ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಪಂದ್ಯದ ವೇಳೆ ರನೌಟ್ ಅವಕಾಶ ಕೈತಪ್ಪಿದ್ದರಿಂದ ಅಕ್ಷರ್ ಪಟೇಲ್ ಮತ್ತು ಶ್ರೇಯಸ್ ಅಯ್ಯರ್ ಅವರು ಪ್ರಿನ್ಸ್ ಯಾದವ್ ಮೇಲೆ ಆಕ್ರೋಶ ವ್ಯಕ್ತಪಡಿಸಿದ ವಿಡಿಯೋ ವೈರಲ್ ಆಗಿದೆ.
ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಇವತ್ತು ಮೂರನೇ ಟಿ-20 ಪಂದ್ಯದಲ್ಲಿ ಮುಖಾಮುಖಿ ಆಗಿದ್ವು. ರಣ ರೋಚಕ ಪಂದ್ಯದಲ್ಲಿ ಟೀಂ ಇಂಡಿಯಾ ಆರು ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಇನ್ನು, ಈ ಪಂದ್ಯದ ವೇಳೆ ಹೈಡ್ರಾಮಾ ಒಂದು ನಡೆದಿದ್ದು, ಇದೀಗ ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆಗಿದ್ದೇನು?
ಅದು ಟೀಂ ಇಂಡಿಯಾ ಬೌಲಿಂಗ್ ಇನ್ನಿಂಗ್ಸ್ನಲ್ಲಿ ನಡೆದ ಹೈಡ್ರಾಮಾ. ಡ್ಯಾರಿಲ್ ಮಿಚೆಲ್ ಮತ್ತು ಜೋಶ್ ಜೇಕಬ್ಸ್ ಕ್ರೀಸ್ನಲ್ಲಿದ್ದರು. ಆಗ ಎದುರಾಳಿ ತಂಡ 189 ರನ್ಗಳಿಸಿತ್ತು. ಪ್ರಿನ್ಸ್ ಯಾದವ್ ಬೌಲಿಂಗ್ ಮಾಡುತ್ತಿದ್ದರು. ಓವರ್ನ ಒಂದು ಎಸೆತದ ನಂತರ ಲಾಂಗ್ ಆಫ್ ಕಡೆಗೆ ಬಂದಿದ್ದ ಬಾಲ್ ಅನ್ನು ನೇರವಾಗಿ ಸ್ಟಂಪ್ನತ್ತ ಎಸೆದಿದ್ದರು. ಅಕ್ಷರ್ ಪಟೇಲ್ ಎಸೆದ ಬಾಲ್ ನೇರವಾಗಿ ಸ್ಟಂಪ್ಗೆ ಬೀಳುತ್ತಿತ್ತು. ಆದರೆ.. ಪ್ರಿನ್ಸ್ ಯಾದವ್ ಅಕ್ಷರ್ ಎಸೆದ ಥ್ರೋ ಅನ್ನು ಹಿಡಿದು ಸ್ಟಂಪ್ ಮಾಡಲು ಯತ್ನಿಸಿದರು. ಇದರಿಂದ ರನೌಟ್ ಚಾನ್ಸ್ ಮಿಸ್ ಆಯಿತು. ಯಾವಾ ರನೌಟ್ ಅವಕಾಶವನ್ನು ಭಾರತ ತಂಡ ಕಳೆದುಕೊಳ್ಳುತ್ತಿದ್ದಂತೆಯೇ ಶ್ರೇಯಸ್ ಅಯ್ಯರ್ ಹಾಗೂ ಅಕ್ಷರ್ ಪಟೇಲ್ ಪ್ರಿನ್ಸ್ ಯಾದವ್ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.
ಅಕ್ಷರ್ ಮತ್ತು ಕ್ಯಾಪ್ಟನ್ ಅಯ್ಯರ್ ಕೋಪಿಸಿಕೊಂಡು.. ಪ್ರಿನ್ಸ್ ಯಾದವ್ ಅವರನ್ನು ನಿಂದಿಸಿದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ಕ್ರಿಕೆಟ್ ಪ್ರೇಮಿಗಳು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಸದ್ಯ ಈ ವಿಡಿಯೋ ನೆಟ್ಟಿಗರರಿಗೆ ಆಹಾರವಾಗಿದೆ.
ಹೇಗಿತ್ತು ಮ್ಯಾಚ್?
ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ 20 ಓವರ್ನಲ್ಲಿ 3 ವಿಕೆಟ್ ಕಳೆದುಕೊಂಡು 198 ರನ್ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡವು 13.2 ಓವರ್ನಲ್ಲಿ ನಿಗದಿತ ಗುರಿಯನ್ನು ಮುಟ್ಟಿತು. ಟೀಂ ಇಂಡಿಯಾ ಪರ ಸ್ಫೋಟಕ ಆರಂಭ ಸಿಕ್ಕಿತು. ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ ಮೈದಾನದಲ್ಲಿ ಆರ್ಭಟಿಸಿ ಬೊಬ್ಬಿರಿದರು.
ವೈಭವ್ ಸೂರ್ಯವಂಶಿ ಅವರು ಕೇವಲ 19 ಬಾಲ್ನಲ್ಲಿ 4 ಸಿಕ್ಸರ್, 4 ಬೌಂಡರಿಯೊಂದಿಗೆ 45 ರನ್ ಚಚ್ಚಿದರು. ಇನ್ನು ಅಭಿಷೇಕ್ ಶರ್ಮಾ ಸಿಕ್ಸರ್ಗಳ ಸುರಿಮಳೆಗೈದರು. 38 ಬಾಲ್ಗಳನ್ನ ಎದುರಿಸಿದ ಅಭಿಷೇಕ್ ಶರ್ಮಾ 11 ಸಿಕ್ಸರ್, 9 ಬೌಂಡರಿಯೊಂದಿಗೆ 113 ರನ್ಗಳಿಸಿ ಐತಿಹಾಸಿಕ ದಾಖಲೆ ಬರೆದರು. ಇನ್ನು ಸಂಜು ಸ್ಯಾಮ್ಸನ್ 18 ರನ್ಗಳ ಕಾಣಿಕೆ ನೀಡಿದರು. ಆ ಮೂಲಕ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. 38 ಬಾಲ್ನಲ್ಲಿ 113 ರನ್ಗಳಿಸಿ ತಂಡದ ಗೆಲುವಿಗೆ ಪ್ರಮುಖ ರನ್ಗಳ ಕಾಣಿಕೆ ನೀಡಿದ ಅಭಿಷೇಕ್ ಶರ್ಮಾ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.






