ಇಂಗ್ಲೆಂಡ್ ಎದುರು ಆಕರ್ಷಕ ಅರ್ಧಶತಕ ಬಾರಿಸಿದ ಬಾಬರ್ ಅಜಂಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಯ ದಾಖಲೆ ಸರಿಗಟ್ಟಿದ ಪಾಕಿಸ್ತಾನ ನಾಯಕಕೊಹ್ಲಿ ಜತೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿವೇಗವಾಗಿ 3000 ರನ್ ಬಾರಿಸಿದ ಜಂಟಿ ದಾಖಲೆ ಅಜಂ ಪಾಲು
ಲಾಹೋರ್(ಅ.01): ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ರನ್ ಬರ ಅನುಭವಿಸಿದ್ದ ಪಾಕಿಸ್ತಾನ ನಾಯಕ ಬಾಬರ್ ಅಜಂ, ಕೊನೆಗೂ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ತವರಿನಲ್ಲಿ ಬಲಿಷ್ಠ ಇಂಗ್ಲೆಂಡ್ ಎದುರು ನಡೆಯುತ್ತಿರುವ 7 ಪಂದ್ಯಗಳ ಟಿ20 ಸರಣಿಯಲ್ಲಿ ಬಾಬರ್ ಅಜಂ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ವೇಳೆ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಸರಿಗಟ್ಟುವಲ್ಲಿ ಬಾಬರ್ ಅಜಂ ಯಶಸ್ವಿಯಾಗಿದ್ದಾರೆ.
ಹೌದು, 27 ವರ್ಷದ ಬಾಬರ್ ಅಜಂ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿವೇಗವಾಗಿ 3000 ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಜತೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಬಾಬರ್ ಅಜಂ 81 ಟಿ20 ಇನಿಂಗ್ಸ್‌ಗಳನ್ನಾಡಿ 3,000 ರನ್ ಬಾರಿಸಿದ್ದಾರೆ. ಇದೇ ಪಂದ್ಯದಲ್ಲಿ ಬಾಬರ್ ಅಜಂ,ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಪೌಲ್ ಸ್ಟರ್ಲಿಂಗ್ ಅವರನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಗರಿಷ್ಠ ರನ್ ಬಾರಿಸಿದ ಮೊದಲ ಮೂವರು ಬ್ಯಾಟರ್‌ಗಳ ಪೈಕಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಮಾರ್ಟಿನ್ ಗಪ್ಟಿಲ್ ಸ್ಥಾನ ಪಡೆದಿದ್ದಾರೆ.
ಇಲ್ಲಿನ ಗಡಾಫಿ ಸ್ಟೇಡಿಯಂನಲ್ಲಿ ನಡೆದ ಆರನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡವು 6 ವಿಕೆಟ್ ಕಳೆದುಕೊಂಡು 169 ರನ್ ಬಾರಿಸಿತ್ತು. ಪಾಕ್ ನಾಯಕ ಬಾಬರ್ ಅಜಂ ಕೇವಲ 59 ಎಸೆತಗಳನ್ನು ಎದುರಿಸಿ ಆಕರ್ಷಕ 87 ರನ್ ಚಚ್ಚಿದ್ದರು. ಇನ್ನು ಸವಾಲಿನ ಗುರಿ ಬೆನ್ನತ್ತಿದ ಪ್ರವಾಸಿ ಇಂಗ್ಲೆಂಡ್ ತಂಡವು ಕೇವಲ 14.3 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು.
ಭಾರತಕ್ಕೆ ಮತ್ತೊಬ್ಬ ಜಹೀರ್ ಖಾನ್ ಸಿಕ್ಕಿದರು ಎಂದ ಪಾಕ್ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್..!
ಇಂಗ್ಲೆಂಡ್ ಪರ ಅಲೆಕ್ಸ್ ಹೇಲ್ಸ್ ಹಾಗೂ ಫಿಲಿಫ್ ಸಾಲ್ಟ್ ಸ್ಪೋಟಕ ಆರಂಭ ಒದಗಿಸಿಕೊಟ್ಟರು. ಮೊದಲ 3 ಓವರ್‌ಗಳಲ್ಲಿ ಇಂಗ್ಲೆಂಡ್ ತಂಡವು 50 ರನ್ ಕಲೆಹಾಕಿತು. ಹೇಲ್ಸ್ 12 ಎಸೆತಗಳಲ್ಲಿ 27 ರನ್ ಚಚ್ಚಿದರೆ, ಫಿಲಿಫ್ ಸಾಲ್ಟ್ 41 ಎಸೆತಗಳಲ್ಲಿ ಅಜೇಯ 88 ರನ್ ಚಚ್ಚಿದರು. ಡೇವಿಡ್ ಮಲಾನ್ ಹಾಗೂ ಬೆನ್ ಡಕೆಟ್ ತಲಾ 26 ರನ್ ಬಾರಿಸಿದರು. ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡವು 7 ಪಂದ್ಯಗಳ ಟಿ20 ಸರಣಿಯಲ್ಲಿ 3-3ರ ಸಮಬಲ ಸಾಧಿಸಿದ್ದು, ಏಳನೇ ಹಾಗೂ ನಿರ್ಣಾಯಕ ಪಂದ್ಯ ಜಯಿಸಿದ ತಂಡವು ಟಿ20 ಸರಣಿಯನ್ನು ತನ್ನದಾಗಿಸಿಕೊಳ್ಳಲಿದೆ.
