ಬಿಸಿಸಿಐ ಪ್ರಧಾನ ಆಯ್ಕೆಗಾರ ಚೇತನ್‌ ಶರ್ಮಾ ಖಾಸಗಿ ವಾಹಿನಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಸಾಕಷ್ಟು ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ನೋವು ನಿವಾರಕ ಚುಚ್ಚು ಮದ್ದು ಪಡೆದು ಫಿಟ್‌ ಇಲ್ಲದಿದ್ದರೂ ತಂಡದಲ್ಲಿ ಆಡುತ್ತಿದ್ದಾರೆ. ಟೀಮ್‌ ಇಂಡಿಯಾದ ಒಳಜಗಳಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

ನವದೆಹಲಿ (ಫೆ. 15): ಭಾರತ ಕ್ರಿಕೆಟ್‌ ತಂಡದ ಪ್ರಧಾನ ಆಯ್ಕೆಗಾರ ಚೇತನ್‌ ಶರ್ಮಾ ರಾಷ್ಟ್ರೀಯ ಸುದ್ದಿ ವಾಹಿನಿ ‘ಝೀ ನ್ಯೂಸ್‌’ ನಡೆಸಿರುವ ರಹಸ್ಯ ಕಾರ್ಯಾಚರಣೆಯಲ್ಲಿ ಹಲವು ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ಇದು ಕ್ರಿಕೆಟ್‌ ಲೋಕದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಟೀಂ ಇಂಡಿಯಾದ ಕೆಲ ಆಟಗಾರರು ಫಿಟ್‌ ಇಲ್ಲದಿದ್ದರೂ ಹೇಗೆ ತಂಡಕ್ಕೆ ಆಯ್ಕೆಯಾಗುತ್ತಾರೆ, ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ನಡುವಿನ ಮನಸ್ತಾಪ, ಇಬ್ಬರ ಬಣಗಳ ನಡುವಿನ ಮೈಮನಸ್ಸು, ಗಂಗೂಲಿ ಹಾಗೂ ಕೊಹ್ಲಿ ನಡುವೆ ಏರ್ಪಟ್ಟಿದ್ದ ವಿವಾದ ಹೀಗೆ ಅನೇಕ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಕೆಲ ಆಟಗಾರರು ತಂಡದ ಆಯ್ಕೆ ವೇಳೆ ಫಿಟ್‌ ಇರುವುದಿಲ್ಲ. ಆದರೆ ತಂಡದಲ್ಲಿ ಸ್ಥಾನಕ್ಕಾಗಿ ಒತ್ತಾಯಿಸುತ್ತಾರೆ. ಪೂರ್ಣ ಫಿಟ್‌ ಇಲ್ಲದಿದ್ದರೂ ಶೇ.80ರಷ್ಟು ಫಿಟ್ನೆಸ್‌ ಇಟ್ಟುಕೊಂಡೇ ಆಡುತ್ತಾರೆ. ಇದು ಬಿಸಿಸಿಐಗೂ ಗೊತ್ತಿದೆ. ಆದರೆ ಏನೂ ಗೊತ್ತಿಲ್ಲದಂತೆ ಸುಮ್ಮನಿದೆ. ಆಟಗಾರರಿಗೆ ಯಾವ್ಯಾವ ಚುಚ್ಚು ಮದ್ದು ಡೋಪಿಂಗ್‌ ಪರೀಕ್ಷೆಯಲ್ಲಿ ಪತ್ತೆಯಾಗಲಿದೆ ಎಂದು ಗೊತ್ತಿದೆ. ಉದ್ದೀಪನ ಪರೀಕ್ಷೆಯ ಕಣ್ತಪ್ಪಿಸಿ, ಸಿಕ್ಕಿ ಬೀಳದಂತೆ ಖಾಸಗಿ ವೈದ್ಯರ ಬಳಿ ಚುಚ್ಚು ಮದ್ದುಗಳನ್ನು ಪಡೆಯುವವರೂ ಇದ್ದಾರೆ. ಜಸ್‌ಪ್ರೀತ್‌ ಬುಮ್ರಾಗೆ ಬಗ್ಗಲೂ ಆಗುತ್ತಿರಲಿಲ್ಲ. ಆದರೆ ಚುಚ್ಚು ಮದ್ದು ಕೊಡಿಸಿ ಅವರನ್ನು ಆತುರದಲ್ಲಿ ತಂಡಕ್ಕೆ ವಾಪಸ್‌ ಕರೆತರಲಾಯಿತು. ಈಗ ಅವರಿನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ಸ್ಪೋಟಕ ಮಾಹಿತಿಯನ್ನು ನೀಡಿದ್ದಾರೆ.

ಕಳಪೆ ಲಯದಲ್ಲಿರುವ, ಫಿಟ್‌ ಇಲ್ಲದ ಆಟಗಾರರು ತಂಡದಲ್ಲಿ ಉಳಿದುಕೊಳ್ಳಲು ಇಂಜೆಕ್ಷನ್‌ಗಳನ್ನು ಬಳಕೆ ಮಾಡುತ್ತಾರೆ ಎಂದು ಶರ್ಮಾ ರಹಸ್ಯ ಕಾರ್ಯಾಚರಣೆ ವೇಳೆ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ.

ತಂಡದಲ್ಲಿ ಎರಡು ಬಣಗಳಿವೆ: ಭಾರತ ತಂಡದಲ್ಲಿ ರೋಹಿತ್‌ (Rohit Sharma) ಹಾಗೂ ವಿರಾಟ್‌ರ (Virat Kohli) ಬಣಗಳಿವೆ. ಕೊಹ್ಲಿ ಹಾಗೂ ರೋಹಿತ್‌ ನಡುವೆ ವೈರತ್ವವಿಲ್ಲ ಆದರೆ ಸ್ವಪ್ರತಿಷ್ಠೆ ಖಂಡಿತ ಇದೆ. ಇಬ್ಬರೂ ದೊಡ್ಡ ಸಿನಿಮಾ ತಾರೆಯರಿದ್ದಂತೆ. ಒಬ್ಬರು ಅಮಿತಾಭ್‌ ಬಚ್ಚನ್‌ ಮತ್ತೊಬ್ಬರು ಧರ್ಮೇಂದ್ರ ಎಂದು ಚೇತನ್‌ ವಿವರಿಸಿದ್ದಾರೆ.

BCCI ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಚೇತನ್‌ ಶರ್ಮಾ ಪುನರಾಯ್ಕೆ..!

ಕೊಹ್ಲಿ ಕಂಡರೆ ಗಂಗೂಲಿಗೆ ಇಷ್ಟವಿರಲಿಲ್ಲ: ರೋಹಿತ್‌ ನಾಯಕರಾಗಲು ಬಿಸಿಸಿಐನ ಮಾಜಿ ಅಧ್ಯಕ್ಷ ಸೌರವ್‌ ಗಂಗೂಲಿ (Former BCCI president Sourav Ganguly) ಯಾವುದೇ ಸಹಾಯ ಮಾಡಲಿಲ್ಲ. ಆದರೆ ಅವರಿಗೆ ಕೊಹ್ಲಿ ಕಂಡರೆ ಯಾವತ್ತೂ ಇಷ್ಟವಿರಲಿಲ್ಲ. ಗಂಗೂಲಿಯಿಂದಾಗಿ ತಾವು ನಾಯಕತ್ವ ಕಳೆದುಕೊಂಡೆ ಎಂದು ಕೊಹ್ಲಿ ಭಾವಿಸಿದ್ದಾರೆ. ಆಯ್ಕೆ ಸಮಿತಿಯ ವಿಡಿಯೋ ಕಾನ್ಫರೆನ್ಸ್‌ನಲ್ಲಿ ನನ್ನನ್ನೂ ಸೇರಿ 9 ಮಂದಿ ಇದ್ದೆವು. ಕೊಹ್ಲಿ ನಾಯಕತ್ವ ಬಿಡುತ್ತೇನೆ ಎಂದು ಹೇಳಿದಾಗ ಗಂಗೂಲಿ ಮತ್ತೊಮ್ಮೆ ಯೋಚಿಸಿ ಎಂದು ಹೇಳಿರಬಹುದು. ಅದನ್ನು ಕೊಹ್ಲಿ ಸರಿಯಾಗಿ ಕೇಳಿಸಿಕೊಂಡಿಲ್ಲದೆ ಇರಬಹುದು. ಆದರೆ ಸುದ್ದಿಗೋಷ್ಠಿಯಲ್ಲಿ ತಮ್ಮನ್ನು ನಾಯಕತ್ವದಿಂದ ಕೈಬಿಡುವುದಾಗಿ ಕೇವಲ ಒಂದೂವರೆ ಗಂಟೆ ಮೊದಲು ತಿಳಿಸಲಾಯಿತು ಎಂದು ವಿರಾಟ್‌ ಹೇಳುವ ಅಗತ್ಯವಿರಲಿಲ್ಲ. ಗಂಗೂಲಿ ಮೇಲೆ ಸಿಟ್ಟಿನಿಂದ ಕೊಹ್ಲಿ ಹಾಗೆ ಮಾಡಿದರು ಎಂದು ಶರ್ಮಾ ಹೇಳಿದ್ದಾರೆ.

Ranji Trophy: ಹಾರ್ದಿಕ್‌ ಪಾಂಡ್ಯ ಏಕೆ ರಣಜಿ ಆಡುತ್ತಿಲ್ಲವೆಂದು ಗೊತ್ತಿಲ್ಲ: ಚೇತನ್‌ ಶರ್ಮಾ

ಟಿ20ಯಲ್ಲಿ ರೋಹಿತ್‌ ಆಟ ಮುಗಿಯಿತು: ರೋಹಿತ್‌ ಶರ್ಮಾ ಟಿ20 ತಂಡಕ್ಕೆ ಇನ್ನು ವಾಪಸ್‌ ಆಗುವುದಿಲ್ಲ. ಹಾರ್ದಿಕ್‌ ಪಾಂಡ್ಯ (Hardik Pandya) ನಾಯಕನಾಗಿ ನೇಮಕಗೊಳ್ಳಲಿದ್ದಾರೆ. ರೋಹಿತ್‌ ಹಾಗೂ ಹಾರ್ದಿಕ್‌ ನನ್ನ ಮೇಲೆ ಭಾರೀ ನಂಬಿಕೆ ಇಟ್ಟಿದ್ದಾರೆ. ಅವರಿಬ್ಬರೂ ನಾನು ಏನು ಹೇಳಿದರೂ ಹಿಂದೆ ಮುಂದೆ ವಿಚಾರಿಸದೆ ನಂಬುತ್ತಾರೆ. ಇಬ್ಬರೂ ನನ್ನ ಮನೆಗೆ ಆಗಾಗ ಭೇಟಿ ನೀಡುತ್ತಾರೆ. ಅದರಲ್ಲೂ ಹಾರ್ದಿಕ್‌ ಹೆಚ್ಚಾಗಿ ಬರುತ್ತಿರುತ್ತಾರೆ ಎಂದು ಚೇತನ್‌ ಶರ್ಮಾ ಹೇಳಿಕೊಂಡಿದ್ದಾರೆ.