ಅಡಿಲೇಡ್‌(ಡಿ.03): ಅನುಭವಿ ಸ್ಪಿನ್ನರ್‌ ನೇಥನ್‌ ಲಯನ್‌ (5-69) ಹಾಗೂ ಜೋಶ್‌ ಹೇಜಲ್‌ವುಡ್‌ (3-63) ಅದ್ಭುತ ಪ್ರದರ್ಶನದ ನೆರವಿನಿಂದ ಆಸ್ಪ್ರೇಲಿಯಾ, ಪಾಕಿಸ್ತಾನ ವಿರುದ್ಧದ ಹಗಲು-ರಾತ್ರಿ 2ನೇ ಟೆಸ್ಟ್‌ ಪಂದ್ಯದಲ್ಲಿ ಇನ್ನು 1 ದಿನ ಬಾಕಿ ಇರುವಂತೆ ಇನ್ನಿಂಗ್ಸ್‌ ಮತ್ತು 48 ರನ್‌ಗಳ ಗೆಲುವು ಸಾಧಿಸಿದೆ. ಮೊದಲ ಟೆಸ್ಟ್‌ ಪಂದ್ಯದಲ್ಲೂ ಆಸ್ಪ್ರೇಲಿಯಾ, ಪಾಕ್‌ ವಿರುದ್ಧ ಇನ್ನಿಂಗ್ಸ್‌ ಮತ್ತು 5 ರನ್‌ಗಳ ಗೆಲುವು ಸಾಧಿಸಿತ್ತು. ಇದರೊಂದಿಗೆ 2 ಪಂದ್ಯಗಳ ಸರಣಿಯನ್ನು 2-0 ಯಲ್ಲಿ ಕ್ಲೀನ್‌ ಸ್ವೀಪ್‌ ಮಾಡಿದೆ.

ಇದನ್ನೂ ಓದಿ: ಅಂಡರ್ 19 ವಿಶ್ವಕಪ್: ಭಾರತ ತಂಡದಲ್ಲಿ ಇಬ್ಬರು ಕನ್ನಡಿಗರಿಗೆ ಸ್ಥಾನ!

4ನೇ ದಿನವಾದ ಸೋಮವಾರ 3 ವಿಕೆಟ್‌ಗೆ 39 ರನ್‌ಗಳಿಂದ 2ನೇ ಇನ್ನಿಂಗ್ಸ್‌ ಮುಂದುವರೆಸಿದ ಪಾಕಿಸ್ತಾನಕ್ಕೆ ಆರಂಭಿಕ ಶಾನ್‌ ಮಸೂದ್‌ (68), ಅಸಾದ್‌ ಶಫೀಕ್‌ (57), ಮೊಹಮದ್‌ ರಿಜ್ವಾನ್‌ (45) ರನ್‌ಗಳಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಇನ್ನುಳಿದ ಬ್ಯಾಟ್ಸ್‌ಮನ್‌ಗಳಿಂದ ನಿರೀಕ್ಷಿತ ಪ್ರದರ್ಶನ ಹೊರಹೊಮ್ಮಲಿಲ್ಲ. ಲಯನ್‌ ಅವರ ಸ್ಪಿನ್ನ ಹಾಗೂ ಹೇಜಲ್‌ವುಡ್‌ ರ ವೇಗದ ದಾಳಿಗೆ ಕ್ರೀಸ್‌ನಲ್ಲಿ ನೆಲೆಯೂರಲು ಸಾಧ್ಯವಾಗದೇ ಪೆವಿಲಿಯನ್‌ ಹಾದಿ ಹಿಡಿದರು. ಲಯನ್‌ 5 ವಿಕೆಟ್‌ ಪಡೆಯುವ ಮೂಲಕ ಟೆಸ್ಟ್‌ನಲ್ಲಿ 16ನೇ ಬಾರಿ ಹಾಗೂ ಪಾಕಿಸ್ತಾನ ವಿರುದ್ಧ ಮೊದಲ ಬಾರಿ ಈ ಸಾಧನೆ ಮಾಡಿದರು.

ಇದನ್ನೂ ಓದಿ: ಬಾಂಗ್ಲಾ ಕ್ರಿಕೆಟಿಗನ ರೀತಿ ಸಂಭ್ರಮಿಸಿದ ಅಶ್ವಿನ್; ಅಭಿಮಾನಿಗಳಿಂದ ಮಂಗಳಾರತಿ!

ಮೊದಲ ಇನ್ನಿಂಗ್ಸ್‌ನಲ್ಲಿ ಯಾಸಿರ್‌ ಶಾ (113) ಹಾಗೂ ಬಾಬರ್‌ ಅಜಾಂ (97) ರನ್‌ಗಳ ಹೊರತಾಗಿಯೂ 302 ರನ್‌ಗಳಿಗೆ ಆಲೌಟ್‌ ಆಗಿದ್ದ ಪಾಕಿಸ್ತಾನ, ಫಾಲೋ ಆನ್‌ ಹೇರಿಸಿಕೊಂಡು 2ನೇ ಇನ್ನಿಂಗ್ಸ್‌ನಲ್ಲೂ ನಿರೀಕ್ಷಿತ ಬ್ಯಾಟಿಂಗ್‌ ಪ್ರದರ್ಶನ ನೀಡದೆ ಸೋಲು ಅನುಭವಿಸಿದೆ. ಇದರೊಂದಿಗೆ ಆಸ್ಪ್ರೇಲಿಯಾ ನೆಲದಲ್ಲಿ ಪ್ರವಾಸಿ ತಂಡವೊಂದು ಸತತ 13ನೇ ಸೋಲು ಕಂಡಂತಾಗಿದೆ.

ಡೇವಿಡ್‌ ವಾರ್ನರ್‌ ಅವರ ದಾಖಲೆ (335) ತ್ರಿಶತಕ ಹಾಗೂ ಮಾರ್ನಸ್‌ ಲಬುಶೇನ್‌ (162) ರನ್‌ಗಳ ನೆರವಿನಿಂದ ಆಸ್ಪ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 589 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತ್ತು.

ಪಿಂಕ್‌ಚೆಂಡಲ್ಲಿ ಆಸೀಸ್‌ಗೆ ಸತತ 6ನೇ ಗೆಲುವು
ಪಾಕಿಸ್ತಾನ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಇನ್ನಿಂಗ್ಸ್‌, 48 ರನ್‌ ಜಯ ದಾಖಲಿಸುವ ಮೂಲಕ ಆಸ್ಪ್ರೇಲಿಯಾ ತಂಡ ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಸತತ 6ನೇ ಗೆಲುವು ದಾಖಲಿಸಿತು. ಅದು ಕೂಡ ಅಡಿಲೇಡ್‌ ಕ್ರೀಡಾಂಗಣದಲ್ಲಿ ನಡೆದ 4 ಟೆಸ್ಟ್‌ ಪಂದ್ಯಗಳಲ್ಲಿ ಆಸೀಸ್‌ ಜಯಭೇರಿ ಬಾರಿಸಿದೆ.

ಸ್ಕೋರ್‌: ಆಸ್ಪ್ರೇಲಿಯಾ 589/3, ಪಾಕಿಸ್ತಾನ 302 ಮತ್ತು 239/10
ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ: ಡೇವಿಡ್‌ ವಾರ್ನರ್‌