ಭಾರತೀಯ ಕ್ರಿಕೆಟ್ ತಂಡದ ಜೆರ್ಸಿ ಸ್ಪಾನ್ಸರ್‌ಶಿಪ್‌ಗಾಗಿ ಬಿಸಿಸಿಐ ಹೊಸ ಅರ್ಜಿಗಳನ್ನು ಆಹ್ವಾನಿಸಿದೆ. ಡ್ರೀಮ್ 11 ಜೊತೆಗಿನ ಒಪ್ಪಂದ ರದ್ದಾದ ನಂತರ ಈ ಹೊಸ ಹುಡುಕಾಟ ಆರಂಭವಾಗಿದೆ. 

ಮುಂಬೈ: ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡದ ಜೆರ್ಸಿ ಸ್ಪಾನ್ಸರ್‌ಗೆ 'ಗೌರವಾನ್ವಿತ ಸಂಸ್ಥೆ'ಗಳಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಇಂದು ಅಧಿಕೃತವಾಗಿ ಅರ್ಜಿ ಆಹ್ವಾನಿಸಿದೆ. ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ಜೆರ್ಸಿ ಸ್ಪಾನ್ಸರ್ ನೀಡುವ ಆಸಕ್ತ ಹಾಗೂ ಪ್ರತಿಷ್ಠಿತ ಸಂಸ್ಥೆಗಳು ಸೆಪ್ಟೆಂಬರ್ 02ರಿಂದಲೇ ಅರ್ಜಿ ಪಡೆದುಕೊಂಡು ಸೆಪ್ಟೆಂಬರ್ 16ರೊಳಗೆ ಬಿಡ್ ಸಲ್ಲಿಸಲು ದಿನಾಂಕ ಗಡುವು ನೀಡಿದೆ. 

ಕೆಲದಿನಗಳ ಹಿಂದಷ್ಟೇ ಭಾರತ ಕ್ರಿಕೆಟ್ ತಂಡದ ಜೆರ್ಸಿ ಪ್ರಾಯೋಜಕರಾಗಿದ್ದ ಆನ್‌ಲೈನ್ ಗೇಮಿಂಗ್ ಆ್ಯಪ್ ಡ್ರೀಮ್ 11 ಜೊತೆಗಿನ ಒಪ್ಪಂದವನ್ನು ಬಿಸಿಸಿಐ ಅಧಿಕೃತವಾಗಿ ರದ್ದುಗೊಳಿಸಿತ್ತು. ಹಣದಾಟದ ಆನ್‌ಲೈನ್ ಗೇಮಿಂಗ್ ನಿಷೇಧ ಕಾಯ್ದೆಯನ್ನು ಸಂಸತ್ತು ಅಂಗೀಕರಿಸಿದ ಬೆನ್ನಲ್ಲೇ ಬಿಸಿಸಿಐ ಜತೆಗಿನ ಡ್ರೀಮ್11 ಒಪ್ಪಂದ ಅಧಿಕೃತವಾಗಿ ಕೊನೆಗೊಂಡಿತ್ತು. ಹೀಗಾಗಿ ಇದೇ ಸೆಪ್ಟೆಂಬರ್ 09ರಿಂದ ಆರಂಭವಾಗಲಿರುವ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡವು ಯಾವುದೇ ಮೇಜರ್ ಜೆರ್ಸಿ ಸ್ಪಾನ್ಸರ್‌ಗಳಿಲ್ಲದೇ ಕಣಕ್ಕಿಳಿಯಲಿದೆ ಎಂದು ವರದಿಯಾಗಿತ್ತು. ಟೊಯೋಟಾ ಸೇರಿದಂತೆ ಹಲವು ದೊಡ್ಡ ಕಂಪನಿಗಳು ಈಗಾಗಲೇ ಪ್ರಾಯೋಜಕತ್ವದ ಆಸಕ್ತಿ ತೋರಿಸಿವೆ ಎಂದು ವರದಿಯಾಗಿದೆ.

ಇನ್ನು ಭಾರತ ಮಹಿಳಾ ಕ್ರಿಕೆಟ್ ತಂಡವು ತವರಿನಲ್ಲೇ ಇದೇ ಸೆಪ್ಟೆಂಬರ್ 30ರಿಂದ ಆರಂಭವಾಗಲಿರುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ. ಈ ಮಹತ್ವದ ಟೂರ್ನಿಗೂ ಮುನ್ನವೇ ಬಿಸಿಸಿಐ ಹೊಸ ಜೆರ್ಸಿ ಸ್ಪಾನ್ಸರ್ ಹುಡುಕಿಕೊಳ್ಳಲಿದೆಯೇ ಅಥವಾ ಇಲ್ಲವೇ ಎನ್ನುವುದನ್ನು ಕಾದು ನೋಡಬೇಕಿದೆ.

ಸದ್ಯ ಬಿಸಿಸಿಐ ಲೀಡ್ ಸ್ಪಾನ್ಸರ್‌ನೊಂದಿಗೆ ದೀರ್ಘಕಾಲದ ಒಪ್ಪಂದ ಮಾಡಿಕೊಳ್ಳಲು ಎದುರು ನೋಡುತ್ತಿದೆ. ಕೆಲ ಮಾಧ್ಯಮಗಳ ವರದಿಗಳ ಪ್ರಕಾರ ಬಿಸಿಸಿಐ 2027ರ ಪುರುಷರ ಏಕದಿನ ವಿಶ್ವಕಪ್ ಟೂರ್ನಿಯ ವರೆಗೆ ಹೊಸ ಜೆರ್ಸಿ ಸ್ಪಾನ್ಸರ್ ಜತೆಗೆ ಒಪ್ಪಂದ ಮಾಡಿಕೊಳ್ಳಲು ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಸದ್ಯ ಬಿಸಿಸಿಐ ಹಂಗಾಮಿ ಅಧ್ಯಕ್ಷ ರಾಜೀವ್ ಶುಕ್ಲಾ ನೇತೃತ್ವದಲ್ಲಿ ಕಳೆದ ಆಗಸ್ಟ್‌ 28ರಂದು ನಡೆದ ಅಪೆಕ್ಸ್ ಕೌನ್ಸಿಲ್ ಮೀಟಿಂಗ್‌ನಲ್ಲಿ ಹೊಸ ಸ್ಪಾನ್ಸರ್ ಹುಡುಕಾಟದ ವಿಚಾರದಲ್ಲಿ ಯಾವುದೇ ಅವಸರ ಮಾಡಬಾರದು ಎಂದು ತೀರ್ಮಾನಿಸಲಾಗಿದೆ ಎಂದು ವರದಿಯಾಗಿತ್ತು.

ಈ ಮೊದಲು ಬಿಸಿಸಿಐ, 2023ರಿಂದ 2026ರ ಅವಧಿಗೆ ಬರೋಬ್ಬರಿ 358 ಕೋಟಿ ರುಪಾಯಿಗೆ ಟೈಟಲ್ ಸ್ಪಾನ್ಸರ್ ಹಾಗೂ ಜೆರ್ಸಿ ಸ್ಪಾನ್ಸರ್ ಮಾಡಿಕೊಂಡಿತ್ತು. ಐಪಿಎಲ್‌ನಲ್ಲೂ ಡ್ರೀಮ್ 11 ಪ್ರಮುಖ ಪ್ರಾಯೋಜಕರಾಗಿದ್ದರು. ರೋಹಿತ್ ಶರ್ಮ, ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ, ಧೋನಿ, ಹಾರ್ದಿಕ್ ಪಾಂಡ್ಯ ಸೇರಿದಂತೆ ಹಲವು ಆಟಗಾರರು ಡ್ರೀಮ್ 11ರ ಬ್ರ್ಯಾಂಡ್ ಅಂಬಾಸಿಡರ್‌ಗಳಾಗಿದ್ದರು. ಆದರೆ ಇದೀಗ ಕೇಂದ್ರ ಸರ್ಕಾರದ ಆನ್‌ಲೈನ್ ಗೇಮಿಂಗ್ ಆ್ಯಕ್ಟ್ 2025 ಅನ್ವಯ ರಿಯಲ್ ಮನಿ ಗೇಮಿಂಗ್ ಆ್ಯಪ್‌ಗಳನ್ನು ನಿಷೇಧಿಸಿತ್ತು.

ಭವಿಷ್ಯದಲ್ಲಿ ಇಂತಹ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ. ಹಣವಿಟ್ಟು ಆಡುವ ಎಲ್ಲಾ ಆನ್‌ಲೈನ್‌ ಗೇಮ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದ ಬೆನ್ನಲ್ಲೇ, ಮನಿ ಗೇಮಿಂಗ್‌ ಸಂಸ್ಥೆಯಾಗಿರುವ ಡ್ರೀಮ್‌ 11 ಭಾರತೀಯ ಕ್ರಿಕೆಟ್‌ ತಂಡದ ಪ್ರಾಯೋಜಕತ್ವದಿಂದ ಹಿಂದೆ ಸರಿದಿದೆ.

ಏಷ್ಯಾಕಪ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡ ಹೀಗಿದೆ ನೋಡಿ:

ಸೂರ್ಯಕುಮಾರ್ ಯಾದವ್(ನಾಯಕ), ಶುಭ್‌ಮನ್ ಗಿಲ್(ಉಪನಾಯಕ), ರಿಷಭ್ ಪಂತ್(ವಿಕೆಟ್ ಕೀಪರ್), ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಶಿವಂ ದುಬೆ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ರಿಂಕು ಸಿಂಗ್.