* ಏಕದಿನ ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ನೆಟ್ಟ ಪಾಕ್ ನಾಯಕ ಬಾಬರ್ ಅಜಂ* ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಅಳಿಸಿಹಾಕಿದ ಬಾಬರ್ ಅಜಂ* ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ಬಾರಿಗೆ ಹ್ಯಾಟ್ರಿಕ್ ಸೆಂಚುರಿ ಬಾರಿಸಿದ ಪಾಕ್ ನಾಯಕ
ಮುಲ್ತಾನ್(ಜೂ.09): ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ (Babar Azam), ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ರನ್ ಮಳೆಹರಿಸುವುದನ್ನು ಮುಂದುವರೆಸಿದ್ದು, ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಇದಷ್ಟೇ ಅಲ್ಲದೇ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಅಪರೂಪದ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಬಾಬರ್ ಅಜಂ ಯಶಸ್ವಿಯಾಗಿದ್ದಾರೆ.
ಹೌದು, ಇಲ್ಲಿನ ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನ (West Indies vs Pakistan) ತಂಡಗಳ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ವೆಸ್ಟ್ ಇಂಡೀಸ್ ತಂಡವು 305 ರನ್ ಬಾರಿಸಿತ್ತು. ಈ ಬೃಹತ್ ಮೊತ್ತ ಬೆನ್ನತ್ತಿದ ಆತಿಥೇಯ ಪಾಕಿಸ್ತಾನ ತಂಡವು ಬಾಬರ್ ಅಜಂ ಬಾರಿಸಿದ ಆಕರ್ಷಕ ಶತಕ(103 ರನ್ 107 ಎಸೆತ) ಹಾಗೂ ಇಮಾಮ್ ಉಲ್ ಹಕ್(65) ಮತ್ತು ಬಾಬರ್ ಅಜಂ(59) ಬಾರಿಸಿದ ಸಮಯೋಚಿತ ಅರ್ಧಶತಕದ ನೆರವಿನಿಂದ ಇನ್ನೂ 4 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಇದೇ ವೇಳೆ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯನ್ನೂ ಅಳಿಸಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡದ (Pakistan Cricket Team) ನಾಯಕರಾದ ಬಳಿಕ ಅತಿ ಕಡಿಮೆ ಇನಿಂಗ್ಸ್‌ಗಳನ್ನಾಡಿ 1,000 ರನ್ ಬಾರಿಸಿದ ದಾಖಲೆ ಇದೀಗ ಬಾಬರ್ ಅಜಂ ಪಾಲಾಗಿದೆ. ಪಾಕಿಸ್ತಾನ ಏಕದಿನ ಕ್ರಿಕೆಟ್ ತಂಡದ ನಾಯಕರಾದ ಬಳಿಕ ಬಾಬರ್ ಅಜಂ ಕೇವಲ 13 ಇನಿಂಗ್ಸ್‌ಗಳನ್ನಾಡಿ ಒಂದು ಸಾವಿರ ರನ್ ಬಾರಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಮೊದಲು ವಿರಾಟ್ ಕೊಹ್ಲಿ ನಾಯಕರಾದ ಬಳಿಕ 17 ಇನಿಂಗ್ಸ್‌ಗಳನ್ನಾಡಿ ಒಂದು ಸಾವಿರ ರನ್ ಬಾರಿಸಿದ್ದರು.
Ind vs SA: ಇಂದಿನಿಂದ ಇಂಡೋ-ಆಫ್ರಿಕಾ ಟಿ20 ಕದನ..!
ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಏಕದಿನ ಪಂದ್ಯ ಆರಂಭಕ್ಕೂ ಮುನ್ನ ಬಾಬರ್ ಅಜಂ, ವಿರಾಟ್ ಕೊಹ್ಲಿ (Virat Kohli) ಹೆಸರಿನಲ್ಲಿದ್ದ ದಾಖಲೆಯನ್ನು ಮುರಿಯಲು 98 ರನ್‌ಗಳ ಅಗತ್ಯವಿತ್ತು. ವೆಸ್ಟ್ ಇಂಡೀಸ್ ಎದುರು ಬೃಹತ್ ಮೊತ್ತ ಬೆನ್ನತ್ತಿದ್ದ ಪಾಕಿಸ್ತಾನ ತಂಡಕ್ಕೆ ನಾಯಕನಾಟವಾಡುವ ಮೂಲಕ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಬಾಬರ್ ಅಜಂ, ಐಸಿಸಿ ಟಿ20 ಹಾಗೂ ಏಕದಿನ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಟೆಸ್ಟ್ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಬಾರಿಗೆ ಹ್ಯಾಟ್ರಿಕ್ ಸೆಂಚುರಿ ಬಾರಿಸಿದ ಬಾಬರ್:
ಪಾಕಿಸ್ತಾನದ ಬಲಗೈ ಬ್ಯಾಟರ್ ಬಾಬರ್ ಅಜಂ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಬಾರಿಗೆ ಹ್ಯಾಟ್ರಿಕ್(ಸತತ 3) ಶತಕ ಸಿಡಿಸುವ ಮೂಲಕ ವಿನೂತನ ದಾಖಲೆ ಬರೆದಿದ್ದಾರೆ. ವೆಸ್ಟ್ ಇಂಡೀಸ್ ಎದುರಿನ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಬಾಬರ್ ಅಜಂ ಆಸ್ಟ್ರೇಲಿಯಾ ಎದುರಿನ ಕೊನೆಯ ಎರಡು ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 114 ಹಾಗೂ 105* ರನ್ ಬಾರಿಸಿದ್ದರು. ಇದೀಗ ಪಾಕ್ ಎದುರು 103 ರನ್ ಬಾರಿಸುವ ಮೂಲಕ ಸತತ 3 ಏಕದಿನ ಪಂದ್ಯಗಳಲ್ಲಿ 3 ಶತಕ ಸಿಡಿಸಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಎರಡು ಬಾರಿ ಹ್ಯಾಟ್ರಿಕ್ ಸೆಂಚುರಿ ಬಾರಿಸಿದ ಮೊದಲ ಕ್ರಿಕೆಟಿಗ ಎನ್ನುವ ಕೀರ್ತಿಗೆ ಬಾಬರ್ ಅಜಂ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು 2016ರಲ್ಲಿ ಬಾಬರ್ ಅಜಂ, ಯುಎಇನಲ್ಲಿ ವೆಸ್ಟ್ ಇಂಡೀಸ್ ವಿರುದ್ದ ನಡೆದ ಏಕದಿನ ಸರಣಿಯಲ್ಲಿ ಹ್ಯಾಟ್ರಿಕ್ ಸೆಂಚುರಿ ಬಾರಿಸಿದ್ದರು.
