ಟೀಮ್ ಇಂಡಿಯಾ ಜೊತೆ, ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆದ Leader-Dictator!
ಟಿ20 ವಿಶ್ವಕಪ್ ವಿಜೇತ ಟೀಮ್ ಇಂಡಿಯಾ ಪ್ಲೇಯರ್‌ಗಳು ಇಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಈ ವೇಳೆ ಪ್ರಧಾನಿ ಜೊತೆಗೆ ಅವರು ತೆಗೆಸಿದ ಫೋಟೋ ಭಾರೀ ವೈರಲ್ ಆಗಿದೆ.
ನವದೆಹಲಿ (ಜು.4): ಬಾರ್ಬಡೋಸ್‌ನಲ್ಲಿ ಕಳೆದ ಶನಿವಾರ ಟಿ20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ ತವರಿಗೆ ಆಗಮಿಸಿದೆ. ನವದೆಹಲಿಗೆ ಮೊದಲು ಪ್ರಯಾಣಿಸಿದ ತಂಡ ಗುರುವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿತು. ತಂಡದ ಆಟಗಾರರಿಗೆ ಪ್ರಧಾನಿ ಮಂತ್ರಿ ನಿವಾಸದಲ್ಲಿಯೇ ಔತಣಕೂಟ ಏರ್ಪಡಿಸಲಾಗಿತ್ತು. ಟೀಮ್ ಇಂಡಿಯಾ ಆಟಗಾರರೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ ಇದರ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು. ಜಸ್‌ಪ್ರೀತ್ ಬುಮ್ರಾ ತಮ್ಮ ಪತ್ನಿ ಸಂಜನಾ ಗಣೇಶನ್ ಹಾಗೂ ಪುತ್ರನೊಂದಿಗೆ ಪ್ರಧಾನಿ ಭೇಟಿಗೆ ಆಗಮಿಸಿದ್ದರು. ಈ ಕ್ಷಣದ ಫೋಟೋಗಳು ಕೂಡ ವೈರಲ್ ಆಗಿವೆ. ಈ ಎಲ್ಲದರ ನಡುವೆ ತಂಡಕ್ಕೆ ವಿಶ್ವಕಪ್ ಗೆದ್ದುಕೊಟ್ಟ ನಾಯಕ ರೋಹಿತ್ ಶರ್ಮ ಹಾಗೂ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೆ ಪ್ರಧಾನಿ ಮೋದಿ ವಿಶ್ವಕಪ್ ಟ್ರೋಫಿ ಹಿಡಿದು ಫೋಟೋಗೆ ಪೋಸ್ ನೀಡಿದ್ದರು. ಇಡೀ ತಂಡ ಕೂಡ ಈ ವೇಳೆ ಜೊತೆಯಲ್ಲಿತ್ತು. ಈ ವೇಳೆ ಪ್ರಧಾನಿ ಮೋದಿ ಅವರು ಟ್ರೋಫಿ ಹಿಡಿದುಕೊಂಡಿದ್ದ ರೀತಿಯೇ ರಾಜಕೀಯ ಕಾರಣಕ್ಕಾಗಿ ವೈರಲ್ ಆಗುತ್ತಿದೆ.
ಟ್ರೋಫಿ ಜೊತೆ ಇಡೀ ತಂಡದೊಂದಿಗೆ ಮೋದಿ ಪೋಸ್ ನೀಡಿದ್ದರು. ಈ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇದರಲ್ಲಿ ಮೋದಿ ಟ್ರೋಫಿಯನ್ನು ಹಿಡಿದುಕೊಂಡಿರಲೇ ಇಲ್ಲ. ನಾಯಕ ರೋಹಿತ್ ಶರ್ಮ ಹಾಗೂ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಪ್ರಧಾನಿ ಎದುರು ಟ್ರೋಫಿಯನ್ನು ಹಿಡಿದಿದ್ದರೆ, ಪ್ರಧಾನಿ ಮೋದಿ ಇವರಿಬ್ಬರ ಕೈಗಳನ್ನು ಹಿಡಿದು ಫೋಟೋಗೆ ಪೋಸ್ ನೀಡಿದ್ದರು. ಆ ಮೂಲಕ ಟ್ರೋಫಿ ಗೆಲ್ಲಿಸಿಕೊಟ್ಟವರಿಗೆ ಕ್ರೆಡಿಟ್ ನೀಡಿ ಪ್ರಧಾನಿ ಮೋದಿ ಗಮನ ಸೆಳೆದಿದ್ದಾರೆ. ಈ ಕ್ಷಣದ ಫೋಟೋಗಳೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಫೋಟೋವನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ ಅಭಿಮಾನಿಗಳು ಲೀಡರ್ ಹಾಗೂ ಸರ್ವಾಧಿಕಾರದ ನಡುವೆ ಇರುವ ವತ್ಯಾಸವಿದು ಎಂದು ಹೇಳಿ, ಇಂದಿರಾ ಗಾಂಧಿಯವರು 1983ರಲ್ಲಿ ವಿಶ್ವಕಪ್ ಟ್ರೋಫಿ ಹಿಡಿದ ಚಿತ್ರವನ್ನು ಹಂಚಿಕೊಂಡಿದ್ದಾರೆ. 1983ರಲ್ಲಿ ಕಪಿಲ್ ದೇವ್ ನೇತೃತ್ವದ ಭಾರತ ತಂಡ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ವಿಶ್ವಕಪ್ ಗೆದ್ದಿತ್ತು. ತವರಿಗೆ ವಾಪಸಾಗಿದ್ದ ತಂಡ ಕೂ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಪ್ರಧಾನಿ ನಿವಾಸದಲ್ಲಿ ಭೇಟಿ ಮಾಡಿತ್ತು. ಈ ವೇಳೆ ಇಂದಿರಾ ಗಾಂಧಿ ವಿಶ್ವಕಪ್ ಟ್ರೋಫಿಯನ್ನು ಹಿಡಿದು ಪೋಸ್ ನೀಡಿದ್ದರೆ, ಕಪಿಲ್ ದೇವ್ ನೇತೃತ್ವದ ತಂಡ ಅವರ ಹಿಂದೆ ನಿಂತುಕೊಂಡಿತ್ತು.
ಇಲ್ಲಿಯವರೆಗೂ ಈ ಫೋಟೋ ಯಾವುದೇ ವಿವಾದಕ್ಕೆ ಕಾರಣವಾಗಿರಲಿಲ್ಲ. ಆದರೆ, ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿ, ಅವರ ಆಡಳಿತ ಸರ್ವಾಧಿಕಾರಿಯಂತಿದೆ ಎಂದು ದಿನಂಪ್ರತಿ ಟೀಕೆ ಮಾಡುತ್ತಿದ್ದವು. ಈಗ ಬಿಜೆಪಿ ಹಾಗೂ ನರೇಂದ್ರ ಮೋದಿ ಅಭಿಮಾನಿಗಳು ಈ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಇದರಲ್ಲಿ ಲೀಡರ್ ಹಾಗೂ ಡಿಕ್ಟೇಟರ್ ನಡುವಿನ ವ್ಯತ್ಯಾಸ ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದು ಬರೆದಿದ್ದಾರೆ.
ನಮೋಗೆ ಬಿಸಿಸಿಐ ಜರ್ಸಿ ಗಿಫ್ಟ್ ಓಕೆ, ನಂ.1 ಯಾಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್
ಪ್ರಧಾನಿ ನರೇಂದ್ರ ಮೋದಿಯ ಈ ನಡೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಟ್ರೋಫಿ ಹಿಡಿದುಕೊಂಡಿದ್ದರೇ, ಪ್ರಧಾನಿ ಮೋದಿ ಅವರ ಕೈಗಳನ್ನು ಹಿಡಿದುಕೊಂಡಿದ್ದಾರೆ. ಎಂತಹ ನಾಯಕ ಎಂದು ನೆಟ್ಟಿಗರೊಬ್ಬರು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಪ್ರಧಾನಿ ನಿವಾಸಕ್ಕೆ ಭೇಟಿ ನೀಡಿ ಔತಣಕೂಟದಲ್ಲಿ ಭಾಗವಹಿಸಿದ ಬಳಿಕ ಟೀಂ ಇಂಡಿಯಾ ಆಟಗಾರರು, ಮುಂಬೈನತ್ತ ಪ್ರಯಾಣ ಬೆಳೆಸಿದ್ದಾರೆ. ಇಂದು ಸಂಜೆ 5 ಗಂಟೆಯಿಂದ ತೆರೆದ ವಾಹನದಲ್ಲಿ ನಾರಿಮನ್ ಪಾಯಿಂಟ್‌ನಿಂದ ಸುಮಾರು 2 ಕಿ. ಮೀ. ದೂರ ಇರುವ ವಾಂಖೇಡೆ ಕ್ರೀಡಾಂಗಣದವರೆಗೆ ಆಟಗಾರರು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಿದ್ದಾರೆ.
ಪ್ರಧಾನಿ ಮೋದಿ ಮೀಟ್ ಮಾಡಿದ ಟೀಂ ಇಂಡಿಯಾ, ಮುಂಬೈಗೆ ಮುಂದಿನ ಪಯಣ!
2 ಗಂಟೆ ಗಳ ಕಾಲ ಮೆರವಣಿಗೆ ನಡೆಯುವ ನಿರೀಕ್ಷೆಯಿದ್ದು, ಬಳಿಕ 7 ಗಂಟೆಗೆ ಕ್ರೀಡಾಂಗಣದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಬಿಸಿಸಿಐ ಘೋಷಿಸಿರುವ 125 ಕೋಟಿ ರು. ನಗದು ಬಹುಮಾನವನ್ನೂ ಇದೇ ವೇಳೆ ಹಸ್ತಾಂತರಿಸಲಾಗುತ್ತದೆ.