ಬೆಂಗಳೂರು(ಫೆ.27): ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಹಾಗೂ ಅಂತಿಮ ಟಿ20 ಪಂದ್ಯ ಅಭಿಮಾನಿಗಳ ಕುತೂಹಲ ಇಮ್ಮಡಿಗೊಳಿಸಿದೆ. ಆಸ್ಟ್ರೇಲಿಯಾ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಭಾರತ 4 ವಿಕೆಟ್ ನಷ್ಟಕ್ಕೆ 190 ರನ್ ಸಿಡಿಸಿದೆ. ಈ ಮೂಲಕ ಆಸಿಸ್ ಗೆಲುವಿಗೆ 191 ರನ್ ಟಾರ್ಗೆಟ್ ನೀಡಿದೆ.

ಇದನ್ನೂ ಓದಿ: ಭಾರತ-ಆಸ್ಟ್ರೇಲಿಯಾ ಬೆಂಗಳೂರು ಟಿ20 ಪಂದ್ಯ - ಪಾರ್ಕಿಂಗ್ ಎಲ್ಲೆಲ್ಲಿ?

ಟಾಸ್ ಸೋತು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾಗೆ ಕೆ.ಎಲ್.ರಾಹುಲ್ ಭರ್ಜರಿ ಆರಂಭ ನೀಡಿದರು. ತವರಿನ ಪಿಚ್‌ನಲ್ಲಿ ಅಬ್ಬರಿಸಿದ ರಾಹುಲ್ 4 ಸಿಕ್ಸರ್ ಹಾಗೂ 3 ಬೌಂಡರಿ ಬಾರಿಸಿ ಅಭಿಮಾನಿಗಳಿಗೆ ಮನರಂಜನೆ ನೀಡಿದರು. ರಾಹುಲ್ ಕೇವಲ 26 ಎಸೆತದಲ್ಲಿ 47 ರನ್ ಸಿಡಿಸಿ ಔಟಾದರು. ಆದರೆ ಶಿಖರ್ ಧವನಿ 24 ಎಸೆತ ಎದುರಿಸ 14 ರನ್ ಗಳಿಸಿ ಔಟಾದರು.

ರಿಷಬ್ ಪಂತ್  ಕ್ರೀಸ್‌ಗಿಳಿದಾಗಲೇ ಮುಂದಿನ ಬ್ಯಾಟ್ಸ್‌ಮನ್ ಎಂ.ಎಸ್.ಧೋನಿ ಪ್ಯಾಡ್ ಕಟ್ಟಿ ರೆಡಿಯಾದರು. ನಿರೀಕ್ಷೆಯಂತೆ ಪಂತ್ 1 ರನ್  ಸಿಡಿಸಿ ಪೆವಿಲಿಯನ್‌ಗೆ ಮರಳಿದರು. ನಾಯಕ ವಿರಾಟ್ ಕೊಹ್ಲಿ ಹಾಗೂ ಎಂ.ಎಸ್.ಧೋನಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಟೀಂ ಇಂಡಿಯಾಗೆ ನೆರವಾಯ್ತು.

ಇದನ್ನೂ ಓದಿ: ಲಂಕಾ ಮಾಜಿ ಕ್ರಿಕೆಟಿಗ ಜಯಸೂರ್ಯಗೆ ಐಸಿಸಿ 2 ವರ್ಷ ನಿಷೇಧ!

ಅಬ್ಬರಿಸಿದ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ 20ನೇ ಅರ್ಧಶತಕ ಪೂರೈಸಿದರು. ಕಳೆದ ಪಂದ್ಯದಲ್ಲಿ ಟೀಕೆ ಎದುರಿಸಿದ ಧೋನಿ, ಸಿಕ್ಸರ್ ಮೂಲಕ ಉತ್ತರ ನೀಡಿದರು. 23 ಎಸೆತದಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 40 ರನ್ ಸಿಡಿಸಿ ಔಟಾದರು. ಆದರೆ ಕೊಹ್ಲಿ ಮಾತ್ರ ಆಸಿಸ್ ಬೌಲರ್‌ಗಳ ಬೆವರಿಳಿಸಿದರು. ಕೊಹ್ಲಿ 38 ಎಸೆತದಲ್ಲಿ 6 ಸಿಕ್ಸರ್ ಹಾಗೂ 2 ಬೌಂಡರಿ ಮೂಲಕ ಅಜೇಯ 72 ರನ್ ಸಿಡಿಸಿದರು. ದಿನೇಶ್ ಕಾರ್ತಿಕ್ ಅಜೇಯ 8 ರನ್ ಸಿಡಿಸಿದರು. ಭಾರತ 4 ವಿಕೆಟ್ ನಷ್ಟಕ್ಕೆ 190 ರನ್ ಸಿಡಿಸಿತು.