* ಥಾಮಸ್ ಕಪ್ ಟ್ರೋಫಿ ಮೊದಲ ಬಾರಿಗೆ ಜಯಿಸಿ ಇತಿಹಾಸ ನಿರ್ಮಿಸಿದ ಭಾರತ ಪುರುಷರ ಬ್ಯಾಡ್ಮಿಂಟನ್ ತಂಡ* ಐತಿಹಾಸಿಕ ಸಾಧನೆ ಮಾಡಿದ ಭಾರತ ತಂಡಕ್ಕೆ 1 ಕೋಟಿ ರುಪಾಯಿ ನಗದು ಬಹುಮಾನ ವಿತರಿಸಿದ ಬಿಎಐ* 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾ ತಂಡವನ್ನು ಮಣಿಸಿದ್ದ ಭಾರತ ತಂಡ
ನವದೆಹಲಿ(ಮೇ.24): ಚೊಚ್ಚಲ ಬಾರಿಗೆ ಥಾಮಸ್ ಕಪ್ ಗೆದ್ದ ಭಾರತ ಪುರುಷರ ಬ್ಯಾಡ್ಮಿಂಟನ್ (Thomas Cup Champion Indian Badminton Team) ತಂಡಕ್ಕೆ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ(ಬಿಎಐ) 1 ಕೋಟಿ ರು. ಬಹುಮಾನ ವಿತರಿಸಿದೆ. ತಂಡದ ಸಹಾಯಕ ಸಿಬ್ಬಂದಿಗೆ 20 ಲಕ್ಷ ರು. ನೀಡಲಾಯಿತು. ಬಿಎಐ ಅಧ್ಯಕ್ಷ ಹಿಮಂತ ಬಿಸ್ವ ಭಾರತ ತಂಡದ ಐತಿಹಾಸಿಕ ಸಾಧನೆಯನ್ನು ಕೊಂಡಾಡಿದರು. ಇನ್ನಷ್ಟು ಪದಕ, ಪ್ರಶಸ್ತಿಗಳನ್ನು ಗೆಲ್ಲುವಂತೆ ಆಟಗಾರರಿಗೆ ಶುಭ ಹಾರೈಸಿದರು.
ಇದೇ ಮೇ 15ರಂದು ನಡೆದ ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ಪುರುಷರ ಬ್ಯಾಡ್ಮಿಂಟನ್ (Indian Men's Badminton Team) ತಂಡವು ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿತ್ತು. ಥಾಮಸ್ ಕಪ್ ಟೂರ್ನಿಯ ಫೈನಲ್‌ನಲ್ಲಿ ಭಾರತ ಪುರುಷರ ಬ್ಯಾಡ್ಮಿಂಟನ್ ತಂಡವು 3-0 ಅಂತರದಲ್ಲಿ ಇಂಡೋನೇಷ್ಯಾ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾ ತಂಡವನ್ನು ಮಣಿಸಿ ಭಾರತೀಯ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಚಾರಿತ್ರ್ಯಿಕ ಸಾಧನೆಯನ್ನು ಮಾಡಿತ್ತು.
ಭಾರತ ಪುರುಷರ ಬ್ಯಾಡ್ಮಿಂಟನ್ ತಂಡವು ಥಾಮಸ್ ಕಪ್ ಟೂರ್ನಿಯ ಕೊನೆ 3 ಪಂದ್ಯಗಳಲ್ಲಿ 3 ಮಾಜಿ ಥಾಮಸ್ ಕಪ್ ಚಾಂಪಿಯನ್ ತಂಡಗಳನ್ನು ಬಗ್ಗು ಬಡಿದು ಪ್ರಶಸ್ತಿ ಗೆದ್ದಿದೆ. ಮಲೇಷ್ಯಾ ಹಾಗೂ ಡೆನ್ಮಾರ್ಕ್ ವಿರುದ್ಧ ಕ್ರಮವಾಗಿ ಕ್ವಾರ್ಟರ್ ಫೈನಲ್ ಹಾಗೂ ಸೆಮಿಫೈನಲ್‌ನಲ್ಲಿ ಗೆದ್ದಿತ್ತು. ಥಾಮಸ್ ಕಪ್‌ನಲ್ಲಿ ಚಾಂಪಿಯನ್ ಆದ 6ನೇ ದೇಶ ಎನ್ನುವ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಇಂಡೋನೇಷ್ಯಾ ದಾಖಲೆಯ 14 ಬಾರಿ ಪ್ರಶಸ್ತಿ ಗೆದ್ದಿದ್ದರೆ, ಚೀನಾ 10 ಹಾಗೂ ಮಲೇಷ್ಯಾ 5 ಬಾರಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಡೆನ್ಮಾರ್ಕ್ ಹಾಗೂ ಜಪಾನ್ ತಲಾ 1 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿವೆ.
Thomas Cup ಜಯಿಸಿದ್ದು ಸಣ್ಣ ಸಾಧನೆಯಲ್ಲ; ಭಾರತ ತಂಡವನ್ನು ಗುಣಗಾನ ಮಾಡಿದ ಪ್ರಧಾನಿ ಮೋದಿ
1949ರಲ್ಲಿ ಆರಂಭಗೊಂಡಿದ್ದ ಥಾಮಸ್ ಕಪ್‌ನ ಮಾದರಿ 1984ರಲ್ಲಿ ಬದಲಾಗಿತ್ತು. 1982ರ ವರೆಗೂ ಮೊದಲೆರಡು ಸ್ಥಾನಗಳನ್ನು ಪಡೆದ ತಂಡಗಳಿಗೆ ಮಾತ್ರ ಪದಕ ನೀಡಲಾಗುತ್ತಿತ್ತು. 1979ರಲ್ಲಿ ಭಾರತ ಸೆಮಿಫೈನಲ್ ಪ್ರವೇಶಿಸಿತ್ತು. ಭಾರತ ಮತ್ತೊಮ್ಮೆ ಸೆಮೀಸ್‌ಗೇರಿ ಪದಕ ಖಚಿತಪಡಿಸಿಕೊಳ್ಳಲು 43 ವರ್ಷ ಕಾಯಬೇಕಾಯಿತು.
100 ಮೀ. ಹರ್ಡಲ್ಸ್: ಜ್ಯೋತಿ ರಾಷ್ಟ್ರೀಯ ದಾಖಲೆ
ನವದೆಹಲಿ: 100 ಮೀ. ಹರ್ಡಲ್ಸ್‌ನಲ್ಲಿ ತಮ್ಮ ಹೆಸರಲ್ಲೇ ಇದ್ದ ರಾಷ್ಟ್ರೀಯ ದಾಖಲೆಯನ್ನು ಭಾರತದ ಯುವ ಅಥ್ಲಿಟ್ ಜ್ಯೋತಿ ಯರ್ರಾಜಿ ಮುರಿದಿದ್ದಾರೆ. ಬ್ರಿಟನ್‌ನ ಲೌಬರೋ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅವರು 13.11 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ಮೇ 10ರಂದು ಸೈಪ್ರಸ್‌ನ ಲಿಮಾಸ್ಸೊಲ್‌ನಲ್ಲಿ ನಡೆದಿದ್ದ ಕೂಟದಲ್ಲಿ 13.23 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ನಿರ್ಮಿಸಿದ್ದ ದಾಖಲೆಯನ್ನು 22 ವರ್ಷದ ಆಂಧ್ರ ಅಥ್ಲೀಟ್ ಉತ್ತಮಗೊಳಿಸಿದರು.
ಚೆಸ್ಸೇಬಲ್ ಟೂರ್ನಿ: ಕ್ವಾರ್ಟರ್‌ಗೆ ಪ್ರಜ್ಞಾನಂದ
ಚೆನ್ನೈ: ಭಾರತದ ಯುವ ಗ್ರ್ಯಾಂಡ್ ಮಾಸ್ಟರ್ ಆರ್.ಪ್ರಜ್ಞಾನಂದ ಚೆಸ್ಸೇಬಲ್ ಮಾಸ್ಟರ್ಸ್ ಆನ್‌ಲೈನ್ ರಾರಯಪಿಡ್ ಚೆಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. 15ನೇ ಹಾಗೂ ಅಂತಿಮ ಸುತ್ತಿನಲ್ಲಿ ಅವರು ಭಾರತದ ಗ್ರ್ಯಾಂಡ್ ಮಾಸ್ಟರ್ ವಿದಿತ್ ಗುಜರಾತಿ ವಿರುದ್ಧ ಜಯಿಸಿದರು. 16 ವರ್ಷದ ಪ್ರಜ್ಞಾನಂದಗೆ ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ವೀ ಯೀ ಎದುರಾಗಲಿದ್ದಾರೆ. ಇದೇ ಟೂರ್ನಿಯಲ್ಲಿ ಅವರು ವಿಶ್ವ ನಂ.1 ಮ್ಯಾಗ್ನಸ್ ಕಾಲ್‌ರ್‍ಸನ್‌ರನ್ನು ಸೋಲಿಸಿದ್ದರು.
