* ಭಾರತ-ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿ ಇಂದಿನಿಂದ ಆರಂಭ* 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯಕ್ಕೆ ದೆಹಲಿಯ ಅರುಣ್ ಜೇಟ್ಲಿ ಮೈದಾನ ಅತಿಥ್ಯ* ರೋಹಿತ್, ರಾಹುಲ್ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ

ನವದೆಹಲಿ(ಜೂ.09): ಮುಂಬರುವ ಟಿ20 ವಿಶ್ವಕಪ್‌ಗೆ (ICC T20 World Cup) ಟೀಂ ಇಂಡಿಯಾದಲ್ಲಿ ಸ್ಥಾನ ಗಳಿಸಲು ತೀವ್ರ ಪೈಪೋಟಿ ಎದುರಾಗುತ್ತಿದ್ದು, ಐಪಿಎಲ್‌ನಲ್ಲಿ ಮಿಂಚಿದ್ದ ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಗುರುವಾರದಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ವೇದಿಕೆ ಒದಗಿಸಲಿದೆ. 

ಶ್ರೀಲಂಕಾ ವಿರುದ್ಧದ ಟಿ20 ವೈಟ್‌ವಾಷ್‌ ಮೂಲಕ ಈ ಸರಣಿಗೆ ಕಾಲಿಡುತ್ತಿರುವ ಭಾರತ, ದಕ್ಷಿಣ ಆಫ್ರಿಕಾದ ಮೇಲೂ ಪ್ರಾಬಲ್ಯ ಸಾಧಿಸಲು ಎದುರು ನೋಡುತ್ತಿದೆ. ಖಾಯಂ ನಾಯಕ ರೋಹಿತ್‌ ಶರ್ಮಾ ಹಾಗೂ ಮಾಜಿ ನಾಯಕ ವಿರಾಟ್‌ ಕೊಹ್ಲಿ ಸೇರಿದಂತೆ ಕೆಲ ಹಿರಿಯ ಆಟಗಾರರು ವಿಶ್ರಾಂತಿ ಪಡೆದಿದ್ದು, ಕಿರಿಯರಿಗೆ ಮಣೆ ಹಾಕಲಾಗಿದೆ. ಐಪಿಎಲ್‌ ಮೂಲಕ ಬೆಳಕಿಗೆ ಬಂದಿದ್ದ ಯುವ ತಾರೆಗಳ ನಡುವೆ ತಂಡಕ್ಕೆ ಅಂತಿಮ 11ರ ಆಯ್ಕೆ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ.

ಕೆ.ಎಲ್‌.ರಾಹುಲ್‌ ಅನುಪಸ್ಥಿತಿಯಲ್ಲಿ ಇಶಾನ್‌ ಕಿಶನ್‌ (Ishan Kishan) ಹಾಗೂ ಋುತುರಾಜ್‌ ಗಾಯಕ್ವಾಡ್‌ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ. ಶ್ರೇಯಸ್‌ ಅಯ್ಯರ್‌ 3ನೇ ಕ್ರಮಾಂಕದಲ್ಲಿ ಮತ್ತೊಮ್ಮೆ ಸಾಮರ್ಥ್ಯ ಸಾಬೀತುಪಡಿಸುವ ಕಾತರದಲ್ಲಿದ್ದು, ದೀಪಕ್‌ ಹೂಡಾ ಕೂಡಾ ಸ್ಥಾನ ಗಿಟ್ಟಿಸುವ ನಿರೀಕ್ಷೆಯಲ್ಲಿದ್ದಾರೆ. ರಿಷಭ್ ಪಂತ್‌ (Rishabh Pant) ಜೊತೆ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಪಡೆಯಲು ಹಲವು ವರ್ಷಗಳ ಬಳಿಕ ತಂಡಕ್ಕೆ ಮರಳಿರುವ ದಿನೇಶ್‌ ಕಾರ್ತಿಕ್‌ (Dinesh Karthik) ಕಾಯುತ್ತಿದ್ದಾರೆ. ಫಿನಿಶರ್‌ ಆಗಿ ಹಾರ್ದಿಕ್‌ ಪಾಂಡ್ಯ ಮತ್ತೆ ತಂಡಕ್ಕೆ ವಾಪಸ್‌ ಆಗುವುದು ಬಹುತೇಕ ಖಚಿತ.

ಇನ್ನು, ಬೌಲಿಂಗ್‌ ಪಡೆಯನ್ನು ಅನುಭವಿ ವೇಗಿ ಭುವನೇಶ್ವರ್‌ ಕುಮಾರ್‌ ಮುನ್ನಡೆಸಲಿದ್ದು, ಹರ್ಷಲ್‌ ಪಟೇಲ್‌ ಜೊತೆ ಪ್ರಚಂಡ ವೇಗಿ ಉಮ್ರಾನ್‌ ಮಲಿಕ್‌ ಕೂಡಾ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು. 3ನೇ ವೇಗಿಯಾಗಿ ಆವೇಶ್‌ ಖಾನ್‌ ಅಥವಾ ಅರ್ಶದೀಪ್‌ ಸಿಂಗ್‌ ಅವಕಾಶ ಸಿಗಬಹುದು. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪರ್ಪಲ್ ಕ್ಯಾಪ್ ಪಡೆದಿದ್ದ ಯುಜುವೇಂದ್ರ ಚಹಲ್, ಅದೇ ಲಯವನ್ನು ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದ್ದಾರೆ.

IND vs SA T20 ಸೌತ್ ಆಫ್ರಿಕಾ ವಿರುದ್ದದ ಟಿ20 ಸರಣಿಯಿಂದ ಕೆಎಲ್ ರಾಹುಲ್, ಕುಲ್ದೀಪ್ ಯಾದವ್ ಔಟ್!

ಇನ್ನು, 2010ರ ಬಳಿಕ ಯಾವುದೇ ಸೀಮಿತ ಓವರ್‌ ಸರಣಿ ಸೋಲದ ದಕ್ಷಿಣ ಆಫ್ರಿಕಾ ಕೂಡಾ ಭಾರತಕ್ಕೆ ಅದರವೇ ತವರಿನಲ್ಲಿ ಆಘಾತ ನೀಡಲು ಕಾಯುತ್ತಿದೆ. ಕ್ವಿಂಟನ್‌ ಡಿ ಕಾಕ್‌, ಏಡನ್‌ ಮಾರ್ಕ್ರಮ್‌, ಡೇವಿಡ್‌ ಮಿಲ್ಲರ್‌, ತೆಂಬ ಬವುಮ, ರಸ್ಸೀ ವ್ಯಾನ್‌ ಡೆರ್‌ ಡುಸ್ಸೆನ್‌ ಅವರನ್ನೊಳಗೊಂಡ ಬ್ಯಾಟಿಂಗ್‌ ಪಡೆ ಭಾರತೀಯ ಬೌಲರ್‌ಗಳಿಗೆ ಸವಾಲಾಗಿ ಪರಿಣಮಿಸಬಹುದು. ವೇಗಿಗಳಾದ ಏನ್ರಿಚ್‌ ನೋಕಿಯಾ, ಕಗಿಸೊ ರಬಾಡ ಜೊತೆ ಸ್ಪಿನ್‌ ಜೋಡಿ ತಬ್ರೇಜ್‌ ಶಮ್ಸಿ ಹಾಗೂ ಕೇಶವ್‌ ಮಹಾರಾಜ್‌ ಟೀಂ ಇಂಡಿಯಾ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಎದುರು ನೋಡುತ್ತಿದ್ದಾರೆ.

ಉಮ್ರಾನ್‌ ಮಲಿಕ್‌ ದಾಖಲೆ ಹೊಸ್ತಿಲಲ್ಲಿ

ಜಮ್ಮು ಮತ್ತು ಕಾಶ್ಮೀರ ವೇಗಿ ಉಮ್ರಾನ್‌ ಮಲಿಕ್‌ ಭಾರತಕ್ಕೆ ಪಾದಾರ್ಪಣೆ ನಿರೀಕ್ಷೆಯಲ್ಲಿದ್ದು, ಮೊದಲ ಪಂದ್ಯದಲ್ಲೇ ಭಾರತದ ಅತ್ಯಂತ ವೇಗದ ಎಸೆತ ಎಂಬ ದಾಖಲೆಯನ್ನು ಮುರಿಯುವ ಹೊಸ್ತಿಲಲ್ಲಿದ್ದಾರೆ. ಭಾರತದ ಮಾಜಿ ವೇಗಿ, ಕರ್ನಾಟಕ ಜಾವಗಲ್‌ ಶ್ರೀನಾಥ್‌ ಅವರು 1997ರಲ್ಲಿ ಆಸ್ಪ್ರೇಲಿಯಾ ವಿರುದ್ಧ ಗಂಟೆಗೆ 157ರ ವೇಗದಲ್ಲಿ ಬೌಲ್‌ ಮಾಡಿದ್ದು ಈವರೆಗೆ ಭಾರತ ಅತ್ಯಂತ ವೇಗದ ಎಸೆತ ಎನಿಸಿಕೊಂಡಿದೆ. ಇದನ್ನು ಐಪಿಎಲ್‌ನಲ್ಲಿ ಸತತವಾಗಿ 150+ ವೇಗದಲ್ಲಿ ಬೌಲ್‌ ಮಾಡಿದ್ದ ಉಮ್ರಾನ್‌ ಮುರಿಯುವ ಸಾಧ್ಯತೆಗಳಿವೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಇಶಾನ್ ಕಿಶನ್‌, ಋುತುರಾಜ್ ಗಾಯಕ್ವಾಡ್‌, ಶ್ರೇಯಸ್‌ ಅಯ್ಯರ್‌, ದೀಪಕ್‌ ಹೂಡಾ, ರಿಷಭ್ ಪಂತ್‌(ನಾಯಕ), ದಿನೇಶ್ ಕಾರ್ತಿಕ್‌, ಹಾರ್ದಿಕ್ ಪಾಂಡ್ಯ‌, ಭುವನೇಶ್ವರ್‌ ಕುಮಾರ್, ಹರ್ಷಲ್‌ ಪಟೇಲ್, ಆವೇಶ್‌ ಖಾನ್‌/ಅಶ್‌ರ್‍ದೀಪ್‌, ಯುಜುವೇಂದ್ರ ಚಹಲ್‌, ಉಮ್ರಾನ್‌ ಮಲಿಕ್

ದಕ್ಷಿಣ ಅಫ್ರಿಕಾ: ಕ್ವಿಂಟನ್ ಡಿ ಕಾಕ್‌, ರೀಜಾ ಹೆಂಡ್ರಿಕ್ಸ್‌, ವ್ಯಾನ್ ಡರ್ ಡುಸ್ಸನ್‌, ಏಡನ್‌ ಮಾರ್ಕ್ರಮ್‌, ಡೇವಿಡ್ ಮಿಲ್ಲರ್‌, ತೆಂಬ ಬವುಮಾ(ನಾಯಕ), ಡ್ವೇಯ್ನ್‌ ಪ್ರಿಟೋರಿಯಸ್‌, ಕಗಿಸೋ ರಬಾಡ, ಕೇಶವ್ ಮಹಾರಾಜ್‌, ತಬ್ರೇಜ್‌ ಶಮ್ಸಿ, ಏನ್ರಿಚ್‌ ನೋಕಿಯಾ.

ಪಂದ್ಯ ಆರಂಭ: ಸಂಜೆ 7 ಗಂಟೆಗೆ
ಸ್ಥಳ: ಅರುಣ್ ಜೇಟ್ಲಿ ಸ್ಟೇಡಿಯಂ, ಡೆಲ್ಲಿ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌, ಹಾಟ್‌ಸ್ಟಾರ್