Asianet Suvarna News Asianet Suvarna News

ಭಾರತಕ್ಕೆ ಮತ್ತೊಬ್ಬ ಜಹೀರ್ ಖಾನ್ ಸಿಕ್ಕಿದರು ಎಂದ ಪಾಕ್ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್..!

* ಟೀಂ ಇಂಡಿಯಾ ಪರ ಗಮನಾರ್ಹ ಪ್ರದರ್ಶನ ತೋರುತ್ತಿರುವ ಆರ್ಶದೀಪ್ ಸಿಂಗ್
* ಆರ್ಶದೀಪ್ ಸಿಂಗ್ ಪರ ಮೆಚ್ಚುಗೆ ವ್ಯಕ್ತಪಡಿಸಿದ ಕಮ್ರಾನ್ ಅಕ್ಮಲ್
* ಕಮ್ರಾನ್ ಅಕ್ಮಲ್, ಪಾಕಿಸ್ತಾನದ ಮಾಜಿ ಕ್ರಿಕೆಟಿಗ

India have found their next Zaheer Khan in form of Arshdeep Singh says Kamran Akmal kvn
Author
First Published Oct 1, 2022, 1:32 PM IST

ಕರಾಚಿ(ಅ.01): ಯುವ ವೇಗಿ ಆರ್ಶದೀಪ್ ಸಿಂಗ್ ರೂಪದಲ್ಲಿ ಟೀಂ ಇಂಡಿಯಾಗೆ ಮತ್ತೋರ್ವ ಜಹೀರ್ ಖಾನ್ ಸಿಕ್ಕಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟ್ ಕೀಪರ್ ಕಮ್ರಾನ್ ಅಕ್ಮಲ್ ಅಭಿಪ್ರಾಯಪಟ್ಟಿದ್ದಾರೆ. ಆರ್ಶದೀಪ್ ಸಿಂಗ್, ಈ ವರ್ಷಾರಂಭದಲ್ಲಿ ಇಂಗ್ಲೆಂಡ್ ವಿರುದ್ದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದಾದ ಬಳಿಕ ಬೌಲಿಂಗ್‌ನಲ್ಲಿ, ಅದರಲ್ಲೂ ಡೆತ್ ಓವರ್‌ ಬೌಲಿಂಗ್‌ನಲ್ಲಿ ಆರ್ಶದೀಪ್ ಸಿಂಗ್ ಗಮನಾರ್ಹ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.

ಇದೀಗ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಆರ್ಶದೀಪ್ ಸಿಂಗ್ ಹೊಸ ಚೆಂಡಿನೊಂದಿಗೆ ದಾಳಿ ನಡೆಸಿಯೂ ಸೈ ಎನಿಸಿಕೊಂಡಿದ್ದರು. ಮೊದಲ ಟಿ20 ಪಂದ್ಯದಲ್ಲಿ ಆರ್ಶದೀಪ್ ಸಿಂಗ್ ಪ್ರಮುಖ 3 ವಿಕೆಟ್‌ ಕಬಳಿಸುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಪರಿಣಾಮ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ 8 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಪಾಕಿಸ್ತಾನ ಪರ 53 ಟೆಸ್ಟ್‌, 157 ಏಕದಿನ ಹಾಗೂ 58 ಟಿ20 ಪಂದ್ಯಗಳನ್ನಾಡಿರುವ ಕಮ್ರಾನ್ ಅಕ್ಮಲ್, 23 ವರ್ಷದ ಯುವ ವೇಗಿಯ ಬೌಲಿಂಗ್ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರ್ಶದೀಪ್ ಸಿಂಗ್ ಓರ್ವ ಬುದ್ದಿವಂತ ಹಾಗೂ ಮಾನಸಿಕವಾಗಿ ಸದೃಢವಾಗಿರುವ ಬೌಲರ್ ಎಂದು ಅಕ್ಮಲ್ ಗುಣಗಾನ ಮಾಡಿದ್ದಾರೆ.

ಆರ್ಶದೀಪ್ ಸಿಂಗ್ ಅವರೊಬ್ಬ ಅತ್ಯದ್ಭುತ ಬೌಲರ್. ನನ್ನ ಪ್ರಕಾರ ಭಾರತ ತಂಡವು ಮತ್ತೋರ್ವ ಜಹೀರ್ ಖಾನ್ ಅವರನ್ನು ಹುಡುಕಿಕೊಂಡಿದೆ. ಆರ್ಶದೀಪ್ ಸಿಂಗ್ ಬಳಿ ವೇಗ ಮತ್ತು ಸ್ವಿಂಗ್ ಎರಡೂ ಇದೆ. ಇದರ ಜತೆಗೆ ಅವರು ಚಾಣಾಕ್ಷವಾಗಿ ಬೌಲಿಂಗ್ ಮಾಡುತ್ತಾರೆ. ಮಾನಸಿಕವಾಗಿಯೂ ಅವರು ಸದೃಢವಾಗಿದ್ದಾರೆ. ಅವರಿಗೆ ತಮ್ಮ ಸಾಮರ್ಥ್ಯವೇನು ಎನ್ನುವುದು ಗೊತ್ತಿದೆ, ಅದನ್ನು ಅವರು ಪರಿಸ್ಥಿತಿಗನುಗುಣವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕಮ್ರಾನ್ ಅಕ್ಮಲ್ ಅಭಿಪ್ರಾಯಪಟ್ಟಿದ್ದಾರೆ.

ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ, ಆರ್ಶದೀಪ್ ಸಿಂಗ್, ಹರಿಣಗಳ ಪಡೆಯ ಕ್ವಿಂಟನ್ ಡಿ ಕಾಕ್, ರಿಲೇ ರೌಸೊ ಹಾಗೂ ಡೇವಿಡ್ ಮಿಲ್ಲರ್ ಅವರ ವಿಕೆಟ್ ಕಬಳಿಸಿದ್ದರು. ಅದರಲ್ಲೂ ಬೌಲಿಂಗ್ ಸ್ನೇಹಿ ಪಿಚ್‌ನಲ್ಲಿ ಡೇವಿಡ್ ಮಿಲ್ಲರ್ ವಿಕೆಟ್ ಕಬಳಿಸಿದ್ದರ ಬಗ್ಗೆ ಅಕ್ಮಲ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ICC T20 World Cup: 'ಮೊಹಮ್ಮದ್ ಶಮಿ ಪವರ್‌ ಪ್ಲೇನಲ್ಲೇ ವಿಕೆಟ್‌ ಕಬಳಿಸಬಲ್ಲರು'

ಅವರು ಕ್ವಿಂಟನ್ ಡಿ ಕಾಕ್ ಅವರನ್ನು ಬೌಲ್ಡ್‌ ಮಾಡಿದರು, ರೌಸೋ ಅವರು ವಿಕೆಟ್ ಹಿಂದೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಆದರೆ ಡೇವಿಡ್ ಮಿಲ್ಲರ್ ಅವರನ್ನು ಔಟ್ ಮಾಡಿದ ರೀತಿ ಅದ್ಭುತವಾಗಿತ್ತು. ವಿಕೆಟ್‌ನಿಂದ ಹೊರ ಎಸೆದ ಚೆಂಡು ಚುರುಕಾಗಿ ಇನ್‌ಸ್ವಿಂಗ್ ಪಡೆದುಕೊಂಡು ವಿಕೆಟ್‌ ಎಗರಿಸಿದರು. ಅವರು ಚಾಣಾಕ್ಷವಾಗಿ ಬೌಲಿಂಗ್ ನಡೆಸಿದರು ಮತ್ತು ಸಾಕಷ್ಟು ಪ್ರಬುದ್ದವಾದ ಪ್ರದರ್ಶನ ತೋರಿದರು. ಅವರಿಗಿನ್ನು ಚಿಕ್ಕ ವಯಸ್ಸು, ಜಹೀರ್ ಖಾನ್ ಬಳಿಕ ಉತ್ತಮ ಎಡಗೈ ವೇಗದ ಬೌಲರ್ ಸಿಕ್ಕಿದ್ದು, ಟೀಂ ಇಂಡಿಯಾ ಪಾಲಿಗೆ ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಕಮ್ರಾನ್ ಅಕ್ಮಲ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡನೇ ಟಿ20 ಪಂದ್ಯವು ಅಕ್ಟೋಬರ್ 02ರಂದು ಗುವಾಹಟಿಯಲ್ಲಿ ನಡೆಯಲಿದೆ. ಟಿ20 ಸರಣಿ ಗೆಲ್ಲುವ ಕನಸು ಜೀವಂತವಾಗಿರಿಸಿಕೊಳ್ಳಬೇಕಿದ್ದರೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ಎರಡನೇ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

Follow Us:
Download App:
  • android
  • ios