ವೆಸ್ಟ್‌ಇಂಡೀಸ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ 159 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿದ್ದ ಆಸೀಸ್‌, ಎರಡನೇ ಇನ್ನಿಂಗ್ಸ್‌ನಲ್ಲಿ ಚೇತರಿಸಿಕೊಂಡು 310 ರನ್‌ಗಳಿಸಿತು. 301 ರನ್‌ಗಳ ಗುರಿ ಬೆನ್ನಟ್ಟಿದ ವಿಂಡೀಸ್ 141ಕ್ಕೆ ಆಲೌಟ್ ಆಯಿತು.

ಬ್ರಿಡ್ಜ್‌ಟೌನ್‌(ಬಾರ್ಬಡೊಸ್‌): ವೆಸ್ಟ್‌ಇಂಡೀಸ್‌ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು 159 ರನ್‌ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 180ಕ್ಕೆ ಸರ್ವಪತನ ಕಂಡಿದ್ದು, ವೆಸ್ಟ್ ಇಂಡೀಸ್ 190 ರನ್‌ ಗಳಿಸಿ 10 ರನ್‌ಗಳ ಅಲ್ಪ ಮುನ್ನಡೆ ಸಾಧಿಸಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಆಸೀಸ್ 310 ರನ್‌ ಕಲೆಹಾಕಿತು. 65 ರನ್‌ಗೆ 4 ವಿಕೆಟ್‌ ಕಳೆದುಕೊಂಡಿದ್ದ ತಂಡವನ್ನು ಟ್ರ್ಯಾವಿಸ್‌ ಹೆಡ್‌(61), ಅಲೆಕ್ಸ್‌ ಕೇರಿ(65), ವೆಬ್‌ಸ್ಟರ್‌(63) ಮೇಲೆತ್ತಿದರು. ಶಾಮರ್‌ ಜೋಸೆಫ್‌ 5 ವಿಕೆಟ್‌ ಕಿತ್ತರು. 

301 ರನ್‌ ಗುರಿ ಪಡೆದ ವಿಂಡೀಸ್‌ 33.4 ಓವರ್‌ಗಳಲ್ಲಿ 141 ರನ್‌ಗೆ ಆಲೌಟಾಯಿತು. 86 ರನ್‌ಗೆ 8 ವಿಕೆಟ್‌ ಕಳೆದುಕೊಂಡರೂ ಶಾಮರ್‌ ಜೋಸೆಫ್‌ 44, ಜಸ್ಟಿನ್‌ ಗ್ರೀವ್ಸ್‌ ಔಟಾಗದೆ 38 ರನ್‌ ಗಳಿಸಿ ಸೋಲಿನ ಅಂತರ ತಗ್ಗಿಸಿದರು. ಜೋಶ್‌ ಹೇಜಲ್‌ವುಡ್‌ 3 ವಿಕೆಟ್‌ ಕಿತ್ತರು. ಜು.3ಕ್ಕೆ 2ನೇ ಟೆಸ್ಟ್‌ ಆರಂಭವಾಗಲಿದೆ.

ಟೆಸ್ಟ್‌: ಬಾಂಗ್ಲಾ ವಿರುದ್ಧ ಸರಣಿ ಗೆದ್ದ ಶ್ರೀಲಂಕಾ

ಕೊಲಂಬೊ: ಬಾಂಗ್ಲಾದೇಶ ವಿರುದ್ಧ 2ನೇ ಟೆಸ್ಟ್‌ ಪಂದ್ಯದಲ್ಲಿ ಶ್ರೀಲಂಕಾ ಇನ್ನಿಂಗ್ಸ್‌ ಹಾಗೂ 78 ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಇದರೊಂದಿಗೆ 2 ಪಂದ್ಯಗಳ ಸರಣಿಯನ್ನು ಆತಿಥೇಯ ತಂಡ 1-0 ಅಂತರದಲ್ಲಿ ಕೈವಶಪಡಿಸಿಕೊಂಡಿತು. ಮೊದಲ ಪಂದ್ಯ ಡ್ರಾಗೊಂಡಿತ್ತು.

ಬಾಂಗ್ಲಾ ಮೊದಲ ಇನ್ನಿಂಗ್ಸ್‌ನಲ್ಲಿ 247 ರನ್‌ ಗಳಿಸಿದ್ದರೆ, ಲಂಕಾ 458 ರನ್‌ ಕಲೆಹಾಕಿ ದೊಡ್ಡ ಮುನ್ನಡೆ ಪಡೆದಿತ್ತು. 2ನೇ ಇನ್ನಿಂಗ್ಸ್‌ನಲ್ಲೂ ಬ್ಯಾಟಿಂಗ್‌ ವೈಫಲ್ಯಕ್ಕೆ ತುತ್ತಾದ ಬಾಂಗ್ಲಾ 3ನೇ ದಿನದಂತ್ಯಕ್ಕೆ 6 ವಿಕೆಟ್‌ ನಷ್ಟದಲ್ಲಿ 115 ರನ್‌ ಗಳಿಸಿತ್ತು. 4ನೇ ದಿನವಾದ ಶನಿವಾರ ತಂಡ 133 ರನ್‌ಗೆ ಆಲೌಟಾಯಿತು. ತಂಡ ಕೊನೆ 33 ರನ್‌ಗೆ 6 ವಿಕೆಟ್‌ ಕಳೆದುಕೊಂಡಿತು. ಸ್ಪಿನ್ನರ್‌ ಪ್ರಭಾತ್‌ ಜಯಸೂರ್ಯ ಟೆಸ್ಟ್‌ನಲ್ಲಿ 12ನೇ ಬಾರಿ 5 ವಿಕೆಟ್‌ ಗೊಂಚಲು ಪಡೆದು ಲಂಕಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಉಭಯ ತಂಡಗಳ ನಡುವಿನ 3 ಪಂದ್ಯಗಳ ಏಕದಿನ ಸರಣಿ ಜು.2ಕ್ಕೆ ಆರಂಭಗೊಳ್ಳಲಿದೆ.

ಜಿಂಬಾಬ್ವೆ ಟೆಸ್ಟ್‌: 1ನೇ ದಿನ ದ.ಆಫ್ರಿಕಾ 418/9

ಬುಲವಾಯೊ: ಜಿಂಬಾಬ್ವೆ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದಲ್ಲಿ ಹಾಲಿ ವಿಶ್ವ ಚಾಂಪಿಯನ್‌ ದಕ್ಷಿಣ ಆಫ್ರಿಕಾ ಉತ್ತಮ ಮೊತ್ತ ಕಲೆಹಾಕಿದೆ. ಮೊದಲ ದಿನ ತಂಡ 9 ವಿಕೆಟ್‌ಗೆ 418 ರನ್‌ ಗಳಿಸಿತು.

55 ರನ್‌ಗೆ 4 ವಿಕೆಟ್‌ ಕಳೆದುಕೊಂಡಿದ್ದ ತಂಡಕ್ಕೆ ಲುವಾನ್‌ ಡ್ರೆ ಪ್ರಿಟೋರಿಯಸ್‌ ಆಸರೆಯಾದರು. ಚೊಚ್ಚಲ ಪಂದ್ಯದಲ್ಲೇ ಅಬ್ಬರಿಸಿದ 19 ವರ್ಷದ ಪ್ರಿಟೋರಿಯಸ್ 160 ಎಸೆತಕ್ಕೆ 153 ರನ್‌ ಗಳಿಸಿದರು. ಈ ಮೂಲಕ ಟೆಸ್ಟ್‌ನಲ್ಲಿ 150+ ರನ್‌ ಗಳಿಸಿದ ಅತಿ ಕಿರಿಯ ಆಟಗಾರ ಎನಿಸಿಕೊಂಡರು. ಡೆವಾಲ್ಡ್‌ ಬ್ರೆವಿಸ್‌ 51, ಕಾರ್ಬಿನ್‌ ಬಾಶ್‌ ಔಟಾಗದೆ 100 ರನ್‌ ಗಳಿಸಿದ್ದಾರೆ.

ಅಭ್ಯಾಸಕ್ಕೆ ಮರಳಿದ ಬುಮ್ರಾ, ಪ್ರಸಿದ್ಧ್‌ ಕೃಷ್ಣ

ಬರ್ಮಿಂಗ್‌ಹ್ಯಾಮ್‌: ಇಂಗ್ಲೆಂಡ್‌ ವಿರುದ್ಧ 2ನೇ ಟೆಸ್ಟ್‌ ಪಂದ್ಯಕ್ಕೂ ಮುನ್ನ ಭಾರತದ ತಾರಾ ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಅಭ್ಯಾಸ ಶಿಬಿರಕ್ಕೆ ಮರಳಿದ್ದಾರೆ. ಕಾರ್ಯದೊತ್ತಡ ಕಾರಣಕ್ಕೆ 2ನೇ ಪಂದ್ಯದಿಂದ ಬೂಮ್ರಾ ಹೊರಗುಳಿಯಲಿದ್ದಾರೆ ಎಂಬ ವರದಿಗಳ ನಡುವೆಯೇ ಅಭ್ಯಾಸ ಪುನಾರಂಭಿಸಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಭಾರತ ತಂಡದ ಆಟಗಾರರು ಬರ್ಮಿಂಗ್‌ಹ್ಯಾಮ್‌ನಲ್ಲಿ ಶುಕ್ರವಾರವೇ ಅಭ್ಯಾಸ ಆರಂಭಿಸಿದ್ದರು. ಆದರೆ ಬೂಮ್ರಾ ಹಾಗೂ ಪ್ರಸಿದ್ಧ್‌ ಕೃಷ್ಣ ಗೈರಾಗಿದ್ದರು. ಶನಿವಾರ ಇವರಿಬ್ಬರೂ ಕೆಲ ಕಾಲ ನೆಟ್ಸ್‌ನಲ್ಲಿ ಬೆವರಿಳಿಸಿದರು. ಮೊದಲ ದಿನ ಬ್ಯಾಟಿಂಗ್‌ ನಡೆಸಿದ್ದ ಮೊಹಮ್ಮದ್‌ ಸಿರಾಜ್‌ ಕೂಡಾ 2ನೇ ದಿನ ಬೌಲಿಂಗ್‌ ಪ್ರ್ಯಾಕ್ಟೀಸ್‌ ನಡೆಸಿದರು. ಆದರೆ ನಾಯಕ ಶುಭ್‌ಮನ್‌ ಗಿಲ್‌, ಉಪನಾಯಕ ರಿಷಭ್‌ ಪಂತ್‌, ಕೆ.ಎಲ್‌.ರಾಹುಲ್‌, ಯಶಸ್ವಿ ಜೈಸ್ವಾಲ್‌ ಅಭ್ಯಾಸ ನಡೆಸಲಿಲ್ಲ. ಇವರೆಲ್ಲರೂ ಶುಕ್ರವಾರ ಶಿಬಿರದಲ್ಲಿ ಪಾಲ್ಗೊಂಡಿದ್ದರು. 2ನೇ ಪಂದ್ಯ ಬುಧವಾರ ಆರಂಭಗೊಳ್ಳಲಿದೆ.