Asianet Suvarna News Asianet Suvarna News

2024ರಲ್ಲಿ ಬಿಸಿಸಿಐನಿಂದ ಟಿ10 ಲೀಗ್? ಹೊಸ ಫ್ರಾಂಚೈಸಿ ಲೀಗ್ ಮುಂದಿರುವ ಪ್ರಶ್ನೆ & ಸವಾಲುಗಳು..!

ಈ ಲೀಗ್ ನಡೆಸಲು ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳುಗಳನ್ನು ಬಿಸಿಸಿಐ ಗುರುತಿಸಿದ್ದು, ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಮಹತ್ವವಿಲ್ಲದ ದ್ವಿಪಕ್ಷೀಯ ಸರಣಿಗಳನ್ನು ಮೊಟುಕುಗೊಳಿಸಲಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ಲೀಗ್ ಆರಂಭಿಸುವ ಮೊದಲು ಬಿಸಿಸಿಐ ಕೆಲ ಪ್ರಮುಖ ಸವಾಲುಗಳನ್ನು ಎದುರಿಸಬೇಕಿದ್ದು, ಕೆಲ ಮಹತ್ವದ ಪ್ರಶ್ನೆಗಳಿಗೆ ಉತ್ತರಗಳನ್ನೂ ಕಂಡುಕೊಳ್ಳಬೇಕಿದೆ.

BCCI likely to Launch IPL like T10 League in 2024 All Challenges all cricket fans need to know kvn
Author
First Published Dec 16, 2023, 12:38 PM IST

ಮುಂಬೈ(ಡಿ.16): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 16 ವರ್ಷ ಪೂರೈಸಿ, ಅಭೂತಪೂರ್ವ ಯಶಸ್ಸು ಸಾಧಿಸಿರುವ ಬೆನ್ನಲ್ಲೇ ಮತ್ತೊಂದು ಫ್ರಾಂಚೈಸಿ ಲೀಗ್ ಆರಂಭಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯೋಜನೆ ರೂಪಿಸುತ್ತಿದೆ ಎಂದು ಪ್ರತಿಷ್ಠಿತ ರಾಷ್ಟ್ರೀಯ ಮಾಧ್ಯಮವೊಂದು ವರದಿ ಪ್ರಕಟಿಸಿದೆ.

ಜಾಗತಿಕವಾಗಿ ಹೆಚ್ಚು ಜನಪ್ರಿಯತೆ ಗಳಿಸುತ್ತಿರುವ ಟಿ10 (ತಲಾ 10 ಓವರ್‌ಗಳ 2 ಇನ್ನಿಂಗ್ಸ್‌ಗಳು) ಲೀಗ್‌ವೊಂದನ್ನು 2024ರಲ್ಲೇ ಆರಂಭಿಸಲು ಬಿಸಿಸಿಐ ಸಿದ್ಧತೆ ಆರಂಭಿಸಿದೆ ಎಂದು ತಿಳಿದುಬಂದಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ನೀಲನಕ್ಷೆ ಸಿದ್ಧಪಡಿಸುತ್ತಿದ್ದು, ಲೀಗ್‌ನಲ್ಲಿ ಬಿಸಿಸಿಐ ಜೊತೆ ಕೈಜೋಡಿಸಬಹುದು ಎನ್ನಲಾಗಿರುವ ಪ್ರಾಯೋಜಕರು, ಪಾಲುದಾರರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನಲಾಗಿದೆ.

ಐಪಿಎಲ್‌ ಮಾದರಿಯಲ್ಲಿ ಭಾರತದಲ್ಲಿ ಟಿ10 ಲೀಗ್‌ ಆರಂಭಿಸುವ ನಿರ್ಧಾರ ಮಾಡಿದ ಬಿಸಿಸಿಐ!

ಈ ಲೀಗ್ ನಡೆಸಲು ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳುಗಳನ್ನು ಬಿಸಿಸಿಐ ಗುರುತಿಸಿದ್ದು, ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಮಹತ್ವವಿಲ್ಲದ ದ್ವಿಪಕ್ಷೀಯ ಸರಣಿಗಳನ್ನು ಮೊಟುಕುಗೊಳಿಸಲಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ಲೀಗ್ ಆರಂಭಿಸುವ ಮೊದಲು ಬಿಸಿಸಿಐ ಕೆಲ ಪ್ರಮುಖ ಸವಾಲುಗಳನ್ನು ಎದುರಿಸಬೇಕಿದ್ದು, ಕೆಲ ಮಹತ್ವದ ಪ್ರಶ್ನೆಗಳಿಗೆ ಉತ್ತರಗಳನ್ನೂ ಕಂಡುಕೊಳ್ಳಬೇಕಿದೆ.

1. ಐಪಿಎಲ್‌ನ ಜನಪ್ರಿಯತೆ ಕಡಿಮೆಯಾಗದಂತೆ ಹೊಸ ಲೀಗ್ ನಡೆಸಬೇಕಿರುವುದು ಬಿಸಿಸಿಐ ಮುಂದಿರುವ ಅತಿದೊಡ್ಡ ಸವಾಲು. ಹಾಗಂತ ವಿಶ್ವ ಶ್ರೇಷ್ಠ ಕ್ರಿಕೆಟಿಗರನ್ನು ಹೊರಗಿಟ್ಟು ಟೂರ್ನಿ ನಡೆಸಲು ಸಾಧ್ಯವಿಲ್ಲ. ಇವೆರಡರ ನಡುವೆ ಸಮತೋಲನ ಕಂಡುಕೊಳ್ಳುವುದು ಪ್ರಮುಖ ಸವಾಲು

2. ಹೊಸ ಟಿ10 ಲೀಗ್ ನಡೆಯುವ ಸಮಯದಲ್ಲಿ ವಿದೇಶಗಳಲ್ಲಿ ಬೇರೆ ಫ್ರಾಂಚೈಸಿ ಲೀಗ್‌ಗಳು ಆಯೋಜನೆಗೊಳ್ಳದಂತೆ ನೋಡಿಕೊಳ್ಳಬೇಕಿದೆ. ಐಪಿಎಲ್ ಸಮಯದಲ್ಲಿ ಹೇಗೆ ಯಾವ ದೇಶದಲ್ಲೂ ಟಿ20 ಲೀಗ್ ನಡೆಯುವುದಿಲ್ಲವೋ, ಅದೇ ರೀತಿ ವ್ಯವಸ್ಥೆಯನ್ನು ಟಿ10 ಲೀಗ್‌ಗೂ ಕಲ್ಪಿಸಬೇಕಿದೆ. 

3. ವಿಶ್ವ ಕ್ರಿಕೆಟ್‌ನಲ್ಲಿ ಪ್ರಭಾವಿಗಳಾದ ಆಸ್ಟ್ರೇಲಿಯಾ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ. ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ(ಇಸಿಬಿ) ತನ್ನ ತವರಲ್ಲಿ ಸರಣಿಗಳನ್ನು ಆಯೋಜಿಸುತ್ತದೆ. ಹೀಗಾಗಿ, ಇಸಿಬಿಯ ಮನವೊಲಿಸುವುದು ಕಷ್ಟವಾಗಬಹುದು.

ಧೋನಿ ಜರ್ಸಿ ನಂಬರ್ ಯಾರಿಗೂ ಲಭ್ಯವಿಲ್ಲ, ನಂ.7ಗೆ ನಿವೃತ್ತಿ ಘೋಷಿಸಿದ ಬಿಸಿಸಿಐ!

4. ಲೀಗ್‌ನಲ್ಲಿ ಆಡಲಿರುವ ಆಟಗಾರರಿಗೆ ವಯಸ್ಸಿನ ಮಿತಿ ಹೇರಬೇಕೆ ಎನ್ನುವ ಪ್ರಶ್ನೆ ಎದುರಾಗಬಹುದು. ಐಪಿಎಲ್‌ನಲ್ಲಿ ಆಡುವ ಆಟಗಾರರನ್ನೇ ಈ ಲೀಗ್‌ನಲ್ಲೂ ಆಡಿಸುವುದಾ ಅಥವಾ ನಿವೃತ್ತಿ ಪಡೆದಿರುವ ಇಲ್ಲವೇ ಬಿಸಿಸಿಐ ಕೇಂದ್ರ ಗುತ್ತಿಗೆ ಹೊಂದಿರದ, ಐಪಿಎಲ್‌ನ ಪ್ರಮುಖ ಆಟಗಾರರಾಗಿ ಗುರುತಿಸಿಕೊಳ್ಳದವರಿಗೆ ಮಾತ್ರ ಅವಕಾಶ ನೀಡಬೇಕಾ ಎನ್ನುವುದು ಬಿಸಿಸಿಐ ಮುಂದಿರುವ ಅತಿದೊಡ್ಡ ಪ್ರಶ್ನೆ. 

5. ತಂಡಗಳ ಮಾಲಿಕತ್ವವನ್ನು ಹೊಸಬರಿಗೆ ನೀಡಬೇಕೇ ಅಥವಾ ಐಪಿಎಲ್ ತಂಡಗಳನ್ನು ಹೊಂದಿರುವ ಫ್ರಾಂಚೈಸಿಗಳ ಮುಂದೆ ಮೊದಲು ಪ್ರಸ್ತಾಪವಿಟ್ಟು ಅವರು ನಿರಾಕರಿಸಿದರಷ್ಟೇ ಉಳಿದವರಿಗೆ ಅವಕಾಶ ನೀಡಬೇಕೆ ಎನ್ನುವ ಪ್ರಶ್ನೆಯೂ ಬಿಸಿಸಿಐಗೆ ಎದುರಾಗಬಹುದು. ಐಪಿಎಲ್ ತಂಡಗಳೊಂದಿಗೆ ಬಿಸಿಸಿಐ ಹೊಂದಿರುವ ಒಪ್ಪಂದದ ಪ್ರಕಾರ, ಮೊದಲು ಈಗಿರುವ ತಂಡಗಳಿಗೇ ಆಫರ್ ನೀಡಬೇಕಾಗುತ್ತದೆ.

6. ಪ್ರಸ್ತಾವಿತ ಟೂರ್ನಿಯನ್ನು ಪ್ರತಿ ವರ್ಷ ಭಾರತದಲ್ಲೇ ನಡೆಸಬೇಕೆ? ಅಥವಾ ಆತಿಥೇಯ ರಾಷ್ಟ್ರವನ್ನು ಬದಲಿಸಬೇಕೇ ಎನ್ನುವುದಕ್ಕೂ ಬಿಸಿಸಿಐ ಉತ್ತರ ಕಂಡುಕೊಳ್ಳಬೇಕು. ಐಪಿಎಲ್ ಆಯೋಜನೆಗೆ ಹಲವು ದೇಶಗಳು ಆಸಕ್ತಿ ತೋರಿದಂತೆ ಈ ಲೀಗ್‌ಗೂ ಆಸಕ್ತಿ ವ್ಯಕ್ತವಾಗಬಹುದು.

7. ಮುಖ್ಯವಾಗಿ ಮೊದಲು ಎಷ್ಟು ತಂಡಗಳನ್ನು ಆಡಿಸಬೇಕು ಎನ್ನುವುದನ್ನು ಬಿಸಿಸಿಐ ನಿರ್ಧರಿಸಬೇಕಿದೆ. ತಂಡಗಳ ಸಂಖ್ಯೆಯ ಮೇಲೆ ಟೂರ್ನಿಯ ಮಾದರಿ, ಒಟ್ಟು ಪಂದ್ಯಗಳ ಸಂಖ್ಯೆ ನಿರ್ಧಾರವಾಗಲಿದೆ. ತಂಡಗಳು ಹೆಚ್ಚಾದಷ್ಟು ಸಮಯ ಹೊಂದಿಸುವುದು ಬಿಸಿಸಿಐಗೆ ಸವಾಲಾಗಲಿದೆ.

Follow Us:
Download App:
  • android
  • ios