ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ಸಂಭ್ರಮಾಚರಣೆಯ ಕಾಲ್ತುಳಿತ ದುರಂತದ ಹಿನ್ನೆಲೆಯಲ್ಲಿ, ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಬಿಸಿಸಿಐ ಸಮಗ್ರ ಮಾರ್ಗಸೂಚಿಗಳನ್ನು ರೂಪಿಸಲು ಸಮಿತಿ ರಚಿಸಿದೆ. ಈ ಸಮಿತಿಯು 15 ದಿನಗಳಲ್ಲಿ ಮಾರ್ಗಸೂಚಿಗಳನ್ನು ಸಿದ್ಧಪಡಿಸಿ ಸಲ್ಲಿಸಲಿದೆ.
ನವದೆಹಲಿ: ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಘಟನೆಯಿಂದ ಎಚ್ಚೆತ್ತಿರುವ ಬಿಸಿಸಿಐ, ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟುವ ಉದ್ದೇಶದಿಂದ ಸಮಗ್ರ ಮಾರ್ಗಸೂಚಿಗಳನ್ನು ರೂಪಿಸಲು ಸಮಿತಿಯೊಂದನ್ನು ರಚಿಸಿದೆ. ಶನಿವಾರ ನಡೆದ ಅಪೆಕ್ಸ್ ಕೌನ್ಸಿಲ್‌ನಲ್ಲಿ ಸಮಿತಿ ರಚಿಸಲಾಯಿತು. ಬಿಸಿಸಿಐ ಕಾರ್ಯ ದರ್ಶಿ ದೇವಜಿತ್ ಸೈಕಿಯಾ, ಖಜಾಂಚಿ ಪ್ರಬ್‌ಜ್ ಸಿಂಗ್, ಉಪಾಧ್ಯಕ್ಷ ರಾಜೀವ್ ಶುಕ್ಲಾ ಈ ಸಮಿತಿಯಲ್ಲಿ ಇದ್ದಾರೆ. 15 ದಿನಗಳಲ್ಲಿ ಈ ಸಮಿತಿಯು ಮಾರ್ಗಸೂಚಿ ಸಿದ್ಧಪಡಿಸಿ ಬಿಸಿಸಿಐಗೆ ಸಲ್ಲಿಸಲಿದೆ.
ಅಹಮದಬಾದ್‌ನಲ್ಲಿ ನಡೆದ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ರೋಚಕವಾಗಿ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದರ ಬೆನ್ನಲ್ಲೇ ಮರುದಿನವೇ ಆರ್‌ಸಿಬಿ ಫ್ರಾಂಚೈಸಿಯು ಬೆಂಗಳೂರಿನಲ್ಲಿ ಸಂಭ್ರಮಾಚರಣೆಯನ್ನು ಹಮ್ಮಿಕೊಂಡಿತ್ತು. ಇನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರಿನ ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ಆರ್‌ಸಿಬಿ ಆಟಗಾರರನ್ನು ಸನ್ಮಾನಿಸಿದ್ದರು. ಇನ್ನು ಇದಾದ ಬಳಿಕ ರೋಡ್ ಷೋಗೆ ಆರ್‌ಸಿಬಿ ಫ್ರಾಂಚೈಸಿ ಮನವಿ ಮಾಡಿಕೊಂಡಿದ್ದರೂ, ರಾಜ್ಯ ಗೃಹ ಇಲಾಖೆ ಭದ್ರತೆ ಹಾಗೂ ಸಂಚಾರ ಒತ್ತಡ ನಿಭಾಯಿಸುವುದು ಕಷ್ಟ ಎಂದು ಮನಗಂಡು ಮನವಿಯನ್ನು ತಿರಸ್ಕರಿಸಿತು.ಇನ್ನು ಆರ್‌ಸಿಬಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಸಂಭ್ರಮಾಚರಣೆಗೆ ಮುಂದಾಗಿತ್ತು. ಆದರೆ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉಂಟಾದ ಕಾಲ್ತುಳಿತದಿಂದ 11 ಮಂದಿ ಕೊನೆಯುಸಿರೆಳೆದಿದ್ದರು. ಇದು ರಾಜ್ಯ ಸರ್ಕಾರಕ್ಕೆ ಹಾಗೂ ಬಿಸಿಸಿಐ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಇದರ ಜತೆಗೆ ವ್ಯಾಪಕ ಟೀಕೆಗೂ ಗುರಿಯಾಯಿತು.
ಇದರ ಬೆನ್ನಲ್ಲೇ ವಿಧಾನಸೌಧದ ಮುಂಬಾಗದಲ್ಲಿ ಸಂಭ್ರಮಾಚರಣೆಗೆ ಮುಖ್ಯಮಂತ್ರಿಗೆ ಸಲಹೆ ನೀಡಿದ್ದಾರೆ ಎನ್ನುವ ಆರೋಪದಡಿ ಸಿಎಂ ಆಪ್ತ ಕಾರ್ಯದರ್ಶಿ ಗೋವಿಂದರಾಜು, ಕೆಎಸ್‌ಸಿಎಯ ಪ್ರಮುಖ ಸಿಬ್ಬಂದಿಗಳ ತಲೆದಂಡವಾಗಿತ್ತು.
ಸ್ಥಳ ನಿಗದಿ: ಸಭೆಯಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಸರಣಿಗೆ ಸ್ಥಳ ನಿಗದಿಪಡಿಸಲಾಯಿತು. ಮೊದಲ ಏಕದಿನ 2026ರ ಜ.11ಕ್ಕೆ ಬರೋಡಾದಲ್ಲಿ ನಡೆಯಲಿದೆ. ರಾಜ್‌ಕೋಟ್ (ಜ.14), ಇಂದೋರ್ (ಜ.18)ನಲ್ಲಿ ಮತ್ತೆರಡು ಪಂದ್ಯಗಳು ನಿಗದಿಯಾಗಿವೆ.ಟಿ20 ಸರಣಿಯ 5 ಪಂದ್ಯ ಗಳಿಗೆ ನಾಗ್ಪುರ (ಜ.21), ರಾಯ್ಪರ (ಜ. 23), ಗುವಾಹಟಿ(ಜ.25), ವಿಶಾಖಪಟ್ಟಣ (ಜ.28), ತಿರುವನಂತಪುರಂ (ಜ.31) ಆತಿಥ್ಯ ವಹಿಸಲಿವೆ.
ದೇಸಿ ಕ್ರಿಕೆಟ್: 2025-26ರ ದೇಸಿ ಕ್ರಿಕೆಟ್‌ನ ಮೊದಲ ಟೂರ್ನಿಯಾಗಿ ದುಲೀಪ್ ಟ್ರೋಫಿಯು ಈ ವರ್ಷ ಆ.28ಕ್ಕೆ ಆರಂಭಗೊಳ್ಳಲಿದೆ. ಟೂರ್ನಿ ಸೆಪ್ಟೆಂಬರ್ 15ಕ್ಕೆ ಕೊನೆಗೊಳ್ಳಲಿದೆ. ಇರಾನಿ ಕಪ್ ಅಕ್ಟೋಬರ್ 1ರಿಂದ 5ರ ವರೆಗೆ ನಡೆಯಲಿದೆ. ರಣಜಿ ಟ್ರೋಫಿಯ ಮೊದಲ ಹಂತ ಅಕ್ಟೋಬರ್ 15ರಿಂದ ನವೆಂಬರ್ 19ರ ವರೆಗೆ, 2ನೇ ಹಂತ 2026ರ ಜನವರಿ 22ರಿಂದ ಫೆಬ್ರವರಿ 1ರ ವರೆಗೆ ನಡೆಯಲಿದೆ. ನಾಕೌಟ್ ಪಂದ್ಯಗಳು ಫೆ.6ರಿಂದ 28ರ ವರೆಗೆ ನಿಗದಿಯಾಗಿದೆ. ಮುಫ್ಲಾಕ್ ಅಲಿ 2025ರ ನ.26ರಿಂದ, ವಿಜಯ್ ಹಜಾರೆ ಡಿ.24ರಿಂದ ಆರಂಭಗೊಳ್ಳಲಿವೆ.
ಐಪಿಎಲ್ ಫೈನಲ್: ಟೀವಿಯಲ್ಲಿ 16.9 ಕೋಟಿ ಜನರಿಂದ ವೀಕ್ಷಣೆ!
ನವದೆಹಲಿ: 18ನೇ ಆವೃತ್ತಿಯ ಐಪಿಎಲ್‌ನ ಆರ್‌ಸಿಬಿ ಮತ್ತು ಪಂಜಾಬ್ ನಡುವಿನ ಫೈನಲ್ ಪಂದ್ಯ ವೀಕ್ಷಣೆಯಲ್ಲಿ ದಾಖಲೆ ಬರೆದಿದೆ. ಭಾರತದಲ್ಲಿ ಬರೋಬ್ಬರಿ 16.9 ಕೋಟಿ ಜನರು ಟೀವಿಯಲ್ಲಿ ಪಂದ್ಯ ವೀಕ್ಷಿಸಿದ್ದಾರೆ. ಇದು 2021ರ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯದ ಸಂಖ್ಯೆಯನ್ನೂ ಮೀರಿಸಿದೆ. ಬಾರ್ಕ್ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ, ಜೂನ್ 3ರಂದು ಫೈನಲ್ ಪಂದ್ಯವನ್ನು 16.9 ಕೋಟಿ ಜನರು ದೂರದರ್ಶನದಲ್ಲಿ ವೀಕ್ಷಣೆ ಮಾಡಿದ್ದಾರೆ. ಒಟ್ಟು 1.5 ಕೋಟಿ ನಿಮಿಷ ವೀಕ್ಷಣೆ ಅವಧಿಯನ್ನು ಹೊಂದಿದ್ದು, ಇದು ಕೂಡ ದಾಖಲೆ.
