ಬಾಂಗ್ಲಾದೇಶ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ 8 ರನ್‌ಗಳಿಂದ ಸೋಲು ಕಂಡಿದೆ. ಇದರೊಂದಿಗೆ ಬಾಂಗ್ಲಾದೇಶ ಚೊಚ್ಚಲ ಟಿ20 ಸರಣಿ ಜಯ ಸಾಧಿಸಿದೆ. ಝಕರ್ ಅಲಿ ಅವರ ಅರ್ಧಶತಕ ಪಂದ್ಯದ ಗಮನ ಸೆಳೆಯಿತು.
ಢಾಕಾ: ಸಲ್ಮಾನ್ ಅಘಾ ನೇತೃತ್ವದ ಪಾಕಿಸ್ತಾನ ತಂಡವು ಎರಡನೇ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ ಎದುರು 8 ರನ್ ಅಂತರದ ರೋಚಕ ಸೋಲುಭವಿಸಿದೆ. ಇದರೊಂದಿಗೆ ಲಿಟನ್ ದಾಸ್ ನೇತೃತ್ವದ ಬಾಂಗ್ಲಾದೇಶ ತಂಡವು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಪಾಕಿಸ್ತಾನ ಎದುರು ಚೊಚ್ಚಲ ಟಿ20 ಸರಣಿ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಬಾಂಗ್ಲಾದಂತಹ ಸಣ್ಣ ಕ್ರಿಕೆಟ್ ರಾಷ್ಟ್ರದೆದುರಿನ ಸರಣಿ ಪಾಕಿಸ್ತಾನ ಕ್ರಿಕೆಟ್ ತಂಡ ಎಂತಹ ದಯನೀಯ ಸ್ಥಿತಿಯಲ್ಲಿದೆ ಎನ್ನುವುದು ಜಗತ್ತಿನ ಮುಂದೆ ಅನಾವರಣವಾದಂತೆ ಆಗಿದೆ.
ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡವು ನಿಗದಿತ 20 ಓವರ್‌ಗಳಲ್ಲಿ 133 ರನ್ ಕಲೆಹಾಕಿತು. ಬಾಂಗ್ಲಾದೇಶ ಪರ ಝಕರ್ ಅಲಿ 48 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಹಾಗೂ 5 ಸಿಕ್ಸರ್ ಸಹಿತ ಆಕರ್ಷಕ 55 ರನ್ ಸಿಡಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಮೆಹದಿ ಹಸನ್ ಅಮೂಲ್ಯ 33 ರನ್ ಸಿಡಿಸಿದರು. ಕೇವಲ 28 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಾಧಾರಣ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಬಾಂಗ್ಲಾದೇಶ ತಂಡಕ್ಕೆ ಝಕರ್ ಅಲಿ ಹಾಗೂ ಮೆಹದಿ ಹಸನ್ ಆಕರ್ಷಕ 53 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.
ಇನ್ನು ಪಾಕಿಸ್ತಾನ ಪರ ಸಲ್ಮಾನ್ ಮಿರ್ಝಾ, ಅಹ್ಮದ್ ದನಿಯಾಲ್ ಹಾಗೂ ಅಬ್ಬಾಸ್ ಅಫ್ರಿದಿ ತಲಾ ಎರಡು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರೆ, ಫಾಹೀಮ್ ಅಶ್ರಫ್ ಹಾಗೈ ಮೊಹಮದ್ ನವಾಜ್ ತಲಾ ಒಂದೊಂದು ವಿಕೆಟ್ ಪಡೆದರು.
ಇನ್ನು ಸಾಧಾರಣ ಗುರಿ ಬೆನ್ನತಿದ ಪಾಕಿಸ್ತಾನ ತಂಡವು ಆರಂಭದಲ್ಲೇ ಸೈಬ್ ಆಯೂಬ್ ರನೌಟ್ ಬಿಗ್ ಶಾಕ್ ನೀಡಿತು. ಇದರ ಬೆನ್ನಲ್ಲೇ ಮೊಹಮ್ಮದ್ ಹ್ಯಾರಿಸ್‌ಗೆ ಶೌರಿಫುಲ್ ಇಸ್ಲಾಂ ಪೆವಿಲಿಯನ್ ಹಾದಿ ತೋರಿಸಿದರು. ಫಖರ್ ಜಮಾನ್ 8 ರನ್‌ಗೆ ಇಸ್ಲಾಂಗೆ ಎರಡನೇ ಬಲಿಯಾದರು. ಇನ್ನು ಹಸನ್ ನವಾಜ್ ಹಾಗೂ ಮೊಹಮದ್ ನವಾಜ್ ಈ ಇಬ್ಬರು ಖಾತೆ ತೆರೆಯುವ ಮುನ್ನವೇ ತಂಝೀಮ್ ಹಸನ್ ಸಕೀಬ್‌ಗೆ ವಿಕೆಟ್ ಒಪ್ಪಿಸಿದರು. ಪರಿಣಾಮ ಪಾಕಿಸ್ತಾನ ತಂಡವು 30 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ 6 ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು>
ಹೀನಾಯವಾಗಿ ಸೋಲುವ ಭೀತಿಗೆ ಒಳಗಾಗಿದ್ದ ಪಾಕಿಸ್ತಾನ ತಂಡಕ್ಕೆ ಕೊನೆಯಲ್ಲಿ ಫಾಹಿಮ್ ಅಶ್ರಫ್ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ತಮ್ಮ ತಂಡದ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದರು. ಫಾಹಿಮ್ ಅಶ್ರಫ್ ಕೇವಲ 32 ಎಸೆತಗಳನ್ನು ಎದುರಿಸಿ 4 ಆಕರ್ಷಕ ಸಿಕ್ಸರ್ ಹಾಗೂ ಒಂದು ಬೌಂಡರಿ ಸಹಿತ 51 ರನ್ ಸಿಡಿಸಿದರು. ಇನ್ನು ಇವರಿಗೆ ಅಬ್ಬಾಸ್ ಅಫ್ರಿದಿ ಉತ್ತಮ ಸಾಥ್ ನೀಡಿದರು. ಈ ಜೋಡಿ ಅಮೂಲ್ಯ 41 ರನ್‌ಗಳ ಜತೆಯಾಟವಾಡಿತು. ಅಬ್ಬಾಸ್ ಅಫ್ರಿದಿ 19 ರನ್ ಬಾರಿಸಿದರು. ಹೀಗಿರುವಾಗ 19ನೇ ಓವರ್‌ನಲ್ಲಿ ಸ್ಪಿನ್ನರ್ ರಿಶಾದ್ ಹೊಸೈನ್, ಅಶ್ರಫ್ ವಿಕೆಟ್ ಕಬಳಿಸುವ ಮೂಲಕ ಪಂದ್ಯ ಬಾಂಗ್ಲಾದೇಶ ಪರ ವಾಲುವಂತೆ ಮಾಡಿದರು.
ಈ ಗೆಲುವಿನೊಂದಿಗೆ ಬಾಂಗ್ಲಾದೇಶ ತಂಡವು ಇನ್ನೂಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಟಿ20 ಸರಣಿಯನ್ನು ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅಂದಹಾಗೆ ಇದು ಪಾಕಿಸ್ತಾನ ಎದುರು ಬಾಂಗ್ಲಾದೇಶಕ್ಕೆ ಮೊದಲ ಟಿ20 ಸರಣಿ ಎನಿಸಿಕೊಂಡಿತು. ಈ ಹಿಂದಿನ ಮೂರು ಟಿ20 ಸರಣಿಯಲ್ಲೂ ಪಾಕಿಸ್ತಾನ ಎದುರು ಬಾಂಗ್ಲಾದೇಶ ಸೋಲಿನ ಕಹಿಯುಂಡಿತ್ತು. ಆಕರ್ಷಕ ಅರ್ಧಶತಕ ಸಿಡಿಸಿದ ಝಕರ್ ಅಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.
