ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ ಆ್ಯರೋನ್ ಫಿಂಚ್ಆಸ್ಟ್ರೇಲಿಯಾಗೆ ಚೊಚ್ಚಲ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ಫಿಂಚ್ಸ್ಪೋಟಕ ಬ್ಯಾಟಿಂಗ್ ಮೂಲಕವೇ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಓಪನರ್

ಮೆಲ್ಬೊರ್ನ್‌(ಫೆ.07): ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಆ್ಯರೋನ್ ಫಿಂಚ್, ಇದೀಗ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಈಗಾಗಲೇ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದ, ಫಿಂಚ್, ಇದೀಗ ಚುಟುಕು ಕ್ರಿಕೆಟ್‌ ಬದುಕಿಗೂ ವಿದಾಯ ಘೋಷಿಸಿದ್ದಾರೆ. ನಾಯಕನಾಗಿ ಆ್ಯರೋನ್ ಫಿಂಚ್ ದಾಖಲೆಯ 76 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದರು.

2021ರಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆ್ಯರೋನ್ ಫಿಂಚ್ ನೇತೃತ್ವದ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಮೂಲಕ ಕಾಂಗರೂ ಪಡೆಯು ಮೊದಲ ಬಾರಿಗೆ ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಕಳೆದ ವರ್ಷ ತವರಿನಲ್ಲೇ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮತ್ತೊಮ್ಮೆ ಕಪ್‌ ಗೆಲ್ಲುವ ಅವಕಾಶವನ್ನು ಫಿಂಚ್ ಪಡೆ ಕೈಚೆಲ್ಲಿತ್ತು.

36 ವರ್ಷದ ಅಗ್ರಕ್ರಮಾಂಕದ ಬ್ಯಾಟರ್‌ ಫಿಂಚ್‌, ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರು ಹೌದು. 2015ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವು ಚಾಂಪಿಯನ್ ಪಟ್ಟಕ್ಕೇರುವಲ್ಲಿ ಫಿಂಚ್ ಕೂಡಾ ಮಹತ್ತರ ಪಾತ್ರವನ್ನು ನಿಭಾಯಿಸಿದ್ದರು. ಇನ್ನು ಇದಷ್ಟೇ ಅಲ್ಲದೇ ಫಿಂಚ್, ತಮ್ಮ 12 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕಿನಲ್ಲಿ 5 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ದಕ್ಕಿದಷ್ಟು ಯಶಸ್ಸು, ಟೆಸ್ಟ್‌ ಕ್ರಿಕೆಟ್‌ನಲ್ಲಿ ಫಿಂಚ್‌ಗೆ ಸಿಕ್ಕಿರಲಿಲ್ಲ.

Scroll to load tweet…

"ನಾನು 2024ರಲ್ಲಿ ನಡೆಯಲಿರುವ ಮುಂದಿನ ಐಸಿಸಿ ಟಿ20 ವಿಶ್ವಕಪ್ ಆಡುವುದಿಲ್ಲ ಎನ್ನುವುದನ್ನು ಅರ್ಥಮಾಡಿಕೊಂಡಿದ್ದೇನೆ. ಹೀಗಾಗಿ ನಾನು ತಂಡದಿಂದ ಕೆಳಗಿಳಿಯಲು ಇದು ಸರಿಯಾದವೆಂದು ತಿಳಿದುಕೊಂಡಿದ್ದೇನೆ. ಇದರಿಂದ ತಂಡವು ಹೊಸ ಯೋಜನೆಯೊಂದಿಗೆ ಮುಂಬರುವ ಟೂರ್ನಿಗೆ ಬಲಿಷ್ಠ ತಂಡ ಕಟ್ಟಲು ನೆರವಾಗಲಿದೆ ಎಂದು ಭಾವಿಸಿದ್ದೇನೆ ಎಂದು ಮೆಲ್ಬೊರ್ನ್ ಕ್ರಿಕೆಟ್ ಮೈದಾನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಆ್ಯರೋನ್ ಫಿಂಚ್ ತಿಳಿಸಿದ್ದಾರೆ.

Big Bash League: 5ನೇ ಬಾರಿಗೆ ಕಪ್ ಮುಡಿಗೇರಿಸಿಕೊಂಡ ಪರ್ತ್‌ ಸ್ಕಾರ್ಚರ್ಸ್‌..!

ಆ್ಯರೋನ್ ಫಿಂಚ್, ಕಳೆದ ಅಕ್ಟೋಬರ್‌ನಲ್ಲಿ ಏಕದಿನ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇದಾದ ಬಳಿಕ ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್ ತಂಡದ ನಾಯಕರಾಗಿ ವೇಗಿ ಪ್ಯಾಟ್ ಕಮಿನ್ಸ್ ಅವರನ್ನು ನೇಮಕ ಮಾಡಲಾಗಿತ್ತು. ಪ್ಯಾಟ್ ಕಮಿನ್ಸ್‌ ಈಗಾಗಲೇ ಆಸ್ಟ್ರೇಲಿಯಾ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ತಂಡವನ್ನು ನಾಯಕರಾಗಿ ಮುನ್ನಡೆಸುತ್ತಿದ್ದಾರೆ. ಇದೀಗ ಆ್ಯರೋನ್ ಫಿಂಚ್, ಟಿ20 ನಾಯಕತ್ವದಿಂದ ಕೆಳಗಿಳಿದಿರುವುದರಿಂದ, ಚುಟುಕು ಕ್ರಿಕೆಟ್ ಮಾದರಿಯ ತಂಡಕ್ಕೆ ಯಾರಿಗೆ ನಾಯಕ ಪಟ್ಟ ಕಟ್ಟಲಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

Scroll to load tweet…

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡವು ಏಕದಿನ ಕ್ರಿಕೆಟ್‌ನಲ್ಲಿ ತನ್ನದೇ ಆದ ಪ್ರಾಬಲ್ಯವನ್ನು ಹೊಂದಿದ್ದು, ಕಳೆದ 6 ಏಕದಿನ ವಿಶ್ವಕಪ್‌ಗಳ ಪೈಕಿ 4 ಬಾರಿ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆದರೆ ಏಕದಿನ ಕ್ರಿಕೆಟ್‌ನಲ್ಲಿ ಸಿಕ್ಕಷ್ಟು ಯಶಸ್ಸು, ಕಾಂಗರೂ ಪಡೆಗೆ ಟಿ20 ಸಿಕ್ಕಿರಲಿಲ್ಲ. ಆದರೆ ಆ್ಯರೋನ್ ಫಿಂಚ್, ಆಸೀಸ್ ಸೀಮಿತ ಓವರ್‌ಗಳ ತಂಡದ ನಾಯಕರಾದ ಬಳಿಕ ಯುಎಇನಲ್ಲಿ 2021ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ತಂಡವನ್ನು ಮೊದಲ ಬಾರಿಗೆ ಚಾಂಪಿಯನ್‌ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು.

Scroll to load tweet…

ಆ್ಯರೋನ್ ಫಿಂಚ್, ಆಸ್ಟ್ರೇಲಿಯಾ ಪರ 5 ಟೆಸ್ಟ್, 146 ಏಕದಿನ ಹಾಗೂ 103 ಟಿ20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 618, 6,162 ಹಾಗೂ 2,189 ರನ್ ಬಾರಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ವೈಯುಕ್ತಿಕ ಸ್ಕೋರ್(172) ಬಾರಿಸಿದ ವಿಶ್ವದಾಖಲೆ ಫಿಂಚ್ ಹೆಸರಿನಲ್ಲಿದೆ. 2018ರಲ್ಲಿ ಹರಾರೆಯಲ್ಲಿ ಜಿಂಬಾಬ್ವೆ ವಿರುದ್ದ ನಡೆದ ಪಂದ್ಯದಲ್ಲಿ ಫಿಂಚ್ ಈ ಸಾಧನೆ ಮಾಡಿದ್ದರು.