BCCI ಅಧ್ಯಕ್ಷ ಸೌರವ್ ಗಂಗೂಲಿ ಸ್ಥಾನಕ್ಕೆ ಏಕದಿನ ವಿಶ್ವಕಪ್ ಹೀರೋ ಆಯ್ಕೆ..?
* ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಎರಡನೇ ಬಾರಿ ಸ್ಪರ್ಧಿಸಲು ಸೌರವ್ ಗಂಗೂಲಿ ನಿರಾಸಕ್ತಿ
* ನೂತನ ಅಧ್ಯಕ್ಷರಾಗುವ ರೇಸ್‌ನಲ್ಲಿ ಕರ್ನಾಟಕ ಮೂಲದ ರೋಜರ್ ಬಿನ್ನಿ
* ರೋಜರ್ ಬಿನ್ನಿ 1983ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯ
ನವದೆಹಲಿ(ಅ.08): ಮುಂಬರುವ ಅಕ್ಟೋಬರ್ 18ರಂದು ನಡೆಯಲಿರುವ ಬಿಸಿಸಿಐ ಚುನಾವಣೆಯಲ್ಲಿ ಅಧ್ಯಕ್ಷ ಹುದ್ದೆಗೆ ಮತ್ತೊಮ್ಮೆ ಸ್ಪರ್ಧಿಸದಿರಲು ಹಾಲಿ ಅಧ್ಯಕ್ಷ ಸೌರವ್ ಗಂಗೂಲಿ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ 1983ರ ಏಕದಿನ ವಿಶ್ವಕಪ್ ಹೀರೋ, ಕರ್ನಾಟಕ ಮೂಲದ ರೋಜರ್ ಬಿನ್ನಿ, ಬಿಸಿಸಿಐ ನೂತನ ಅಧ್ಯಕ್ಷರಾಗಿ ನೇಮಕವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ ಬಿಸಿಸಿಐನ ನೂತನ ಅಧ್ಯಕ್ಷರಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಹಾಲಿ ಅಧ್ಯಕ್ಷ ರೋಜರ್ ಬಿನ್ನಿ ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ರೋಜರ್ ಬಿನ್ನಿ, ಈ ಮೊದಲು ರೋಜರ್ ಬಿನ್ನಿ ಬಿಸಿಸಿಐ ಆಯ್ಕೆ ಸಮಿತಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು. ಇದೀಗ ಬಿಸಿಸಿಐ ನೂತನ ಅಧ್ಯಕ್ಷರಾಗುವವರ ಸಾಲಿನಲ್ಲಿ ರೋಜರ್ ಬಿನ್ನಿ ಮುಂಚೂಣಿಯಲ್ಲಿದ್ದಾರೆ ಎಂದು ವರದಿಯಾಗಿದೆ. ಇನ್ನು ಬಿಸಿಸಿಐ ಕಾರ್ಯದರ್ಶಿಯಾಗಿರುವ ಜಯ್ ಶಾ, ಅದೇ ಸ್ಥಾನದಲ್ಲಿಯೇ ಮುಂದುವರೆಯಲಿದ್ದಾರೆ ಎನ್ನಲಾಗುತ್ತಿದೆ.
ಕೆಲವು ಮೂಲಗಳ ಪ್ರಕಾರ ಸೌರವ್ ಗಂಗೂಲಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ನಿರ್ದೇಶಕ ಸ್ಥಾನಕ್ಕೆ ನಾಮನಿರ್ದೇಶನ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 2019ರಲ್ಲಿ ಬಿಸಿಸಿಐ ಆಡಳಿತಕ್ಕೆ ಪಾದಾರ್ಪಣೆ ಮಾಡಿದ್ದ ಸೌರವ್ ಗಂಗೂಲಿ ಹಾಗೂ ಜಯ್ ಶಾ ಅವರ ಅಧಿಕಾರ ಅವಧಿ ಅಕ್ಟೋಬರ್ 23ಕ್ಕೆ ಅಂತ್ಯಗೊಳ್ಳಬೇಕಿತ್ತು. ಇದೀಗ ಇಬ್ಬರೂ ಇನ್ನೂ 3 ವರ್ಷ ಹುದ್ದೆಯಲ್ಲಿ ಮುಂದುವರೆಯುವ ಅವಕಾಶವಿತ್ತು.
BCCI ಅಧ್ಯಕ್ಷ ಹುದ್ದೆಗೆ ಸೌರವ್ ಗಂಗೂಲಿ ಸ್ಪರ್ಧೆ ಇಲ್ಲ; ದಾದಾ ಯುಗಾಂತ್ಯ..?
ಅಕ್ಟೋಬರ್ 18ರಂದು ನಡೆಯಲಿರುವ ಬಿಸಿಸಿಐ ಚುನಾವಣೆಯಲ್ಲಿ, ಒಟ್ಟು 38 ಕ್ರಿಕೆಟ್ ಸಂಸ್ಥೆಗಳ ಪ್ರತಿನಿಧಿಗಳು ಮತ ಚಲಾಯಿಸಲಿದ್ದು, ಅಧ್ಯಕ್ಷ, ಕಾರ‍್ಯದರ್ಶಿ, ಉಪಾಧ್ಯಕ್ಷ, ಜಂಟಿ ಕಾರ‍್ಯದರ್ಶಿ ಹಾಗೂ ಖಜಾಂಚಿ ಹುದ್ದೆಗೆ ಆಯ್ಕೆ ನಡೆಯಲಿದೆ. ಬಿಸಿಸಿಐ ಚುನಾವಣೆಗೆ ಸ್ಪರ್ಧಿಸಲು ಅಕ್ಟೋಬರ್ 11 ಮತ್ತು 12ರಂದು ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಅಕ್ಟೋಬರ್ 13ರಂದು ನಾಮಪತ್ರಗಳನ್ನು ಪರಿಶೀಲಿಸಲಾಗುವುದು. ನಾಮಪತ್ರ ಹಿಂಪಡೆಯಲು ಅಕ್ಟೋಬರ್ 14 ಕೊನೆಯ ದಿನಾಂಕವಾಗಿದೆ. ಅಕ್ಟೋಬರ್ 18ರಂದು ಬಿಸಿಸಿಐ ಚುನಾವಣೆ ನಡೆಯಲಿದೆ.