* ಆಸ್ಟ್ರೇಲಿಯಾ ಎದುರು ಸೆಪ್ಟೆಂಬರ್‌ನಲ್ಲಿ 3 ಪಂದ್ಯಗಳ ಟಿ20 ಸರಣಿಯನ್ನಾಡಲಿರುವ ಭಾರತ* ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಸಿದ್ದತೆ ನಡೆಸಲು ಈ ಸರಣಿ ಆಯೋಜನೆ* ಇನ್ನು 2023ರ ಫೆಬ್ರವರಿ-ಮಾರ್ಚ್‌ನಲ್ಲಿ 4 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ ಟೀಂ ಇಂಡಿಯಾ
ನವದೆಹಲಿ(ಮೇ.11): ಅಕ್ಟೋಬರ್-ನವೆಂಬರ್‌ನಲ್ಲಿ ನಿಗದಿಯಾಗಿರುವ 8ನೇ ಆವೃತ್ತಿಯ ಟಿ20 ವಿಶ್ವಕಪ್‌ಗೂ ಮುನ್ನ ತವರಿನಲ್ಲಿ ಭಾರತ ತಂಡ ಆಸ್ಪ್ರೇಲಿಯಾ ವಿರುದ್ಧ 3 ಟಿ20 ಪಂದ್ಯಗಳ ಸರಣಿ ಆಡಲಿದೆ. ಮಂಗಳವಾರ ಪ್ರಕಟಗೊಂಡ ಆಸ್ಪ್ರೇಲಿಯಾದ ಮುಂದಿನ ಕ್ರಿಕೆಟ್ ಸರಣಿಗಳ ವೇಳಾ ಪಟ್ಟಿಪ್ರಕಾರ, ಆಸೀಸ್ ಸೆಪ್ಟಂಬರ್‌ನಲ್ಲಿ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದ್ದು, 3 ಟಿ20 ಪಂದ್ಯಗಳನ್ನಾಡಲಿದೆ.
ಬಳಿಕ ಕೆಲ ದಿನಗಳಲ್ಲೇ ಅಸ್ಟ್ರೇಲಿಯಾದಲ್ಲಿ ಐಸಿಸಿ ಟಿ20 ವಿಶ್ವಕಪ್ ನಡೆಯಲಿರುವುದರಿಂದ ಉಭಯ ತಂಡಗಳಿಗೂ ಇದು ಮಹತ್ವದ ಸರಣಿ ಎನಿಸಿಕೊಂಡಿದೆ. ನಂತರ 2023ರಲ್ಲಿ ಆಸೀಸ್ ತಂಡ ಮತ್ತೊಮ್ಮೆ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದ್ದು, ಫೆಬ್ರವರಿ-ಮಾರ್ಚ್‌ನಲ್ಲಿ 4 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ ಎಂದು ವರದಿಯಾಗಿದೆ. 2021-23ರ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ದ 4 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ.
2021ರ ಜನವರಿಯಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು 2-1 ಅಂತರದಲ್ಲಿ ತನ್ನದಾಗಿಸಿಕೊಂಡಿದೆ. ಅಡಿಲೇಡ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಭಾರತ ತಂಡವು, ಇದಾದ ಬಳಿಕ ವಿರಾಟ್ ಕೊಹ್ಲಿ ಅನುಪಸ್ಥಿತಿಯ ಹೊರತಾಗಿಯೂ ಅದ್ಭುತ ಪ್ರದರ್ಶನ ತೋರುವ 2-1 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಕೈವಶ ಮಾಡಿಕೊಂಡಿತ್ತು. ಈ ಮೂಲಕ ಆಸ್ಟ್ರೇಲಿಯಾ ನೆಲದಲ್ಲಿ ಸತತ ಎರಡು ಬಾರಿ ಟೆಸ್ಟ್ ಸರಣಿ ಗೆದ್ದ ಏಷ್ಯಾದ ಮೊದಲ ತಂಡ ಎನ್ನುವ ಹೆಗ್ಗಳಿಕೆಗೆ ಟೀಂ ಇಂಡಿಯಾ ಪಾತ್ರವಾಗಿತ್ತು.
ಇದೀಗ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು ಮುಂದಿನ ವರ್ಷ ಭಾರತ ಎದುರು ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ. ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು 8 ಪಂದ್ಯಗಳಲ್ಲಿ 5 ಗೆಲುವು ಹಾಗೂ 3 ಡ್ರಾ ಸಾಧಿಸಿದ್ದು, ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ಫೈನಲ್‌ಗೇರಲು ಎದುರು ನೋಡುತ್ತಿದೆ.
ಇನ್ನೊಂದೆಡೆ ಟೀಂ ಇಂಡಿಯಾ, ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 11 ಪಂದ್ಯಗಳನ್ನಾಡಿದ್ದು, 6 ಗೆಲುವು, ಮೂರು ಸೋಲು ಹಾಗೂ 2 ಡ್ರಾನೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಫೈನಲ್‌ಗೇರಿತ್ತಾದರೂ, ಪ್ರಶಸ್ತಿ ಸುತ್ತಿನಲ್ಲಿ ನ್ಯೂಜಿಲೆಂಡ್‌ಗೆ ಶರಣಾಗಿತ್ತು. ಇದೀಗ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಯಾವ ರೀತಿಯ ಪ್ರದರ್ಶನ ನೀಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಸದ್ಯ ನಡೆಯುತ್ತಿರುವ ಐಪಿಎಲ್ ಬಳಿಕ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಜೂನ್ 9ರಿಂದ 19ರ ವರೆಗೆ ತವರಿನಲ್ಲಿ 5 ಪಂದ್ಯಗಳ ಟಿ20 ಸರಣಿ ಆಡಲಿದ್ದು, ಬಳಿಕ 2 ಪಂದ್ಯಗಳ ಟಿ20 ಸರಣಿಗಾಗಿ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಬಳಿಕ ಜುಲೈ 1ರಿಂದ ಇಂಗ್ಲೆಂಡ್ ವಿರುದ್ಧ ಮರು ನಿಗದಿಯಾಗಿರುವ ಏಕೈಕ ಟೆಸ್ಟ್ ಮತ್ತು 3 ಟಿ20, 3 ಏಕದಿನ ಪಂದ್ಯಗಳನ್ನು ಆಡಬೇಕಿದೆ.
