Asianet Suvarna News Asianet Suvarna News

Aus vs SA: ಸಿಡ್ನಿ ಟೆಸ್ಟ್‌ ಡ್ರಾನಲ್ಲಿ ಅಂತ್ಯ; ಭಾರತ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೇರುವ ಕನಸು ಜೀವಂತ

ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯಾ ನಡುವಿನ ಸಿಡ್ನಿ ಟೆಸ್ಟ್ ಡ್ರಾನಲ್ಲಿ ಅಂತ್ಯ
ಟೀಂ ಇಂಡಿಯಾಗೆ ಮತ್ತಷ್ಟು ವರವಾದ ಈ ಫಲಿತಾಂಶ
ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲೇ ಮುಂದುವರೆದ ಭಾರತ

Australia vs South Africa Sydney Test Drawn Team India World Test Championship Final hope keep alive kvn
Author
First Published Jan 8, 2023, 4:05 PM IST | Last Updated Jan 8, 2023, 4:05 PM IST

ಸಿಡ್ನಿ(ಜ.08): ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯವು ಡ್ರಾನಲ್ಲಿ ಅಂತ್ಯವಾಗಿದೆ. ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ಹರಿಣಗಳನ್ನು ಬೇಟೆಯಾಡಬೇಕೆಂದಿದ್ದ ಕಾಂಗರೂ ಪಡೆಗೆ ನಿರಾಸೆ ಎದುರಾಗಿದೆ. ಇನ್ನು ಇದೇ ವೇಳೆ ಟೀಂ ಇಂಡಿಯಾ, ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಸತತ ಎರಡನೇ ಬಾರಿಗೆ ಫೈನಲ್‌ಗೇರುವ ಕನಸಿಗೆ ಮತ್ತಷ್ಟು ಜೀವ ಬಂದಂತೆ ಆಗಿದೆ.

ಹೌದು, ದಕ್ಷಿಣ ಆಫ್ರಿಕಾ ಎದುರು ತವರಿನಲ್ಲಿ ಮೊದಲೆರಡು ಟೆಸ್ಟ್ ಪಂದ್ಯಗಳನ್ನು ಗೆಲ್ಲುವ ಮೂಲಕ 2-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿದ್ದ ಆಸ್ಟ್ರೇಲಿಯಾ, ಸರಣಿ ಕ್ಲೀನ್‌ ಸ್ವೀಪ್ ಮಾಡುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದಿತ್ತು. ಆದರೆ ಸಿಡ್ನಿ ಟೆಸ್ಟ್‌ ಪಂದ್ಯಕ್ಕೆ ಮೂರನೇ ದಿನ ಮಳೆ ಅಡ್ಡಿ ಪಡಿಸಿದ್ದರಿಂದ, ಸರಣಿ ವೈಟ್‌ವಾಶ್ ಮಾಡುವ ಕಾಂಗರೂ ಪಡೆಯ ಕನಸಿನ ನಾಗಾಲೋಟಕ್ಕೆ ಬ್ರೇಕ್ ಬಿದ್ದಿತ್ತು. ಕೊನೆಯ ಟೆಸ್ಟ್ ಪಂದ್ಯವನ್ನು ಜಯಿಸಿ ಭಾರತ ಪ್ರವಾಸ ಮಾಡಬೇಕೆಂದಿದ್ದ ಪ್ಯಾಟ್ ಕಮಿನ್ಸ್‌ ನೇತೃತ್ವದ ಆಸ್ಟ್ರೇಲಿಯಾ ತಂಡಕ್ಕೆ ಕೊಂಚ ಹಿನ್ನಡೆಯಾಗಿದೆ.

ಸದ್ಯ ಪ್ಯಾಟ್ ಕಮಿನ್ಸ್‌ ನೇತೃತ್ವದ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು, ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿ ಮುಕ್ತಾಯದ ಬಳಿಕವೂ ಅಂಕಪಟ್ಟಿಯಲ್ಲಿ 75.56% ಅಂಕಗಳನ್ನು ಕಾಯ್ದುಕೊಳ್ಳುವ ಮೂಲಕ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಇನ್ನು ಮೂರನೇ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯವಾಗಿರುವುದರಿಂದ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೇರುವ ಆಸೆಗೆ ಮತ್ತಷ್ಟು ಜೀವ ಬರುವಂತೆ ಮಾಡಿದೆ. ಭಾರತ ಸದ್ಯ 58.93% ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿದ್ದು, ಶ್ರೀಲಂಕಾ 53.33% ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಸೂರ್ಯಕುಮಾರ್ ಯಾದವ್ ಚಿಕ್ಕವನಿದ್ದಾಗ ನನ್ನ ಬ್ಯಾಟಿಂಗ್ ನೋಡಿಲ್ಲ ಅನ್ಸತ್ತೆ: ರಾಹುಲ್ ದ್ರಾವಿಡ್

ಇನ್ನು ದಕ್ಷಿಣ ಆಫ್ರಿಕಾ ತಂಡವು ಸತತ ಎರಡು ಸೋಲು ಹಾಗೂ ಒಂದು ಡ್ರಾನೊಂದಿಗೆ 4ನೇ ಸ್ಥಾನದಲ್ಲಿಯೇ ಉಳಿದುಕೊಂಡಿದ್ದು, ಸದ್ಯ ಹರಿಣಗಳ ಪಡೆ 48.72% ಅಂಕಗಳೊಂದಿಗೆ ಅಂಕಗಳಿಸಿದ್ದು, ತವರಿನಲ್ಲಿ ನಡೆಯಲಿರುವ ವೆಸ್ಟ್‌ ಇಂಡೀಸ್ ಎದುರು 2 ಪಂದ್ಯಗಳ ಟೆಸ್ಟ್‌ ಸರಣಿ ಹರಿಣಗಳ ಪಡೆಗೆ ಸಾಕಷ್ಟು ಮಹತ್ವದ್ದೆನಿಸಿಕೊಂಡಿದೆ.

ಇನ್ನು ಟೀಂ ಇಂಡಿಯಾ ತವರಿನಲ್ಲಿ ಆಸ್ಟ್ರೇಲಿಯಾ ಎದುರು 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನಾಡಲಿದ್ದು, ಈ ಸರಣಿಯನ್ನು ಟೀಂ ಇಂಡಿಯಾ ಒಂದಕ್ಕಿಂತ ಹೆಚ್ಚು ಪಂದ್ಯವನ್ನು ಸೋಲದೇ 3-1, 2-1 ಅಂತರದಲ್ಲಿ ಜಯಿಸಿದರೆ ಸಾಕು, ಅನಾಯಾಸವಾಗಿ ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೇರಲಿದೆ. 

ಸಿಡ್ನಿ ಟೆಸ್ಟ್‌ ಡ್ರಾನಲ್ಲಿ ಅಂತ್ಯ: ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಉಸ್ಮಾನ್ ಖವಾಜಾ(195*) ಹಾಗೂ ಸ್ಟೀವ್ ಸ್ಮಿತ್ ಬಾರಿಸಿದ ಆಕರ್ಷಕ ಶತಕಗಳ ನೆರವಿನಿಂದ 475/4 ರನ್ ಬಾರಿಸಿ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿತ್ತು. ಇನ್ನು ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವು 255 ರನ್‌ಗಳಿಗೆ ಸರ್ವಪತನ ಕಂಡಿತು. ಇದರ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ಮೇಲೆ ಆಸ್ಟ್ರೇಲಿಯಾ ತಂಡವು ಫಾಲೋ ಆನ್ ಹೇರಿತು. ಇನ್ನು ಎರಡನೇ ಇನಿಂಗ್ಸ್‌ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡವು 5ನೇ ದಿನದಾಟದಂತ್ಯದ ವೇಳೆಗೆ 2 ವಿಕೆಟ್‌ ಕಳೆದುಕೊಂಡು 106 ರನ್‌ಗಳಿಸಿತು. ಹೀಗಾಗಿ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು.

Latest Videos
Follow Us:
Download App:
  • android
  • ios