ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮೀ ಹಾಗೂ ನಟ ಝೈದ್ ಖಾನ್ ಜೈಲಿನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ತಮ್ಮ ಕುಟುಂಬದ ಬಗ್ಗೆ ಮಾತನಾಡುತ್ತಿರುವ ಧನ್ವೀರ್ ವಿರುದ್ಧ ದರ್ಶನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಾವು ಹೊರಬಂದ ಮೇಲೆ ಧೈರ್ಯವಿದ್ದರೆ ಎದುರಿಗೆ ಬಂದು ಮಾತನಾಡಲಿ ಎಂದು ಜೈಲಿನಿಂದಲೇ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇವತ್ತು ವಿಜಯಲಕ್ಷ್ಮೀ ಅವರು ನಟ ಝೈದ್ ಖಾನ್ ಜೊತೆ ಜೈಲಿಗೆ ಭೇಟಿ ನೀಡಿ ಪತಿ ದರ್ಶನ್ ಜೊತೆ ಮಾತುಕತೆ ನಡೆಸಿದರು. ಭೇಟಿ ವೇಳೆ ಧನ್ವೀರ್ ಜೊತೆಗೆ ನಡೆಯುತ್ತಿರುವ ಕಿತ್ತಾಟದ ಬಗ್ಗೆ ಚರ್ಚೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಗಂಟೆಗೂ ಹೆಚ್ಚು ಕಾಲ ದರ್ಶನ್ ಜೊತೆ ಚರ್ಚೆ ನಡೆಸಿದ ಬಳಿಕ ಝೈದ್ ಖಾನ್ ಹಾಗೂ ವಿಜಲಕ್ಷ್ಮೀ ಅವರು ಜೈಲಿನಿಂದ ಆಚೆ ಬಂದರು. ಬಳಿಕ ಮಾಧ್ಯಮಗಳ ಜೊತೆ ಝೈದ್ ಖಾನ್ ಪ್ರತಿಕ್ರಿಯಿಸಿದರು. ಭೇಟಿ ವೇಳೆ ದರ್ಶನ್ ಏನು ಹೇಳಿದರು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಝೈದ್ ಖಾನ್.. ಅದೇ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ತಿಳಿಸಲಾಯಿತು. ಅವರು (ದರ್ಶನ್) ಹೇಳಿದರು.. ನಾನು ಜೈಲಿನಲ್ಲಿ ಇದ್ದೇನೆ ಎಂದು ನನ್ನ ಕುಟುಂಬದ ಜೊತೆ ಮಾತನಾಡುವುದು ತಪ್ಪು. ಅವನಿಗೆ ಧೈರ್ಯ ಇದ್ರೆ ನಾನು ಹೊರಗೆ ಬಂದ ಮೇಲೆ ನನ್ನ ಮುಂದೆ, ತಾಕತ್ತು ಇದ್ರೆ ಮಾತನಾಡಲಿ. ನನ್ನ ಕುಟುಂಬದ ಬಗ್ಗೆ ಮಾತನಾಡಲು ಯಾರಿಗೂ ಅಧಿಕಾರ ಕೊಟ್ಟಿಲ್ಲ. ಅವನಿಗೆ ಅಂತಲ್ಲ ಯಾರಿಗೂ ಅಧಿಕಾರ ಕೊಟ್ಟಿಲ್ಲ.
ಎಲ್ಲೋ ಕುಳಿತುಕೊಂಡು ಫೋನ್ ಕಾಲ್ ಮಾಡುವುದೆಲ್ಲ ತಪ್ಪು. ಫೋನ್ ಮೂಲಕ ಮಾತನ್ನಾಡಿ ಏನೇನೋ ಸುದ್ದಿ ಹಬ್ಬಿಸುವುದು ತಪ್ಪು. ನನ್ನ ಅಭಿಮಾನಿಗಳಿಗೆ ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿ, ಪ್ರಕರಣವನ್ನು ಡೈವರ್ಟ್ ಮಾಡುವುದು ತಪ್ಪು. ಹೀಗೆಲ್ಲ ಮಾಡಿರೋದು ತಪ್ಪು ಎಂದು ದರ್ಶನ್ ಹೇಳಿದ್ದಾರೆ ಎಂದು ಝೈದ್ ಖಾನ್ ತಿಳಿಸಿದರು. ಆ ಮೂಲಕ ದರ್ಶನ್ ಜೈಲಿನಿಂದಲೇ ಧನ್ವೀರ್ಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ ಎಂಬ ವಿಚಾರವನ್ನು ಸೂಕ್ಷ್ಮವಾಗಿ ಝೈದ್ ಖಾನ್ ಹೇಳಿದ್ದಾರೆ.
ಇದೆಲ್ಲ ಕ್ರೆಡಿಟ್ ತೆಗೆದುಕೊಳ್ಳುವ ಪ್ಲಾನ್
ಮಾತು ಮುಂದುವರಿಸಿದ ಝೈದ್ ಖಾನ್.. ಈಗ ಯಾರೋ ಒಬ್ಬ ವ್ಯಕ್ತಿ ನಾನು ಮಾಡಿದೆ. ನಾನು ಸಹಾಯ ಮಾಡಿದೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾನಲ್ಲ. ಅವನಿಗೆ ಅಕ್ಕ ಅಥವಾ ದರ್ಶನ್ ಅವರು ಬಂದು ಸಹಾಯ ಮಾಡು ಎಂದು ಕೇಳಿಕೊಂಡಿದ್ರಾ?
ಅವ್ನೆ ನಾನು ಸಹಾಯ ಮಾಡುತ್ತೀನಿ ಎಂದು ಮನೆಗೆ ನುಗ್ಗಿ ಮನೆ ಹಾಳು ಕೆಲ್ಸ ಮಾಡ್ತಿದ್ದಾನೆ. ದರ್ಶನ್ ಅವರು ಹೆಂಡ್ತಿ, ಮಕ್ಕಳನ್ನು ಪ್ರೀತಿ ಮಾಡ್ತಾರೆ. ಆದರೆ ಅವರ ಕುಟುಂಬದ ಬಗ್ಗೆ ಮಾತನಾಡೋದು ಎಷ್ಟು ಸರಿ? ಕ್ರೆಡಿಟ್ ತಗೆದುಕೊಳ್ಳೋಕೆ ಇದೆಲ್ಲ ನಡೆಯುತ್ತಿದೆ. ದರ್ಶನ್ ಜೈಲಿನಿಂದಲೇ ದೂರು ದಾಖಲಿಸುವ ಚಿಂತನೆ ಇದೆ ಎಂದು ಧನ್ವೀರ್ಗೆ ಝೈದ್ ಖಾನ್ ಕೂಡ ಎಚ್ಚರಿಕೆ ನೀಡಿದ್ದಾರೆ.







