ಕೋಚಿಂಗ್‌ನಲ್ಲಿ ಆಸಕ್ತಿ ಇರುವ ಮಾಜಿ ಕ್ರಿಕೆಟಿಗರಿಗೆ ಇದೇ ಮೊದಲ ಬಾರಿಗೆ ಬಿಸಿಸಿಐ ಎನ್‌ಸಿಎ ಲೆವೆಲ್‌-2 ಕೋಚಿಂಗ್‌ ತರಬೇತಿಯನ್ನು ಆಯೋಜಿಸಿತ್ತು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಮಾ.24): 75ಕ್ಕೂ ಹೆಚ್ಚು ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ, ಕೋಚಿಂಗ್‌ನಲ್ಲಿ ಆಸಕ್ತಿ ಇರುವ ಮಾಜಿ ಕ್ರಿಕೆಟಿಗರಿಗೆ ಇದೇ ಮೊದಲ ಬಾರಿಗೆ ಲೆವೆಲ್‌-2 ಕೋಚಿಂಗ್‌ ತರಬೇತಿಯನ್ನು ಆಯೋಜಿಸಿತ್ತು. ಈ ಕೋರ್ಸ್‌ನಲ್ಲಿ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ ರಾಬಿನ್‌ ಉತ್ತಪ್ಪ, ವಾಸಿಂ ಜಾಫರ್‌, ದೇಬಾಶಿಶ್‌ ಮೊಹಾಂತಿ ಸೇರಿದಂತೆ ಅನೇಕ ಕ್ರಿಕೆಟಿಗರು ಪಾಲ್ಗೊಂಡಿದ್ದರು.

ಮೊದಲ ಹಂತದ ಕೋರ್ಸ್‌ ಅನ್ನು 4 ದಿನಗಳ ಕಾಲ ಆನ್‌ಲೈನ್‌ನಲ್ಲಿ ನಡೆಸಿದ್ದ ಬಿಸಿಸಿಐ, 2ನೇ ಹಂತವನ್ನು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ)ನಲ್ಲಿ ಮಾ.16ರಿಂದ 19ರ ವರೆಗೂ ನಡೆಸಿತ್ತು. ಈ ಕಾರ್ಯಕ್ರಮದಲ್ಲಿ ಭಾರತದ ಮಾಜಿ ಆಟಗಾರರಾದ ಹೃಷಿಕೇಶ್‌ ಕಾನಿಟ್ಕರ್‌, ಅಭಿನವ್‌ ಮುಕುಂದ್‌, ರಮೇಶ್‌ ಪೊವಾರ್‌, ಸರಣ್‌ದೀಪ್‌ ಸಿಂಗ್‌, ವಾಸಿಂ ಜಾಫರ್‌, ಎಸ್‌.ಅರವಿಂದ್‌, ಸ್ಟುವರ್ಟ್‌ ಬಿನ್ನಿ, ಶಿವಸುಂದರ್‌ ದಾಸ್‌ ಪಾಲ್ಗೊಂಡಿದ್ದರು. 4 ದಿನಗಳ ತರಬೇತಿ ವೇಳೆ ಪ್ರತಿಭಾನ್ವೇಷಣೆ, ವೇಗದ ಬೌಲಿಂಗ್‌, ಸ್ಪಿನ್‌, ಬ್ಯಾಟಿಂಗ್‌, ವಿಕೆಟ್‌ ಕೀಪಿಂಗ್‌ಗೆ ಬಯೋ ಮೆಕ್ಯಾನಿಕ್ಸ್‌ನ ಸಹಾಯ ಹೇಗೆ, ವಿಡಿಯೋ ವಿಶ್ಲೇಷಣೆ ಸೇರಿ ವಿವಿಧ ಮಾಹಿತಿಯನ್ನು ತಿಳಿಸಲಾಯಿತು.

ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದ ಪ್ರಸಿದ್ಧ್ ಕೃಷ್ಣ, ಕೃನಾಲ್‌ ಪಾಂಡ್ಯ ಡೆಬ್ಯೂ

ಉನ್ನತ ಮಟ್ಟದಲ್ಲಿ ಕ್ರಿಕೆಟ್‌ ಆಡಿ ಅನುಭವವಿರುವವರು, ಉತ್ತಮ ಕೋಚ್‌ ಸಹ ಆಗಬಹುದು. ಅವರಿಗೆ ಕೋಚಿಂಗ್‌ ವೃತ್ತಿಜೀವನ ಕಲ್ಪಿಸಿಕೊಳ್ಳಲು ನೆರವಾಗಲು ಈ ಯೋಜನೆ ಪರಿಚಯಿಸಲಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿದ್ದಾರೆ.