Asianet Suvarna News Asianet Suvarna News

BCCI ಅಧ್ಯಕ್ಷ ಸ್ಥಾನಕ್ಕೆ ರೋಜರ್‌ ಬಿನ್ನಿ ನಾಮಪತ್ರ, ಧುಮಲ್‌ ಐಪಿಎಲ್‌ ಹೊಸ ಚೇರ್ಮನ್‌?

ಅಕ್ಟೋಬರ್‌ 18 ರಂದು ನಡೆಯಲಿರುವ ಬಿಸಿಸಿಐ ಚುನಾವಣೆಯಲ್ಲಿ ಕರ್ನಾಟಕದ ಮಾಜಿ ಆಟಗಾರ, 1983 ವಿಶ್ವಕಪ್‌ ವಿಜೇತ ತಂಡದ ಆಟಗಾರ ರೋಜರ್‌ ಬಿನ್ನಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ಬ್ರಿಜೇಶ್‌ ಪಟೇಲ್‌ ಐಪಿಎಲ್‌ ಅಧ್ಯಕ್ಷ ಸ್ಥಾನ ಮುಕ್ತಾಯಗೊಳ್ಳಲಿದ್ದು, ಹಾಲಿ ಬಿಸಿಸಿಐ ಖಜಾಂಚಿ ಅರುಣ್‌ ಸಿಂಗ್‌ ಧುಮಲ್‌ ಹೊಸ ಐಪಿಎಲ್‌ ಚೇರ್ಮನ್‌ ಆಗುವ ಸಾಧ್ಯತೆ ಇದೆ.

BCCI ELECTIONS Roger Binny to file papers for President post Arun Singh Dhumal tipped to be new IPL chairman san
Author
First Published Oct 11, 2022, 4:24 PM IST

ಮುಂಬೈ (ಅ.11): ಮುಂಬರುವ ಬಿಸಿಸಿಐ ಚುನಾವಣೆಗೆ ವೇದಿಕೆ ಸಿದ್ದವಾಗಿದೆ. ಅಕ್ಟೋಬರ್‌ 18ಕ್ಕೆ ಬಿಸಿಸಿಐ ಚುನಾವಣೆ ನಿಗದಿಯಾಗಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಟೀಮ್‌ ಇಂಡಿಯಾ ಮಾಜಿ ಆಲ್ರೌಂಡರ್‌ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ರೋಜರ್‌ ಬಿನ್ನಿ ಮುಂದಿನ ಬಿಸಿಸಿಐ ಅಧ್ಯಕ್ಷರಾಗುವ ಸಾಧ್ಯತೆ ಇದೆ. ಮಂಗಳವವಾರ ಅವರು ಅಧ್ಯಕ್ಷ ಪದವಿಗೆ ನಾಮಪತ್ರ ಸಲ್ಲಿಸಿದ್ದಾರೆ. ಸೌರವ್‌ ಗಂಗೂಲಿ ಸ್ಥಾನಕ್ಕೆ ರೋಜರ್‌ ಬಿನ್ನಿ ಬರೋದು ಬಹುತೇಕ ಖಚಿತವಾಗಿದ್ದರೆ, ಕಾರ್ಯದರ್ಶಿಯಾಗಿ ಜಯ್‌ ಶಾ ಬಹುತೇಕ ಮುಂದುವರಿಯಲಿದ್ದಾರೆ. ಇನ್ನು ಖಜಾಂಚಿಯಾಗಿದ್ದ ಅರುಣ್‌ ಸಿಂಗ್‌ ಧುಮಲ್‌, ಐಪಿಎಲ್‌ನ ನೂತನ ಚೇರ್ಮನ್‌ ಆಗುವ ಸಾಧ್ಯತೆ ಇದೆ. ಪ್ರಸ್ತುತ ಕರ್ನಾಟಕದ ಬ್ರಿಜೇಶ್‌ ಪಟೇಲ್‌ ಐಪಿಎಲ್‌ ಚೇರ್ಮನ್‌ ಆಗಿದ್ದಾರೆ. ಇನ್ನು ಬಿಸಿಸಿಐ ಉನ್ನತ ಸ್ಥಾನದಲ್ಲಿ ಮಹತ್ತರ ಬದಲಾವಣೆ ಆಗಲಿದ್ದು, ಮುಂಬೈನಲ್ಲಿ ಬಿಜೆಪಿಯ ಪ್ರಭಾವಿ ನಾಯಕ ಆಶಿಶ್‌ ಶೀಲರ್‌, ಖಜಾಂಚಿ ಸ್ಥಾನಕ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ. ಪ್ರಸ್ತುತ ಖಜಾಂಚಿ ಅರುಣ್‌ ಸಿಂಗ್‌ ಧುಮಲ್‌ ಐಪಿಎಲ್‌ ಚೇರ್ಮನ್‌ ಆಗುವ ಹಾದಿಯಲ್ಲಿದ್ದರೆ, ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ರಾಜೀವ್‌ ಶುಕ್ಲಾ ಉಪಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಇನ್ನು ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್‌ನ ದೇವಜಿತ್‌ ಸೈಕೀಯಾ ನೂತನ ಜಂಟಿ ಕಾರ್ಯದರ್ಶಿಯಾಗಲಿದ್ದಾರೆ. ಕೇರಳದ ಜಯೇಶ್‌ ಜಾರ್ಜ್‌ ಸ್ಥಾನವನ್ನು ಅವರು ತುಂಬಲಿದ್ದಾರೆ.

ಐಪಿಎಲ್‌ ಅಧ್ಯಕ್ಷ ಸ್ಥಾನಕ್ಕೆ ವಯೋಮಿತಿ ಇದೆ. 70 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು ಅಧ್ಯಕ್ಷರಾಗಿ ಉಳಿಯುವಂತಿಲ್ಲ.ಮುಂದಿನ ನವೆಂಬರ್‌ನಲ್ಲಿ 70ನೇ ವರ್ಷಕ್ಕೆ ಬ್ರಿಜೇಶ್‌ ಪಟೇಲ್‌ (Brijesh Patel) ಕಾಲಿಡಲಿದ್ದಾರೆ.  ಆ ಕಾರಣದಿಂದಾಗಿ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದು ಅನಿವಾರ್ಯವಾಗುದೆ. ಇನ್ನು ಬ್ರಿಜೇಶ್‌ ಪಟೇಲ್‌ ಸ್ಥಾನದ ಮೇಲೆ ಉತ್ತರ ಪ್ರದೇಶ ಕ್ರಿಕೆಟ್‌ ಅಸೋಸಿಯೇಷನ್‌ನ ರಾಜೀವ್‌ ಶುಕ್ಲಾ (Rajeev Shukla)ಕಣ್ಣಿಟ್ಟಿದ್ದರು. ಆದರೆ, ಬಿಸಿಸಿಐ ಆಡಳಿತದಲ್ಲಿ ಪ್ರಭಾವ ಬೀರಿರುವ ಬಿಜೆಪಿ, ಹಿಮಾಚಲ ಪ್ರದೇಶ ಮಾಜಿ ಸಿಎಂ ಪ್ರೇಮ್‌ ಕುಮಾರ್‌ ಧುಮುಲ್‌ ಅವರ ಪುತ್ರ ಹಾಗೂ ಅನುರಾಗ್‌ ಠಾಕೂರ್‌ ಅವರ ಸಹೋದರ ಅರುಣ್‌ ಸಿಂಗ್‌ ಧುಮಲ್‌ ಅವರನ್ನು ಐಪಿಎಲ್‌ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದೆ.

ಸಂಸದರು ಹಾಗೂ ಶಾಸಕರು ರಾಜ್ಯ ಕ್ರಿಕೆಟ್‌ ಸಂಸ್ಥೆ (State Cricket Association) ಹಾಗೂ ಬಿಸಿಸಿಐ (BCCI) ಆಡಳಿತದ ಭಾಗವಾಗಬಹುದು ಎಂದು ಸುಪ್ರೀಂ ಕೋರ್ಟ್‌ (Supreme Court) ಅನುಮತಿ ನೀಡಿದ ಬಳಿಕ, ಮುಂಬೈನ ಪ್ರಭಾವಿ ನಾಯಕ ಆಶಿಶ್‌ ಶೀಲರ್‌ (Ashish Shelar) ಖಜಾಂಚಿ (Treasurer) ಸ್ಥಾನಕ್ಕೆ ಸ್ಪರ್ಧೆ ಮಾಡಲಿದ್ದಾರೆ. ಇದಕ್ಕೂ ಮುನ್ನ ಶೀಲರ್‌ ತಾವು ಮುಂಬೈ ಕ್ರಿಕೆಟ್‌ ಸಂಸ್ಥೆಯ ಆಡಳಿತದಲ್ಲಿಯೇ ಇರುವುದಾಗಿ ಹೇಳಿದ್ದರೂ ಕೊನೆ ಕ್ಷಣದಲ್ಲಿ ನಿರ್ಧಾರ ಬದಲಾಯಿಸಿದ್ದಾರೆ. ಸೋಮವಾರ ಎಂಸಿಎ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರವನ್ನೂ ಸಲ್ಲಿಸಿದ್ದ ಶೀಲರ್‌, ಈಗ ಬಿಸಿಸಿಐ ಆಡಳಿತದತ್ತ ಮುಖ ಮಾಡಿದ್ದಾರೆ.

BCCI ಅಧ್ಯಕ್ಷ ಸೌರವ್ ಗಂಗೂಲಿ ಸ್ಥಾನಕ್ಕೆ ಏಕದಿನ ವಿಶ್ವಕಪ್ ಹೀರೋ ಆಯ್ಕೆ..?

ಬಿಸಿಸಿಐನ ಆಡಳಿತದ ಯಾವುದೇ ಹಂತದಲ್ಲಿ ಹಾಲಿ ಬಿಸಿಸಿಐ ಅಧ್ಯಕ್ಷ ಹಾಗೂ ಟೀಮ್‌ ಇಂಡಿಯಾ ಮಾಜಿ ನಾಯಕ ಸೌರವ್‌ ಗಂಗೂಲಿ (Sourav Ganguly ) ಇಲ್ಲದೇ ಇರುವುದು ಎಲ್ಲರ ಹುಬ್ಬೇರಿಸಿದೆ. ಅವರು ಅಧ್ಯಕ್ಷರಾಗಿ ಮುಂದುವರಿಯುವುದಿಲ್ಲ ಎನ್ನುವುದು ಈಗಾಗಲೇ ತೀರ್ಮಾನವಾಗಿತ್ತು. ಇತ್ತೀಚಿನ ದೆಹಲಿ ಸಭೆಯಲ್ಲಿ ಅವರ ಕಾರ್ಯನಿರ್ವಹಣೆಯ ಬಗ್ಗೆ ಟೀಕೆಗೊಳಗಾದ ಬಳಿಕ ಬಿಸಿಸಿಐ ಅಧ್ಯಕ್ಷರಾಗಿ ಅವರು ಮುಂದುವರಿಯುವುದು ಅನುಮಾನ ಎನ್ನಲಾಗಿತ್ತು. ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಗೆ ಅವರು ನಾಮನಿರ್ದೇಶನಗೊಳ್ಳುತ್ತಾರೆಯೇ ಎನ್ನುವುದು ಕಾದು ನೋಡಬೇಕಿದೆ. ಆದರೆ, ಈ ಹಂತದಲ್ಲಿ ಅವರು ಐಸಿಸಿಸಿ ಅಧ್ಯಕ್ಷರಾಗುವುದು ಅನುಮಾನ ಎನ್ನಲಾಗಿದೆ.

BCCI ಅಧ್ಯಕ್ಷ ಹುದ್ದೆಗೆ ಸೌರವ್ ಗಂಗೂಲಿ ಸ್ಪರ್ಧೆ ಇಲ್ಲ; ದಾದಾ ಯುಗಾಂತ್ಯ..?

ಇನ್ನು ಜಗಮೋಹನ್‌ ದಾಲ್ಮಿಯಾ ಅವರ ಪುತ್ರ ಅವಿಶೇಕ್‌ ದಾಲ್ಮಿಯಾ, ಐಪಿಎಲ್‌ ಆಡಳಿತ ಮಂಡಳಿಯ ಸದಸ್ಯರಾಗಿ ಇರಲಿದ್ದಾರೆ. ಕಳೆದ ಬಿಸಿಸಿಐನಲ್ಲಿ ಐಪಿಎಲ್ ಜಿಸಿಯಲ್ಲಿದ್ದ ಮಾಮನ್ ಮಜುಂದಾರ್ ಅಪೆಕ್ಸ್ ಕೌನ್ಸಿಲ್‌ಗೆ ಬರಲಿದ್ದಾರೆ. ಈಶಾನ್ಯ ರಾಜ್ಯ ಮಿಜೋರಾಂನ ಪ್ರತಿನಿಧಿಯು ಅಪೆಕ್ಸ್ ಕೌನ್ಸಿಲ್‌ಗೆ ಚುನಾಯಿತ ಸದಸ್ಯನಾಗಲಿದ್ದಾರೆ.

Follow Us:
Download App:
  • android
  • ios