- ನವೀನ್ ಕೊಡಸೆ

ಡೇವಿಡ್ ವಾರ್ನರ್ ಆಸ್ಟ್ರೇಲಿಯಾ, ಕ್ರಿಕೆಟ್ ಜಗತ್ತಿಗೆ ಪರಿಚಯಿಸಿದ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್. ಈ ವಾಮನ ಮೂರ್ತಿ ತಂಡದ ಗೆಲುವಿಗಾಗಿ ಕೊನೆಯವರೆಗೂ ಹೋರಾಡುವ ಅಪ್ರತಿಮ ಸೇನಾನಿ. ಚುಟುಕು ಕ್ರಿಕೆಟ್‍ನ ಸಿಡಿಲಮರಿ ಡೇವಿಡ್ ವಾರ್ನರ್, ಇದೀಗ ಪಾಕ್ ವಿರುದ್ಧ ಚೊಚ್ಚಲ ತ್ರಿಶತಕ ಸಿಡಿಸಿ ಅಬ್ಬರಿಸಿದ್ದಾರೆ. ಟಿ20 ಸ್ಪೆಷಲಿಸ್ಟ್ ವಾರ್ನರ್ ಬರೋಬ್ಬರಿ 389 ಎಸೆತಗಳನ್ನು ಎದುರಿಸಿ 37 ಬೌಂಡರಿ ಸಹಿತ 300 ರನ್ ಬಾರಿಸಿದ. ಮಾತ್ರವಲ್ಲ ಕ್ರಿಕೆಟ್ ದಂತಕಥೆ ಸರ್ ಡಾನ್ ಬ್ರಾಡ್ಮನ್ ಡೆಬ್ಯೂ ಮಾಡಿದ ದಿನದಂದೇ ಅವರ [334] ಗರಿಷ್ಠ ರನ್ ದಾಖಲೆ ಹಿಂದಿಕ್ಕಿ 335* ಕುಣಿದು ಕುಪ್ಪಳಿಸಿದ. ಇಂದು ವಾರ್ನರ್’ನನ್ನು ಜಗತ್ತೇ ಕೊಂಡಾಡುತ್ತಿದೆ. ತನ್ನ ಚೊಚ್ಚಲ ತ್ರಿಶತಕವನ್ನು ವಾರ್ನರ್, ಮೈದಾನದಲ್ಲೇ ಮೃತಪಟ್ಟ ಗೆಳೆಯ ಫಿಲ್ ಹ್ಯೂಸ್’ಗೆ ಅರ್ಪಿಸಿ ಹೃದಯಶ್ರೀಮಂತಿಕೆ ಮೆರೆದಿದ್ದಾನೆ.

ಹೇಗಿದ್ದ ವಾರ್ನರ್ ಹೇಗಾದ ಗೊತ್ತಾ..?

ಆಸ್ಟ್ರೇಲಿಯಾದ 132 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಆಡದೇ ರಾಷ್ಟ್ರೀಯ ತಂಡದಲ್ಲಿ ಸ್ಥಾನಗಿಟ್ಟಿಸಿದ ಏಕೈಕ ಪ್ರತಿಭಾವಂತ ಡೇವಿಡ್ ವಾರ್ನರ್. 2009ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ್ದಾಗ, ಬಹುಶಃ ಯಾರೊಬ್ಬರೂ ನಿರೀಕ್ಷಿಸಿರಲಿಕ್ಕಿಲ್ಲ, ಈತ ಗಿಲ್‍ಕ್ರಿಸ್ಟ್, ಹೇಡನ್ ಅವರಂತಹ ದಿಗ್ಗಜರ ಸಾಲು ಸೇರುತ್ತಾನೆಂದು. 5 ಅಡಿ 7 ಇಂಚು ಎತ್ತರದ ವಾರ್ನರ್ ಆಧುನಿಕ ಕ್ರಿಕೆಟ್‍ನ ಮೋಸ್ಟ್ ಡೇಂಜರಸ್ ಓಪನರ್ ಆಗಿ ಬೆಳೆದು ನಿಂತದ್ದು, ಕಳೆದ 10 ವರ್ಷಗಳಲ್ಲಿ ನಮ್ಮ ಕಣ್ಣು ಮುಂದೆಯೇ ನಡೆದ ಅಚ್ಚರಿ.

ಅವಮಾನ ಎದುರಿಸಿ ಗೆದ್ದ ಸಿಡ್ನಿ ಡ್ಯಾಷರ್:

ಆಸೀಸ್ ಆಟಗಾರರು ಒರಟು ಸ್ವಭಾವದವರು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆದರೆ ದಕ್ಷಿಣ ಆಫ್ರಿಕಾ ಎದುರು 2018ರ ಕೇಪ್ ಟೌನ್ ಟೆಸ್ಟ್ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ಮಾಡಿದ ತಪ್ಪಿಗಾಗಿ ನಿಷೇಧಕ್ಕೊಳಗಾದಾಗ ಸ್ಮಿತ್, ವಾರ್ನರ್ ಮಾಧ್ಯಮದೆದುರು ಬಿಕ್ಕಿಬಿಕ್ಕಿ ಅತ್ತಿದ್ದರು. ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಆಸೀಸ್ ನಾಯಕ ಸ್ಟೀವ್ ಸ್ಮಿತ್ ಹಾಗೂ ಉಪನಾಯಕ ಡೇವಿಡ್ ವಾರ್ನರ್ ಅವರನ್ನು ಒಂದು ವರ್ಷ ಬ್ಯಾನ್ ಮಾಡಿದರೆ, ಕ್ಯಾಮರೋನ್ ಬೆನ್’ಕ್ರಾಪ್ಟ್ ಅವರನ್ನು 9 ತಿಂಗಳು ಕ್ರಿಕೆಟ್ ಚಟುವಟಿಕೆಯಿಂದ ನಿಷೇಧಿಸಲಾಯಿತು. ಗಾಯದ ಮೇಲೆ ಬರೆ ಎಳೆದಂತೆ ವಾರ್ನರ್ ಪತ್ನಿ ಕ್ಯಾಂಡೈಸ್ ಗರ್ಭಪಾತಕ್ಕೆ ಒಳಗಾದರು. ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದ ವಾರ್ನರ್’ಗೆ ಇದು ಅರಗಿಸಿಕೊಳ್ಳಲಾರದ ಶಾಕ್ ಆಗಿತ್ತು.  ಕ್ರಿಕೆಟ್ ತನ್ನ ಉಸಿರೆಂದು ಭಾವಿಸಿದ್ದ ವಾರ್ನರ್ ಆ ಕ್ಷಣ ಬಿಕ್ಕಿ ಬಿಕ್ಕಿ ಅತ್ತಿದ್ದರು. ಇದರ ಬೆನ್ನಲ್ಲೇ 2018ರ ಐಪಿಎಲ್’ನಿಂದಲೂ ವಾರ್ನರ್’ಗೆ ಗೇಟ್ ಪಾಸ್ ನೀಡಲಾಯಿತು. ಇದಾಗಿ ಎರಡು ತಿಂಗಳಲ್ಲೇ ಈ ನೋವಿನಿಂದ ಹೊರಬರಲು ಕ್ಲಬ್ ಕ್ರಿಕೆಟ್ ಆಡಲು ಹೋದರೆ ಅಲ್ಲೂ ತನ್ನವರಿಂದಲೇ ಸ್ಲೆಂಡ್ಜಿಂಗ್ ಎದುರಿಸಬೇಕಾಯಿತು. ಯಾರು ತನ್ನ ಜೀವಮಾನದ ಗೆಳೆಯ ಎಂದು ಭಾವಿಸಿದ್ದ ಫಿಲ್ ಹ್ಯೂಸ್ ಸಹೋದರ ಜೇಸನ್ ಹ್ಯೂಸ್’ನಿಂದಲೇ ಅವಮಾನ ಎದುರಿಸಬೇಕಾಯಿತು. ಆ ಕ್ಷಣಕ್ಕೆ ಮೈದಾನ ತೊರೆದರೂ, ನಂತರ ಬ್ಯಾಟಿಂಗ್ ಇಳಿದು ಭರ್ಜರಿ ಶತಕ ಸಿಡಿಸಿ ತನ್ನ ಬ್ಯಾಟಿಂಗ್ ವೈಭವ ತೋರಿದ.

ಪದೇ-ಪದೇ ಅವಮಾನ ಎದುರಾದರೂ ವಾರ್ನರ್ ಕುಗ್ಗಲಿಲ್ಲ, ಮತ್ತಷ್ಟು ಗಟ್ಟಿಯಾದ. ಮನಸ್ಸು ಮತ್ತಷ್ಟು ದೃಢ ಮಾಡಿಕೊಂಡ. 2019ರ ಐಪಿಎಲ್’ನಲ್ಲಿ ಸ್ಫರ್ಧಾತ್ಮಕ ಕ್ರಿಕೆಟ್’ಗೆ ಕಮ್ ಬ್ಯಾಕ್ ಮಾಡಿದ ವಾರ್ನರ್ ಹಿಂತಿರುಗಿ ನೋಡಲಿಲ್ಲ. ಮೊದಲ ಪಂದ್ಯದಲ್ಲೇ ಕೆಕೆಆರ್ ವಿರುದ್ಧ 53 ಎಸೆತಗಳಲ್ಲಿ 85 ರನ್ ಚಚ್ಚಿದ ವಾರ್ನರ್ ಕೇವಲ 12 ಪಂದ್ಯಗಳನ್ನಾಡಿ 692 ರನ್ ಕಲೆಹಾಕುವ ಮೂಲಕ ಟೂರ್ನಿಯ ಗರಿಷ್ಠ ರನ್ ಸರದಾರನಾಗಿ ಹೊರಹೊಮ್ಮಿದ. ಇನ್ನು 2019ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ 647 ರನ್ ಬಾರಿಸುವ ಮೂಲಕ ಎರಡನೇ ಗರಿಷ್ಠ ಬಾರಿಸಿದ[ರೋಹಿತ್ ಶರ್ಮಾ’ಗಿಂತ ಒಂದು ರನ್ ಕಡಿಮೆ] ಆಟಗಾರನಾಗಿ ಹೊರಹೊಮ್ಮಿದ. 

ವಿಶ್ವಕಪ್ ಮುಗಿದ ಬೆನ್ನಲ್ಲೇ ಇಂಗ್ಲೆಂಡ್’ನಲ್ಲಿ ನಡೆದ ಆ್ಯಷಸ್ ಸರಣಿಯಲ್ಲಿ ಡೇವಿಡ್ ವಾರ್ನರ್ ಹಿಂದೆಂದು ಕಂಡು ಕೇಳರಿಯದ ರೀತಿಯಲ್ಲಿ ವಿಫಲವಾಗಿದ್ದು ಬಿಟ್ಟರೆ[10 ಇನಿಂಗ್ಸ್ 95 ರನ್], ಉಳಿದಂತೆ ವಾರ್ನರ್ ಎಲ್ಲೂ ಅಷ್ಟು ಸುಲಭವಾಗಿ ವಿಕೆಟ್ ಕೈಚೆಲ್ಲಿಲ್ಲ. ಆದರೀಗ ಪಾಕಿಸ್ತಾನ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಹಾಗೂ ಎರಡನೇ ಟೆಸ್ಟ್ ಪಂದ್ಯದಲ್ಲಿ ತ್ರಿಶತಕ ಸಿಡಿಸಿ, ತಾನೊಬ್ಬ ಚಾಂಪಿಯನ್ ಕ್ರಿಕೆಟಿಗ ಎನ್ನುವುದು ಜಿಗಿದು ಇಡೀ ಜಗತ್ತಿಗೆ ಸಾರಿ ಹೇಳಿದ್ದಾನೆ ಡೇವಿಡ್ ವಾರ್ನರ್..