೇತನವನ್ನು ಬೆಂಬಲಿಸುತ್ತದೆ ಮತ್ತು ಆದ್ದರಿಂದ ನಮ್ಮ ಹುಡುಗಿಯರು ವಿಶ್ವಕಪ್ ಗೆದ್ದರೆ, ಪುರುಷರ ಜಾಗತಿಕ ವಿಜಯಕ್ಕೆ ನೀಡಿದಷ್ಟೇ ಮೊತ್ತವನ್ನು ಈ ಬಾರಿಯೂ ಬಹುಮಾನವಾಗಿ ಘೋಷಿಸಲಿದೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಆದರೆ ಅವರು ಕಪ್ ಗೆಲ್ಲುವ ಮೊದಲು ಘೋಷಣೆ ಮಾಡುವುದು ಒಳ್ಳೆಯದಲ್ಲ" ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿದೆ.

2017ರ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮಹಿಳಾ ತಂಡವು ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ 9 ರನ್‌ಗಳಿಂದ ಸೋತಾಗ, ಬಿಸಿಸಿಐ ಪ್ರತಿಯೊಬ್ಬ ಆಡುವ ಸದಸ್ಯರಿಗೂ ತಲಾ 50 ಲಕ್ಷ ರೂಪಾಯಿಗಳನ್ನು ನೀಡಿತ್ತು ಎಂಬುದನ್ನು ಗಮನಿಸಬೇಕು. ಹಿಂದಿನ ಮುಖ್ಯ ಕೋಚ್ ತುಷಾರ್ ಅರೋಥೆ ಮತ್ತು ಇತರ ಸಹಾಯಕ ಸಿಬ್ಬಂದಿಗೂ ಸಹ ಉತ್ತಮ ಬಹುಮಾನ ನೀಡಲಾಗಿತ್ತು.

ಎಂಟು ವರ್ಷಗಳ ನಂತರ, ಭಾರತೀಯ ಮಹಿಳೆಯರು ಈ ಬಾರಿ ವಿಶ್ವಕಪ್‌ ಗೆದ್ದರೆ, ಪ್ರತಿ ಕ್ರಿಕೆಟಿಗನ ಬಹುಮಾನದ ಮೊತ್ತವು 10 ಪಟ್ಟು ಹೆಚ್ಚಾಗುವುದು ಖಂಡಿತ.